ಹಾಸನ: ಸಕಲೇಶಪುರ ತಾಲೂಕು ರಾಜೇಂದ್ರಪುರ ಗ್ರಾಮದಲ್ಲಿ ಸರ್ಕಾರಿ ಭೂಮಿ ಒತ್ತುವರಿ ಮಾಡಿಕೊಂಡು ಚೋಳರ ಕಾಲದ ಬೀರಲಿಂಗೇಶ್ವರ ದೇವಸ್ಥಾನದ ಮಾಸ್ತಿಕಲ್ಲು ಒಡೆದು ಹಾಕಿರುವವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿ ವಿಶ್ವಹಿಂದು ಪರಿಷತ್ ನೇತೃತ್ವದಲ್ಲಿ ಸುತ್ತಮುತ್ತಲಿನ ಗ್ರಾಮಸ್ಥರು ಗುರುವಾರ ಬಾಳ್ಳುಪೇಟೆಯಲ್ಲಿ ಪ್ರತಿಭಟನೆ ನಡೆಸಿದರು.
ಗ್ರಾಮದ ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನದ ಬಳಿಯಿಂದ ಬಿ.ಜಿ.ಗುರುಪ್ಪ ವೃತ್ತದವರೆಗೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು ಸರ್ಕಾರಿ ಭೂಮಿ ಒತ್ತುವರಿ ತೆರವುಗೊಳಿಸಿ ಹಿಂದುಗಳ ದೇವಸ್ಥಾನವನ್ನು ರಕ್ಷಿಸಬೇಕು ಎಂದು ಆಗ್ರಹಿಸಿದರು.
ರಾಜೇಂದ್ರಪುರ ಗ್ರಾಮದ ಸರ್ವೆ ನಂಬರ್ 20ರಲ್ಲಿ 800 ವರ್ಷಗಳಿಗೂ ಹಿಂದಿನ ಐತಿಹಾಸಿಕ ಶಾಸನಗಳು, ಮಾಸ್ತಿಗಲ್ಲುಗಳಿವೆ. ಸುತ್ತಲಿನ 20ಕ್ಕೂ ಹೆಚ್ಚು ಗ್ರಾಮಗಳ ಜನರು ಅಲ್ಲಿನ ಬೀರಲಿಂಗೇಶ್ವರ ದೇವಸ್ಥಾದಲ್ಲಿ ಪೂಜೆ ಸಲ್ಲಿಸುತ್ತಾ ಬಂದಿದ್ದಾರೆ. ಈಚೆಗೆ ಆ ಭೂಮಿಯನ್ನು ಒತ್ತುವರಿ ಮಾಡಿರುವ ಮುಸ್ಲಿಂ ಸಮುದಾಯದ ಗೂಂಡಾಗಳು ಅಕ್ರಮವಾಗಿ ಆ ಭೂಮಿಯನ್ನು ಒತ್ತುವರಿ ಮಾಡಿದ್ದಲ್ಲದೆ, ಕೋಮುಗಲಭೆ ಸೃಷ್ಟಿಸುವ ಉದ್ದೇಶದಿಂದ ದೇವಸ್ಥಾನವನ್ನು ಒಡೆದು ಹಾಕಿದ್ದಾರೆ ಎಂದು ಆರೋಪಿಸಿದರು.
ಈ ಬಗ್ಗೆ ದೂರು ನೀಡಿದರೂ ಕಂದಾಯ ಇಲಾಖೆ ಅಧಿಕಾರಿಗಳು ಯಾವುದೇ ಕ್ರಮಕೈಗೊಂಡಿಲ್ಲದ ಕಾರಣ ಚಳವಳಿಗೆ ಮುಂದಾಗಬೇಕಿದೆ. ಸರ್ಕಾರ ಕೂಡಲೇ ಮುಸ್ಲಿಂ ಒತ್ತುವರಿದಾರರನ್ನು ತೆರವುಗೊಳಿಸಿ ಅಲ್ಲಿನ ದೇವಸ್ತಾನವನ್ನು ಪುನರುಜ್ಜೀವನ ಮಾಡಬೇಕು. ಇಲ್ಲವಾದರೆ ಹೋರಾಟ ತೀವ್ರಗೊಳಿಸಲಾಗುವುದು ಎಂದು ಎಚ್ಚರಿಸಿದರು.
ವಿಎಚ್ ಪಿ ಮುಖಂಡ ರಘು, ಬಾಳ್ಳುಗೋಪಾಲ್, ಬಿ.ಎಸ್.ಮಂಜುನಾಥ್ ಮುಂತಾದವರು ನೇತೃತ್ವ ವಹಿಸಿದ್ದರು.