ಸಿಎಂ ಹೇಳಿಕೆಗೆ ನೇಹಾಳ ತಂದೆ ಸಿಡಿಮಿಡಿ

New Niranjan New
Published on

ಹುಬ್ಬಳ್ಳಿ : ವಿದ್ಯಾರ್ಥಿನಿ ನೇಹಾ ಹಿರೇಮಠ ಹತ್ಯೆಗೆ ರಾಜ್ಯವ್ಯಾಪಿ ಆಕ್ರೋಶ ವ್ಯಕ್ತವಾಗಿದೆ. ಇಂಥ ವೇಳೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೀಡಿರುವ ಹೇಳಿಕೆ ನೇಹಾಳ ತಂದೆ ನಿರಂಜನ ಹಿರೇಮಠ ಅವರನ್ನು ಕೆರಳಿಸಿದೆ. ಮಹಾನಗರ ಪಾಲಿಕೆಯ ಕಾಂಗ್ರೆಸ್ ಸದಸ್ಯರೂ ಆಗಿರುವ ನೇಹಾಳ ತಂದೆ ನಿರಂಜನ ಸಿಎಂಗೆ ತಿರುಗೇಟು ನೀಡಿದ್ದಾರೆ. ‘ನಾನು ಸಹ ಕಾಂಗ್ರೆಸ್ ಕಾರ್ಯಕರ್ತ ಇದ್ದೇನೆ. ನೀವು ಏನು ಮಾತನಾಡುತ್ತಿದ್ದೀರಿ ಎಂಬುದನ್ನು ಅರ್ಥ ಮಾಡಿಕೊಳ್ಳಿ’ ಎಂದು ಆಕ್ರೋಶದಿಂದ ಹೇಳಿದ್ದಾರೆ.

‘ವಿದ್ಯಾರ್ಥಿನಿ ನೇಹಾ ಹಿರೇಮಠ ಹತ್ಯೆಗೆ ವೈಯಕ್ತಿಕ ಕಾರಣ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ. ‘ಇದರಲ್ಲಿ ವೈಯಕ್ತಿಕ ಕಾರಣ ಏನಿದೆ ? ನಾನೇನಾದರೂ ಕೊಲೆಗಡುಕನ ಕುಟುಂಬದವರೊಂದಿಗೆ ವ್ಯವಹಾರ ಇಟ್ಟುಕೊಂಡಿದ್ದೇನಾ ? ಅಥವಾ ನನ್ನ ಮಗಳು ಏನಾದರೂ ವ್ಯವಹಾರ ಮಾಡಿದ್ದಳೇ ? ಅವರೇನಾದರೂ ನನ್ನ ಸಂಬಂಧಿಕರಾ ? ವೈಯಕ್ತಿಕ ಕಾರಣ ಎಂದರೆ ಏನರ್ಥ ?’ ಎಂದು ನಿರಂಜನ ಹಿರೇಮಠ ಪ್ರಶ್ನಿಸಿದ್ದಾರೆ.

ವೈಯಕ್ತಿಕ ಕಾರಣ ಇದ್ದಿದ್ದರೆ ನನ್ನ ಮಗಳ ಕೊಲೆ ಏಕೆ ಆಗುತ್ತಿತ್ತು ? ನನ್ನ ಕುಟುಂಬದಲ್ಲಿ ದುಃಖ ಇದೆ. ಇಂತಹ ಹೇಳಿಕೆ ನೀಡುವ ಮೂಲಕ ಇಡೀ ರಾಜ್ಯದ ಎದುರು ನನ್ನ ಮತ್ತು ನನ್ನ ಕುಟುಂಬದ ಮರ್ಯಾದೆ ತೆಗೆಯಬೇಡಿ ಎಂದು ಮನವಿ ಮಾಡಿದ್ದಾರೆ.

ಕೊಲೆಗಡುಕನನ್ನು ಪೊಲೀಸರು ಬಂಧಿಸಿದ್ದಾರೆ. ಆತನೊಂದಿಗೆ ಇನ್ನೂ ನಾಲ್ಕು ಜನ ಇದ್ದಾರೆ. ಅವರನ್ನೂ ಅರೆಸ್ಟ್ ಮಾಡಿಸಿ. ಕೊಲೆಗಡುಕನನ್ನು ಬಂಧಿಸಿ ಎಂದು ಒತ್ತಾಯಿಸಿದ್ದಾರೆ. ಈ ಕೊಲೆ ಏಕಾಏಕಿ ನಡೆದಿದ್ದಲ್ಲ. ಇದರ ಹಿಂದೆ ಕೆಲವು ದಿನಗಳ ಷಡ್ಯಂತ್ರ ಅಡಗಿದೆ. ಆಕೆಯನ್ನು ಬುಟ್ಟಿಯಲ್ಲಿ ಹಾಕಿಕೊಳ್ಳಬೇಕು ಇಲ್ಲವೇ ಕೊಲೆ ಮಾಡಬೇಕು ಎಂದು ಕೊಲೆಗಡುಕರು ಯೋಜನೆ ರೂಪಿಸಿದ್ದರು ಎಂದು ದೂರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net