ಸಕಾರಾತ್ಮಕ ಚಿಂತನೆಯಿಂದ ಗುರಿ ತಲುಪಲು ಸಾಧ್ಯ

18-08-Shiva-4
ರಾಯಚೂರಿನ ಎಸ್‌ಎಸ್‌ಆರ್‌ಜಿ ಮಹಿಳಾ ಕಾಲೇಜಿನಲ್ಲಿ ಶುಕ್ರವಾರ ಏರ್ಪಡಿಸಿದ್ದ ವೃತ್ತಿ ಮಾರ್ಗದರ್ಶನ ಕಾರ್ಯಕ್ರಮದಲ್ಲಿ ಕಾಲೇಜು ಪ್ರಾಚಾರ್ಯ ಎಸ್.ಅಮರೇಗೌಡ ಮಾತನಾಡಿದರು. ದೇಶಪಾಂಡೆ ಸ್ಕಿಲ್ಲಿಂಗ್ ಸಂಸ್ಥೆ ಕಾರ್ಯನಿರ್ವಾಹಕ ನಿರ್ದೇಶಕ ಚರಣೆಕುಮಾರ, ಸಂಜಯ್ ಪವಾರ್, ಎಸ್.ದೀಪಾ, ಐಕ್ಯೂಎಸಿ ಸಂಯೋಜಕ ಸಂಜಯ್ ಪವಾರ್, ವಿದ್ಯಾರ್ಥಿ ಕಲ್ಯಾಣಾಕಾರಿ ಸಣ್ಣ ವೀರನಗೌಡ ಇದ್ದರು.
Published on

ರಾಯಚೂರು: ಬದ್ಧತೆ, ಶ್ರದ್ಧೆ, ನಿರಂತರ ಪರಿಶ್ರಮ ಮತ್ತು ಸಕಾರಾತ್ಮಕ ಚಿಂತನೆಯಿಂದ ಮಾತ್ರ ನಿಗದಿತ ಗುರಿ ತಲುಪಲು ಸಾಧ್ಯವಾಗುತ್ತಿದ್ದು, ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಯಶಸ್ಸು ಗಳಿಸಲು ಇವುಗಳ ಜತೆಗೆ ಆತ್ಮವಿಶ್ವಾಸ ಇರಬೇಕು ಎಂದು ಹುಬ್ಬಳ್ಳಿಯ ದೇಶಪಾಂಡೆ ಸ್ಕಿಲ್ಲಿಂಗ್ ಸಂಸ್ಥೆ ಕಾರ್ಯನಿರ್ವಾಹಕ ನಿರ್ದೇಶಕ ಚರಣೆಕುಮಾರ ಹೇಳಿದರು.
ಸ್ಥಳೀಯ ಎಸ್‌ಎಸ್‌ಆರ್‌ಜಿ ಮಹಿಳಾ ಕಾಲೇಜಿನಲ್ಲಿ ಪದವಿ ಅಂತಿಮ ವರ್ಷದ ವಿದ್ಯಾರ್ಥಿಗಳಿಗಾಗಿ ಶುಕ್ರವಾರ ಏರ್ಪಡಿಸಿದ್ದ ವೃತ್ತಿ ಮಾರ್ಗದರ್ಶನ ಕಾರ್ಯಕ್ರಮದಲ್ಲಿ ಮಾತನಾಡಿ, ಇಂದಿನ ಸ್ಪರ್ಧಾತ್ಕಮ ಯುಗದಲ್ಲಿ ಜ್ಞಾನಾರ್ಜನೆ ಜತೆಗೆ ಸಂವಹನ ಕೌಶಲ್ಯ ಬೆಳೆಸಿಕೊಳ್ಳುವುದು ಅಗತ್ಯವಾಗಿದೆ ಎಂದರು.
ವಿದ್ಯಾರ್ಥಿಗಳು ಆರಂಭದಲ್ಲಿಯೇ ಮುಂದಿನ ಉನ್ನತ ವ್ಯಾಸಂಗದ ಬಗ್ಗೆ ಯೋಚಿಸಿ ಅದರಂತೆ ಅಧ್ಯಯನ ನಡೆಸಿದರೆ ಸಾಧನೆಗೈಯಲು ಸಾಧ್ಯವಾಗಲಿದೆ. ಪದವಿ ನಂತರ ಬ್ಯಾಂಕಿಂಗ್ ಮತ್ತು ಎಲ್‌ಐಸಿ ಸೇರಿದಂತೆ ಇನ್ನಿತರೆಡೆ ಉದ್ಯೋಗಾವಕಾಶಗಳಿವೆ ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜು ಪ್ರಾಚಾರ್ಯ ಎಸ್.ಅಮರೇಗೌಡ ಮಾತನಾಡಿ, ಪದವಿ ಮುಗಿದ ನಂತರ ಮುಂದೇನು ಎನ್ನುವ ಬಗ್ಗೆ ಬಹಳಷ್ಟು ವಿದ್ಯಾರ್ಥಿಗಳಲ್ಲಿ ಗೊಂದಲವಿರುತ್ತದೆ. ಈ ನಿಟ್ಟಿನಲ್ಲಿ ಪದವಿ ನಂತರ ಯಾವ ಕ್ಷೇತ್ರಗಳಲ್ಲಿ ಉದ್ಯೋಗಾವಕಾಶಗಳಿವೆ. ಅವುಗಳಿಗೆ ಹೇಗೆ ತಯಾರಿ ಮಾಡಿಕೊಳ್ಳಬೇಕು ಎನ್ನುವ ಅರಿವು ಮೂಡಿಸುವ ನಿಟ್ಟಿನಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net