ಸಂಸ್ಥೆ ಚುನಾವಣೆಗೂ ಕೋವಿಡ್ ಸಂಕಷ್ಟ

Basavarj Ingin
Published on

ವಿಜಯವಾಣಿ ವಿಶೇಷ ಕಲಬುರಗಿ
ಹೈದರಾಬಾದ್ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ ಚುನಾವಣೆಗಾಗಿ ಬಹುತೇಕ ಪ್ರಕ್ರಿಯೆ ಪೂರ್ಣಗೊಂಡಿದ್ದು, ಚುನಾವಣೆ ನಡೆಯುವುದೊಂದೇ ಬಾಕಿ ಇದೆ. ಆದರೆ ಕೋವಿಡ್-19 ಹಿನ್ನೆಲೆಯಲ್ಲಿ ಚುನಾವಣಾ ಪ್ರಕ್ರಿಯೆಗೆ ಬ್ರೇಕ್ ಬಿದ್ದಿದೆ.
3500 ಸದಸ್ಯರನ್ನು ಹೊಂದಿರುವ ದೊಡ್ಡ ಸಂಸ್ಥೆ ಇದಾಗಿದೆ. ಸಂಸ್ಥೆ ಅಧ್ಯಕ್ಷ ಹುದ್ದೆಗೆ ಮೂವರು ಕಣದಲ್ಲಿದ್ದು, ಈ ಪೈಕಿ ಪ್ರಶಾಂತ ಮಾನಕರ್, ಅಮರನಾಥ.ಸಿ.ಪಾಟೀಲ್, ಬಸವರಾಜ ಹಡಗಿಲ್ ಸೇರಿದ್ದಾರೆ. ಉಪಾಧ್ಯಕ್ಷ ಹುದ್ದೆಗೆ ರಾಜಶೇಖರ ಪಾಟೀಲ್ ಬೆಡಸೂರ್ ಕಣದಲ್ಲಿದ್ದು, ಈ ಹುದ್ದೆಗೆ ಇವರೊಬ್ಬರೇ ಅಭ್ಯರ್ಥಿಯಾಗಿರುವುದರಿಂದ ಅವಿರೋಧ ಆಯ್ಕೆ ಬಹುತೇಕ ಖಚಿತವಾಗಿದೆ.
ಕಾರ್ಯದರ್ಶಿ ಹುದ್ದೆಗೆ ಶರಣಬಸಪ್ಪ ಪಪ್ಪ, ಮಂಜುನಾಥ ಜೇವರ್ಗಿ ಕಣದಲ್ಲಿದ್ದಾರೆ. ಜಂಟಿ ಕಾರ್ಯದರ್ಶಿ ಹುದ್ದೆಗೆ ಅಮಿತ್ ಪರಮಾರ್, ಭೀಮಾಶಂಕರ ಪಾಟೀಲ್ ಕಣದಲ್ಲಿ ಉಳಿದಿದ್ದಾರೆ. ಖಜಾಂಚಿ ಹುದ್ದೆಗೆ ಏಕೈಕ ಅಭ್ಯರ್ಥಿಯಾಗಿರುವ ಸಿಎ ಗುರುದೇವ ದೇಸಾಯಿ ಆಯ್ಕೆ ಬಹುತೇಕ ಖಚಿತವಾದಂತಾಗಿದೆ.
15 ಜನರಿರುವ ಆಡಳಿತ ಮಂಡಳಿ ಸದಸ್ಯ ಸ್ಥಾನಕ್ಕೆ 21 ಜನ ನಾಮಪತ್ರ ಸಲ್ಲಿಸಿದ್ದಾರೆ. ಕಾರ್ಪೋರೇಟ್ ಸೆಕ್ಟರ್ಗೆ ಉದ್ಯಮಿ ಕೈಲಾಶ.ಬಿ.ಪಾಟೀಲ್, ಚನ್ನಬಸಯ್ಯ ನಂದಿಕೋಲ್ ಸ್ಪರ್ಧೆಯಲ್ಲಿದ್ದಾರೆ. ಮಫ್ಯೂಜಲ್ ಸೆಕ್ಟರ್ನಲ್ಲಿ ಶರಣು ಬಿರಾಳ, ಸೈಯದ್ ನಿಜಾಮುದ್ದೀನ್ ಚಿಸ್ತಿ, ರಾಮಚಂದ್ರ ಕೋಸಗಿ, ಮಲ್ಲಣಗೌಡ ಪಾಟೀಲ್ ಗಂವಾರ, ಕರುಣೇಶ ಘಂಟಿ ಸ್ಪರ್ಧೆಯಲ್ಲಿದ್ದು, ಈ ಪೈಕಿ ಮೂರು ಜನ ಆಯ್ಕೆಯಾಗಬೇಕಿದೆ.
