ಸಂಸ್ಕೃತಿಯ ಬಗ್ಗೆ ಅಭಿಮಾನವಿರಲಿ

9 vikram 6
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ವನವಾಸಿ, ಗ್ರಾಮವಾಸಿ, ನಗರವಾಸಿಗಳೆಲ್ಲರೂ ಭಾರತವಾಸಿಗಳಾದಾಗ ಭಾರತ ಒಂದಾಗಲು ಸಾಧ್ಯ. ಒಂದು ದೇಶದ ನೈಜ ಚರಿತ್ರೆ ಓದುವ ಸೌಭಾಗ್ಯ ನಮ್ಮದಾಗಿದೆ. ಸಮಾಜದ ಸಂಸ್ಕೃತಿಯ ಬಗ್ಗೆ ನಮಗೆಲ್ಲರಿಗೂ ಅಭಿಮಾನವಿರಬೇಕು ಎಂದು ವಿಧಾನಪರಿಷತ್ ಸದಸ್ಯ ಶಾಂತಾರಾಮ ಸಿದ್ದಿ ಅಭಿಪ್ರಾಯಪಟ್ಟರು.
ನಗರದ ಆಲೂರು ವೆಂಕಟರಾವ್ ಭವನದಲ್ಲಿ ಭಾನುವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ಬೆಂಗಳೂರಿನ ರಾಷ್ಟ್ರೋತ್ಥಾನ ಸಾಹಿತ್ಯದಿಂದ ಪ್ರಕಟಿಸಿದ, ಮನೋಹರ ನಾಯಕ ರಚಿಸಿದ ‘ಜಮಗೋಡಿನ ಸುತ್ತ’ ಪುಸ್ತಕವನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಸ್ವಾತಂತ್ರೃ ಹೋರಾಟದಲ್ಲಿ ಹಲಗಲಿ ವೀರರು, ಕುಮಾರರಾಮ, ರಾಮಾ ಹವ್ಸಿ ಇನ್ನೂ ಅನೇಕ ವನವಾಸಿ ವೀರರು ಭಾಗವಹಿಸಿದ್ದಾರೆ. ಮಹಾತ್ಮರ ಅಥವಾ ಒಂದು ಸಮಯದ ಸಂಸ್ಕೃತಿಯನ್ನು, ಮೌಲ್ಯವನ್ನು ಉಳಿಸಿಕೊಳ್ಳಲು ಕೃತಿಯನ್ನು ರಚಿಸುವುದು ಅನಿವಾರ್ಯ. ಸಾಹಿತ್ಯ ಓದಬೇಕು. ಸಾಧ್ಯವಾಗದೇ ಹೋದರೆ ಓದುವವರ ಸಹವಾಸವನ್ನಾದರೂ ಮಾಡಬೇಕು ಎಂದರು.
ರಾಷ್ಟ್ರಭಕ್ತಿ ಮೂಡಿಸುವಲ್ಲಿ ರಾಷ್ಟ್ರೋತ್ಥಾನದ ಕಾರ್ಯ ಅದ್ವಿತೀಯವಾಗಿದೆ. ವಿಶಾಲ ಕರ್ನಾಟಕದಲ್ಲಿ ವಿವಿಧ ಶೈಲಿಯ ಭಾಷೆ ಆಹಾರ ಪದ್ಧತಿ ಕಾಣುತ್ತವೆ. ಅಂತಹ ಪ್ರಾದೇಶಿಕತೆಯ ಚಿತ್ರಣವನ್ನು ಈ ಕೃತಿ ಕಟ್ಟಿಕೊಡುತ್ತದೆ. ಈ ರೀತಿಯ ಕೃತಿಗಳಿಂದಲೇ ನಮ್ಮ ಸಂಸ್ಕೃತಿಯ ಮಹತ್ವ ಮುಂದಿನ ಪೀಳಿಗೆಗೆ ತಿಳಿಸಲು ಸಾಧ್ಯ ಎಂದರು.
ಪುಸ್ತಕದ ಕುರಿತು ಸಾಹಿತಿ ಕೆ.ಎಚ್. ನಾಯಕ ಮಾತನಾಡಿ, ರಾಷ್ಟ್ರೋತ್ಥಾನದಿಂದ ಹೊರಬರುವ ಪುಸ್ತಕಗಳು ಮೌಲ್ಯಯುತವಾಗಿರುತ್ತವೆ. ಈ ಪುಸ್ತಕದಲ್ಲಿ ಸ್ಥಳ ಚರಿತ್ರೆಯನ್ನು, ನಾಡವ ಸಮುದಾಯದ ಸಂಸ್ಕೃತಿ ತಿಳಿಸುವ ಕೃತಿ ಮತ್ತು ಇದು ಸತ್ಯಾಧಾರಿತ ಘಟನೆಯುಳ್ಳ ಪುಸ್ತಕವೂ ಆಗಿದೆ. ಕೃತಿಯಲ್ಲಿ ಲೇಖನ, ಕಥೆ, ಕಾದಂಬರಿ ಹೀಗೆ ಎಲ್ಲ ಸಾಹಿತ್ಯದ ಶೈಲಿ ಕಾಣಬಹುದು. ಇದರಲ್ಲಿನ ಕೆಲವು ಕಥೆಗಳು ಸಿನೆಮಾ ಮಾಡಲು ಸಹ ಯೋಗ್ಯವಾಗಿವೆ. ಅಂಕೋಲಾ ಹಾಗೂ ಕರಾವಳಿ ಪ್ರದೇಶಗಳ ಇತಿಹಾಸ, ಪ್ರಾಮುಖ್ಯತೆ ಹೆಚ್ಚಿನ ವಿವರಣೆಗೊಳಪಟ್ಟಿವೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಧಾರವಾಡದ ಬಹುಶಾಸ್ತ್ರೀಯ ವಿಕಾಸ ಸಂಶೋಧನಾ ಕೇಂದ್ರದ ನಿರ್ದೇಶಕ ಪ್ರೊ. ಬಸವಪ್ರಭು ಜಿರ್ಲಿ ಮಾತನಾಡಿ, ಪ್ರಕೃತಿ, ಸಂಸ್ಕೃತಿ, ಕೃಷಿ ಇವು ಒಂದಕ್ಕೊಂದು ಪೂರಕವಾಗಿದೆ. ಪ್ರತಿಯೊಬ್ಬ ವ್ಯಕ್ತಿಯೂ ಸಾಹಿತ್ಯ, ಸಂಗೀತ, ಕಲೆಯ ಆರಾಧಕರಾಗಲಿ ಎಂದರು.
ರಾಷ್ಟ್ರೋತ್ಥಾನ ಪರಿಷತ್ ಆಡಳಿತ ಮಂಡಳಿ ಸದಸ್ಯ ಅಶೋಕ ಸೋನಕರ ಮಾತನಾಡಿ, ರಾಷ್ಟ್ರೋತ್ಥಾನ ಪರಿಷತ್ತಿನ ಧ್ಯೇಯ, ಉದ್ದೇಶಗಳನ್ನು ತಿಳಿಸಿದರು. ಲೇಖಕ ಮನೋಹರ ನಾಯಕ, ಸಂಘದ ಹಿರಿಯರು, ಸಾಹಿತ್ಯಾಸಕ್ತರು, ಇತರರು ಇದ್ದರು. ರಾಘವೇಂದ್ರ ಅಂಬೇಕರ ಸ್ವಾಗತಿಸಿದರು. ವಿನಾಯಕ ಭಟ್ ನಿರೂಪಿಸಿದರು. ರಂಗನಾಥ ಕುಲಕರ್ಣಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net