ಸಕಲ ಜೀವರಾಶಿಗಳಿಗೂ ಪರಿಸರ ಅವಶ್ಯಕ

Anupama
Published on

ಚಿತ್ರದುರ್ಗ: ಪರಿಸರ ಸಕಲ ಜೀವರಾಶಿಗಳಿಗೂ ನೀಡಿರುವ ಕೊಡುಗೆ ಅನನ್ಯ. ಅದರ ಋಣ ತೀರಿಸಲು ಎಂದಿಗೂ ಆಗದು. ಅದಿಲ್ಲದೆ, ಬದುಕಲು ಸಾಧ್ಯವಿಲ್ಲ. ಹೀಗಾಗಿ ಅತ್ಯಂತ ಅವಶ್ಯಕವಾಗಿದೆ ಎಂದು ಹಾಸ್ಯ, ಪೋಷಕ ನಟ ದೊಡ್ಡಣ ಸಲಹೆ ನೀಡಿದರು.

ಜೋಗಿಮಟ್ಟಿ ವನ್ಯಧಾಮದಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಜೋಗಿಮಟ್ಟಿ ರಸ್ತೆ ಮಾಸ್ತಮ್ಮ ಬಡಾವಣೆಯ ಅನುಪಮಾ ಇಂಟರ್ ನ್ಯಾಷನಲ್ ಪಬ್ಲಿಕ್ ಸ್ಕೂಲ್‌ನಿಂದ ಗುರುವಾರ ಹಮ್ಮಿಕೊಂಡಿದ್ದ ಸಸಿ ನೆಡುವ ಕಾರ್ಯಕ್ರಮದಲ್ಲಿ ಮಾತನಾಡಿದರು.

ಪ್ರಾಕೃತಿಕ ಸಂಪತ್ತಿನಿಂದ ಪಡೆದುಕೊಂಡಿದ್ದೆ ಹೆಚ್ಚಾಗಿದೆಯೇ ಹೊರತು ಮಾನವರ ಕೊಡುಗೆ ಕಡಿಮೆ ಇದೆ. ದುರಾಸೆ ಕಾರಣಕ್ಕೆ ಪರಿಸರ ಹಾಳಾಗುತ್ತಿದೆ. ಅದನ್ನು ಉಳಿಸುವ ಅನಿವಾರ್ಯತೆ ಎದುರಾಗಿದೆ ಎಂದು ಕಿವಿಮಾತು ಹೇಳಿದರು.

ವಿದ್ಯಾರ್ಥಿ ದಿಸೆಯಲ್ಲೇ ಪರಿಸರದ ಕುರಿತು ಕಾಳಜಿ ಹೆಚ್ಚಿಸಬೇಕು. ಆಗ ಮಾತ್ರ ದೇಶದ ಭಾವಿ ಪ್ರಜೆಗಳಾಗಲಿರುವ ಯುವಸಮೂಹ ಅದನ್ನು ರಕ್ಷಿಸಿ, ಸುಂದರವಾಗಿ ಇಟ್ಟುಕೊಳ್ಳಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.

ಇದೇ ವೇಳೆ ನಮ್ಮ ಭೂಮಿ ನಮ್ಮ ಭವಿಷ್ಯ, ನಾವು ನಮ್ಮ ಪೀಳಿಗೆಯ ಪುನಃಸ್ಥಾಪನೆ ಶೀರ್ಷಿಕೆಯಡಿ ವಿದ್ಯಾರ್ಥಿಗಳಿಂದ ಸಸಿಗಳನ್ನು ನೆಟ್ಟು ನೀರೆರೆಯುವ ಕಾರ್ಯಕ್ಕೆ ಚಾಲನೆ ನೀಡಲಾಯಿತು.

ಆರ್‌ಎಫ್‌ಒ ವಸಂತ್‌ಕುಮಾರ್, ಉಪವಲಯ ಅರಣ್ಯಾಧಿಕಾರಿಗಳಾದ ರಾಮ್‌ದಾಸ್, ಚಾಂದ್‌ಬಾಷಾ, ದಾದಾಪೀರ್, ಅನುಪಮಾ ಇಂಟರ್ ನ್ಯಾಷನಲ್ ಪಬ್ಲಿಕ್ ಸ್ಕೂಲ್ ಕಾರ್ಯದರ್ಶಿಗಳಾದ ಎಸ್. ಭಾಸ್ಕರ್, ಎಸ್.ಬಿ. ರಕ್ಷಣ್, ಪ್ರಾಚಾರ್ಯ ಸಿ.ಡಿ. ಸಂಪತ್‌ಕುಮಾರ್, ಉದ್ಯಮಿಗಳಾದ ಸೈಟ್‌ಬಾಬು, ಗೋಪಿಕೃಷ್ಣ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net