ಈಗಾಗಲೇ ನಾಮಪತ್ರ ಸಲ್ಲಿಕೆ, ಪರಿಶೀಲನೆ, ನಾಮಪತ್ರ ವಾಪಸ್ ಪಡೆಯುವುದೂ ಸೇರಿ ಬಹುತೇಕ ಪ್ರಕ್ರಿಯೆ ಪೂರ್ಣಗೊಂಡಿದ್ದು, ಚುನಾವಣೆಯೊಂದೇ ಬಾಕಿ ಇದೆ. ಕೋವಿಡ್-19 ಹಿನ್ನೆಲೆಯಲ್ಲಿ ಚುನಾವಣೆ ಪ್ರಕ್ರಿಯೆ ಸ್ಥಗಿತಗೊಳಿಸುವಂತೆ ಜಿಲ್ಲಾಧಿಕಾರಿ ಸೂಚಿಸಿದ್ದರು. ಇದೀಗ ಮತ್ತೊಂದು ಬಾರಿ ಜಿಲ್ಲಾಧಿಕಾರಿ ಪರವಾನಿಗೆ ಪಡೆದು ಚುನಾವಣೆ ನಡೆಸಬೇಕಿದೆ.
ಒಂದು ಹಂತದಲ್ಲಿ ಎಲ್ಲರೂ ಒಟ್ಟಿಗೆ ಸೇರಿ ಚರ್ಚಿಸಿ ಒಮ್ಮತದ ಮೂಲಕ ಅಭ್ಯರ್ಥಿಗಳನ್ನು ಅವಿರೋಧ ಆಯ್ಕೆ ಮಾಡುವ ಪ್ರಯತ್ನವೂ ನಡೆಯಿತು. ಇದರಲ್ಲಿ ಬಹುತೇಕರು ಒಪ್ಪಿ ತಮ್ಮ ನಾಮಪತ್ರ ವಾಪಸ್ ಪಡೆದಿದ್ದರು. ಇನ್ನೂ ಕೆಲವರು ಈ ಪ್ರಕ್ರಿಯೆಗೆ ಒಪ್ಪಿಗೆ ಸೂಚಿಸಲಿಲ್ಲ. ಉದ್ದೇಶ ಈಡೇರಲಿಲ್ಲವಾದ್ದರಿಂದ, ಒಮ್ಮತ ಅಭಿಪ್ರಾಯ ಮೂಡಿಬರಲಿಲ್ಲ ಎಂದಾಗ ನಾಮಪತ್ರ ವಾಪಸ್ ಪಡೆದಿದ್ದ ಅಭ್ಯರ್ಥಿಗಳಿಗೆ ಅವರವರ ನಾಮಪತ್ರ ಅವರಿಗೆ ನೀಡಲಾಗಿದೆ. ಇದರಲ್ಲಿ ಕೆಲವರು ಸ್ಪರ್ಧೆಗೆ ಇಳಿದರೆ, ಇನ್ನೂ ಕೆಲವರು ಹಿಂದೆ ಸರಿದಿದ್ದಾರೆ.

ಏಪ್ರಿಲ್ 1ಕ್ಕೆ ಸಂಸ್ಥೆಯ ಅವಧಿ ಪೂರ್ಣಗೊಂಡಿದೆ. ಮಾರ್ಚಲ್ಲೇ ಚುನಾವಣೆ ಆಗಬೇಕಿತ್ತು. ಕೋವಿಡ್ ಕಾರಣದಿಂದ ಆಗಲಿಲ್ಲ. ಅವಿರೋಧ ಆಯ್ಕೆ ಮಾಡಲು ಹಿರಿಯರು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ಚುನಾವಣೆ ಬಹುತೇಕ ಪ್ರಕ್ರಿಯೆ ಪೂರ್ಣಗೊಂಡಿದೆ. ಇದೀಗ ಡಿಸಿಯವರು ಗ್ರೀನ್ಸಿಗ್ನಲ್ ನೀಡಿದರೆ ಚುನಾವಣೆ ಮಾಡಲಾಗುವುದು.
| ಬಸವರಾಜ ಇಂಗಿನ್
ಚುನಾವಣಾಧಿಕಾರಿ ಎಚ್ಕೆಸಿಸಿಐ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net