ಸಕಲೇಶಪುರದಲ್ಲಿ ಭಾರೀ ಮಳೆ: ಹೇಮಾವತಿ ಜಲಾಶಯಕ್ಕೆ ಒಳಹರಿವು ಹೆಚ್ಚಳ

ಸಕಲೇಶಪುರದಲ್ಲಿ ಭಾರೀ ಮಳೆ: ಹೇಮಾವತಿ ಜಲಾಶಯಕ್ಕೆ ಒಳಹರಿವು ಹೆಚ್ಚಳ
Published on

ಹಾಸನ:  ಜಿಲ್ಲೆಯಲ್ಲಿ ಮುಂಗಾರು ತಡವಾಗಿ ಆರಂಭವಾಗಿದ್ದು, ಗುರುವಾರ ಜಿಲ್ಲೆಯಾದ್ಯಂತ ದಿನವಿಡೀ ಮಳೆಯಾಗಿದ್ದು, ಶುಕ್ರವಾರ ಜಿಲ್ಲೆಯ ಕೆಲ ಭಾಗಗಳು ಸೇರಿದಂತೆ ಸಕಲೇಶಪುರ ತಾಲೂಕಿನಲ್ಲಿ ದಿನವಿಡೀ ಜಿಟಿ ಜಿಟಿ ಮಳೆ ಸುರಿಯಿತು.

ಮಲೆನಾಡು ಭಾಗದಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ ಹೇಮಾವತಿ ಜಲಾಶಯಕ್ಕೆ ಒಳಹರಿವಿನಲ್ಲಿ ಹೆಚ್ಚಳವಾಗಿದ್ದು, 4,444 ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಸಕಲೇಶಪುರ, ಚಿಕ್ಕಮಗಳೂರು, ಮೂಡಿಗೆರೆ ಭಾಗದಲ್ಲಿ ಉತ್ತಮ ಮಳೆಯಾಗುತ್ತಿರುವ ಹಿನ್ನಲೆಯಲ್ಲಿ ಇಷ್ಟು ದಿನ ಬರಡಾಗಿ ಕಾಣುತ್ತಿದ್ದ ಹೇಮಾವತಿ ನದಿಗೆ ಜೀವ ಕಳೆ ಬರುತ್ತಿದೆ.

ಸಕಲೇಶಪುರ ತಾಲ್ಲೂಕಿನ ಹೆತ್ತೂರಿನಲ್ಲಿ ಕಳೆದ 24 ಗಂಟೆಗಳಲ್ಲಿ 56.7 ಮಿ.ಮೀ ದಾಖಲೆ ಮಳೆಯಾಗಿದ್ದು, ಮತ್ತಷ್ಟು ಮಳೆ ಹೆಚ್ಚಾಗುವ ಸಾಧ್ಯತೆ ಇದೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಹಾಸನ, ಸಕಲೇಶಪುರ, ಆಲೂರು, ಬೇಲೂರು, ಅರಕಲಗೂಡು ಭಾಗದಲ್ಲಿ ಜಿಟಿ ಜಿಟಿ ಮಳೆಯಾಗುತ್ತಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಜಿಲ್ಲೆಯಲ್ಲಿ ಶನಿವಾರದವರೆಗೆ ಯೆಲ್ಲೊ ಅಲರ್ಟ್ ಘೋಷಣೆ ಮಾಡಲಾಗಿದೆ.

ಸಕಲೇಶಪುರ ತಾಲ್ಲೂಕು ಭಾಗದಲ್ಲಿ ಶುಕ್ರವಾರ ಬೆಳಿಗ್ಗೆಯಿಂದ ಸಾಧಾರಣವಾಗಿದ್ದ ಮಳೆ ಮಧ್ಯಾಹ್ನದ ನಂತರ ಬಿರುಸುಗೊಂಡು ಧಾರಾಕಾರವಾಗಿ ಸುರಿಯಿತು. ಯಸಳೂರು ಹೋಬಳಿಯ ರಾಗಿಪುರ ಗ್ರಾಮದ ಮಂಜಯ್ಯ ಅವರ ಮನೆ ಗೋಡೆ ಕುಸಿದಿದೆ. ಅದೇ ರೀತಿ ಬೆಳಗೋಡು ಸಮೀಪದ ಹೊಸಕೊಪ್ಪಲು ಗ್ರಾಮದ ಗಣೇಶ್ ಎಂಬುವವರ ಮನೆ ಮೇಲೆ ಮರ ಬಿದ್ದು ಜಖಂಗೊಂಡಿದೆ. ರಾತ್ರಿಪೂರ್ತಿ ಸತತವಾಗಿ ಮಳೆಯಾದ್ದರಿಂದ ಹಾನುಬಾಳು ಗ್ರಾಮದಲ್ಲಿ ಮಂಗಳವಾರ ರಾತ್ರಿ ಪರಮೇಶ್-ಕಮಲಾ ಎಂಬ ವೃದ್ಧ ದಂಪತಿಯ ಮನೆಯೊಂದರ ಮೇಲೆ ಮರ ಬಿದ್ದು ಮನೆ ಜಖಂಗೊಂಡಿದ್ದು, ದಂಪತಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಹೆತ್ತೂರು ಸಮೀಪದ ಬನ್ನಹಳ್ಳಿ ಗ್ರಾಮದ ಸೋಮಶೇಖರ್ ಎಂಬುವರ ಮನೆ ಗೋಡೆ ಕುಸಿದು ಬಿದ್ದಿದೆ.

