

ಮೈಸೂರು: ಸಕಾರಾತ್ಮಕ ಚಿಂತನೆಯಿಂದ ಯಶಸ್ಸು ಸಾಧ್ಯ ಎಂದು ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯ ಡಿಐಜಿ ರವಿ ಡಿ.ಚನ್ನಣ್ಣನವರ್ ತಿಳಿಸಿದರು.
ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರದಲ್ಲಿ ಮಂಗಳವಾರ ಆಯೋಜಿಸಿದ್ದ ಯುಜಿಸಿ ನೆಟ್, ಕೆ-ಸೆಟ್ ತರಬೇತಿ ಶಿಬಿರದಲ್ಲಿ ಮಾತನಾಡಿ, ಪ್ರತಿ ವ್ಯಕ್ತಿಯ ಬದುಕಿನಲ್ಲಿ ಎರಡು ರೀತಿಯ ಸೋಂಕುಗಳಿರುತ್ತವೆ.
ಒಂದು ನಕಾರಾತ್ಮಕ, ಮತ್ತೊಂದು ಸಕಾರಾತ್ಮಕ ಸೋಂಕು. ದುಶ್ಚಟ, ಸಮಯ ವ್ಯರ್ಥ ಮಾಡುವುದು ನಕಾರಾತ್ಮಕ ಸೋಂಕು. ಪುಸ್ತಕ ಹಿಡಿಯುವುದು, ಒಳ್ಳೆಯ ಸ್ನೇಹಿತರ ಒಡನಾಟ ಸಕಾರಾತ್ಮಕ ಅಂಶಗಳಾಗಿವೆ. ನಾವು ಉತ್ತಮವಾದದ್ದನ್ನೇ ಆಯ್ಕೆ ಮಾಡಿಕೊಳ್ಳಬೇಕು ಎಂದರು.
ದೇಶ, ರಾಜ್ಯಕ್ಕೆ ಪ್ರತಿ ವರ್ಷ ಯೋಜನೆ ರೂಪಿಸಲಾಗುತ್ತದೆ. ಅಂತೆಯೇ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸುವ ಅಭ್ಯರ್ಥಿಗಳಿಗೆ ವೇಳಾಪಟ್ಟಿ ಅತ್ಯಗತ್ಯ. ಇದು ಇಲ್ಲದಿದ್ದರೆ ಯಶಸ್ಸು ಅಸಾಧ್ಯ ಎಂದು ತಿಳಿಸಿದರು.
ಸ್ಪರ್ಧಾತ್ಮಕ ಪರೀಕ್ಷೆಗಾಗಿ 10 ವರ್ಷಗಳ ಪ್ರಶ್ನೆ ಪತ್ರಿಕೆ ಅಭ್ಯಾಸ ಮಾಡಬೇಕು. ಸಾಮಾನ್ಯ ಜ್ಞಾನ ಪತ್ರಿಕೆಗೆ ಗಮನ ಹರಿಸಬೇಕು. ಹಾಗೇ ಮರುಅಧ್ಯಯನ ಮಾಡಬೇಕು. ಎಲ್ಲ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸುವವರಿಗೆ ಈ ಸೂತ್ರ ಅವಶ್ಯ ಎಂದು ತಿಳಿಸಿದರು.
ಸ್ವಾಮಿ ವಿವೇಕಾನಂದರು ಸ್ವರ್ಗಕ್ಕೆ ದಾರಿಯಿದ್ದರೆ ನರಕದ ಮೂಲಕವೇ ಎಂದು ಹೇಳಿದ್ದಾರೆ. ಸಣ್ಣ ಹುದ್ದೆಗೆ ಸಣ್ಣ ಸಿದ್ಧತೆ, ದೊಡ್ಡ ಹುದ್ದೆಗೆ ದೊಡ್ಡ ಸಿದ್ಧತೆ ಬೇಕು. ಉತ್ತಮ ಸಮಾಜ ನಿರ್ಮಿಸುವ ಕನಸು ಹೊಂದಿದವರು ಉನ್ನತ ಹುದ್ದೆ ಪಡೆಯುವ ಗುರಿ ಹೊಂದಿರಬೇಕು ಎಂದು ರವಿ ಡಿ.ಚನ್ನಣ್ಣನವರ್ ಯುವಜನರನ್ನು ಹುರಿದುಂಬಿಸಿದರು.
ಏಳುಬೀಳುಗಳನ್ನು ಎದುರಿಸಿ
ಮುಕ್ತ ವಿವಿ ಕುಲಪತಿ ಪ್ರೊ.ಶರಣಪ್ಪ ವಿ.ಹಲಸೆ ಮಾತನಾಡಿ, ಸಾಧನೆಗೆ ಅನೇಕ ಏಳುಬೀಳು ಇರುತ್ತವೆ. ಅವುಗಳನ್ನು ಧೈರ್ಯದಿಂದ ಎದುರಿಸಿದರೆ ಏನನ್ನಾದರೂ ಸಾಧಿಸಬಹುದು. ಹೀಗಾಗಿ ಯಾರು ಬೇಕಾದರೂ ಯಶಸ್ಸು ಗಳಿಸಬಹುದು ಎಂದರು.
ನಿರಂತರ ಪ್ರಯತ್ನ, ಗಟ್ಟಿ ಮನಸ್ಸು ಮಾಡಿ ಅಧ್ಯಯನ ನಡೆಸಿದರೆ ಶ್ರಮಕ್ಕೆ ತಕ್ಕ ಫಲಿತಾಂಶ ಲಭಿಸುತ್ತದೆ. ಪೂರ್ವ ತಯಾರಿ ಆಧಾರದ ಮೇಲೆ ತಮ್ಮ ಅಧಿಕಾರ, ಸ್ಥಾನಮಾನಗಳು ದೊರೆಯುತ್ತದೆ ಎಂಬುದನ್ನು ಶಿಬಿರಾರ್ಥಿಗಳು ತಿಳಿದಿರಬೇಕು ಎಂದು ಹೇಳಿದರು.
ಕೇಂದ್ರದ ಸಂಯೋಜನಾಧಿಕಾರಿ ಜೈನಹಳ್ಳಿ ಸತ್ಯನಾರಾಯಣಗೌಡ, ಸಿದ್ದೇಶ್ ಹೊನ್ನೂರ್, ಗಣೇಶ ಕೆ.ಜಿ. ಕೊಪ್ಪಲು ಇದ್ದರು.