ಮಳೆ- ಗಾಳಿಯಿಂದ ಹಾನಿ

ಹೆತ್ತೂರು ಬೆಳಗೋಡು, ಹಾನುಬಾಳು, ಬಿಸಿಲೆ ಮಾಗೇರಿ, ಅಗ್ನಿ ಚಿನ್ನಹಳ್ಳಿ, ಹೊಸಳ್ಳಿ, ಕಾಗಿನೆರೆ, ಸುತ್ತಮುತ್ತ ಭಾರಿ ಮಳೆಯಾಗಿದೆ. ತಾಲೂಕಿನ ಹಲವು ಭಾಗಗಳಲ್ಲಿ ಮಳೆ ಜತೆಗೆ ಗಾಳಿ ಹೆಚ್ಚಾಗಿದ್ದು ಕೆಲವು ಗ್ರಾಮೀಣ ಪ್ರದೇಶದಲ್ಲಿ ಮರಗಳು ಧರೆಗುರುಳಿವೆ. ಬಿಸಿಲೆ- ಸುಬ್ರಹ್ಮಣ್ಯ ಸಂಪರ್ಕಿಸುವ ರಸ್ತೆ ಮೇಲೆ ಮರ ಬಿದ್ದು ಕೆಲ ಸಮಯ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು. ಹಾಗೂ ಮಾಗೇರಿ ಸೋಮವಾರಪೇಟೆ ರಸ್ತೆಯಲ್ಲಿ ಕಿರು ಸೇತುವೆಯಲ್ಲಿ ನೀರು ತುಂಬಿದ್ದು ಮಳೆ ಇದೇ ರೀತಿ ಮುಂದುವರೆದರೆ ಸೇತುವೆ ಮುಚ್ಚುವ ಸಂಭವವಿದೆ. ಗ್ರಾಮೀಣ ಭಾಗದ ಕೆಲವು ಭಾಗಗಳಲ್ಲಿ ವಿದ್ಯುತ್ ಕಂಬಗಳು ನೆಲಕ್ಕುರುಳಿದ್ದು ವಿದ್ಯುತ್ ಸಮಸ್ಯೆ ಎದುರಾಗಿದೆ.

ಹೆತ್ತೂರು ಹೋಬಳಿಯ ಸುತ್ತಮುತ್ತಲಿನ ಗ್ರಾಮಗಳಾದ ಬಾಳೆಹಳ್ಳ, ಮಂಕನಹಳ್ಳಿ, ಹೊಂಗಡಹಳ್ಳ, ಪಾಲಹಳ್ಳಿ, ಹಿರದನಹಳ್ಳಿ, ಮಾಗೇರಿ, ಬಿಸ್ಲೆ, ಹುದಿನೂರುನಲ್ಲಿ ಕಳೆದ ಎರಡು ದಿನಗಳಿಂದ ವಿದ್ಯುತ್ ಇಲ್ಲದೆ ಗ್ರಾಮಸ್ಥರು ಕತ್ತಲೆಯಲ್ಲಿ ಸಮಯ ಕಳೆಯುವ ಪರಿಸ್ಥಿತಿ ಉಂಟಾಗಿದೆ. ತಾಲ್ಲೂಕಿನ ಹುಲ್ಲಹಳ್ಳಿ ಸಮೀಪ ರಸ್ತೆ ಬದಿಯ ಮರವೊಂದು ವಿದ್ಯುತ್ ತಂತಿಯ ಮೇಲೆ ಬಿದ್ದು ಹುಲ್ಲಹಳ್ಳಿ ಸುತ್ತಮುತ್ತ ಗುರುವಾರ ಮುಂಜಾನೆಯಿಂದಲೇ ವಿದ್ಯುತ್ ಪೂರೈಕೆ ಇಲ್ಲದೆ ಗ್ರಾಮಸ್ಥರು ಪರದಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net