

ವಿಜಯವಾಣಿ ಸುದ್ದಿಜಾಲ ಕಾರವಾರ: ನಮ್ಮ ದೇಶ, ಸಂಸ್ಕೃತಿಯ ಇತಿಹಾಸ, ಪರಂಪರೆಯನ್ನು ಇಂದಿನ ಮತ್ತು ಮುಂದಿನ ಪೀಳಿಗೆಗೆ ತಿಳಿಸಬೇಕು ಎಂದು ಶಾಸಕಿ ರೂಪಾಲಿ ನಾಯ್ಕ ಹೇಳಿದರು.
ಕಡವಾಡದ ನಂದವಾಳದ ದಿ.ರಘು ನಾಯ್ಕ ಕಾಂಪೌಂಡ್ನಲ್ಲಿ ಬುಧವಾರ ಬಿಜೆಪಿಯಿಂದ ಆಯೋಜಿಸಿದ ವಿಜಯ ದಿವಸ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಮಕ್ಕಳಲ್ಲಿ ದೇಶ ಪ್ರೇಮ ಬೆಳೆಸುವ ಕಾರ್ಯ ಮಾಡಬೇಕು ಎಂದರು. ವರ್ಷದಲ್ಲಿ ಒಂದು ದಿನದ ಕಾರ್ಯಕ್ರಮ ಆಗಬಾರದು ಎಂಬ ಕಾರಣಕ್ಕೆ ಸ್ಥಳೀಯರಿರುವ ಒಂದು ಸಮಿತಿಯನ್ನು ರಚಿಸಿ, ವರ್ಷವಿಡೀ ಕಾರ್ಯಕ್ರಮ ನಡೆಯುವಂತೆ ನೋಡಿಕೊಳ್ಳಲಾಗುವುದು. ಈ ಸ್ಥಳಕ್ಕೆ ಬರಲು ರಸ್ತೆ ವ್ಯವಸ್ಥೆ ಮಾಡಲಾಗುವುದು ಎಂದರು.
ಪದ್ಮಶ್ರೀ ಪ್ರಶಸ್ತಿಗೆ ಆಯ್ಕೆಯಾದ ತುಳಸಿ ಗೌಡ ಅವರು ಕಾರ್ಯಕ್ರಮ ಉದ್ಘಾಟಿಸಿದರು. ಸಭೆಯಲ್ಲಿ ಅವರನ್ನು ಸನ್ಮಾನಿಸಲಾಯಿತು. ಬಿಜೆಪಿ ಜಿಲ್ಲಾಧ್ಯಕ್ಷ ವೆಂಕಟೇಶ ನಾಯ್ಕ, ಪ್ರಮುಖರಾದ ಅರುಣ ನಾಡಕರ್ಣಿ, ರಾಜೇಶ ನಾಯಕ, ಮಂಜುನಾಥ ಜನ್ನು ಸದಾಶಿವರಾಯರ ಕುರಿತು ಮಾತನಾಡಿದರು. ನಿವೃತ್ತ ಯೋಧ ರತ್ನಾಕರ್ ಕಂತ್ರಿಕರ್, ದಿ.ಪರೇಶ ಮೇಸ್ತ ರವರ ತಂದೆ ಕಮಲಾಕರ ಮೆಸ್ತ, ಅರ್ಚರಿಯಲ್ಲಿ ರಾಷ್ಟ್ರ ಮಟ್ಟದಲ್ಲಿ ಪ್ರತಿನಿಧಿಸಿದ ಅಮೀತ ಗೌಡ ರವರನ್ನು ಸನ್ಮಾನಿಸಲಾಯಿತು. ಬಿಜೆಪಿ ಗ್ರಾಮೀಣ ಅಧ್ಯಕ್ಷ ಸುಭಾಷ್ ಗುನಗಿ ಸ್ವಾಗತಿಸಿದರು. ಸಂಜಯ ನಾಯ್ಕ ವಂದಿಸಿದರು. ಕಡವಾಡ ಗ್ರಾಮ ಪಂಚಾಯಿತಿ ಅಧ್ಯಕ್ಷ ಸುಧೀರ ಸಾಳಸ್ಕರ್ ಸ್ಥಳದ ಧಾನಿ ಸುಧಾಕರ ನಾಯ್ಕ, ನಾಗೇಶ ಕುರ್ಡೆಕರ್, ಮನೋಜ ಭಟ್ಟ,ಕಿಶನ್ ಕಾಂಬಳೆ ಉಪಸ್ಥಿತರಿದ್ದರು.
ಏಕೆ ವಿಜಯ ದಿವಸ?: ಕ್ರಿಸ್ತ ಶಕ 1755ರ ಮೀರತ್ ದಂಗೆಯೇ ಬ್ರಿಟಿಷರ ವಿರುದ್ಧ ದೇಶದಲ್ಲಿ ನಡೆದ ಮೊದಲ ಸ್ವಾತಂತ್ರ್ಯ ಹೋರಾಟ ಎಂಬ ಇತಿಹಾಸ ಎಲ್ಲೆಡೆ ಪ್ರಚುರವಾಗಿದೆ. ಆದರೆ, ಅದಕ್ಕೂ ಪೂರ್ವದಲ್ಲೇ ಅಂದರೆ ಕ್ರಿ.ಶ. 1745 ರ ಫೆ. 27 ರಂದು ಬ್ರಿಟಿಷರ ವಿರುದ್ಧ ಹೋರಾಡಿ ಅವರನ್ನು ಕಾರವಾರದಿಂದ ಕಾಲ್ಕೀಳುವಂತೆ ಆಗಿನ ಅರಸ ಸೋದೆ ಸದಾಶಿವರಾಯ ಮಾಡಿದ್ದ ಎನ್ನಲಾಗಿದೆ. ಕಡವಾಡದ ನಂದವಾಳದಲ್ಲಿ ಬ್ರಿಟಿಷರು ಉಗ್ರಾಣ ಸ್ಥಾಪಿಸಿ ಪಶ್ಚಿಮ ಘಟ್ಟದಲ್ಲಿ ಬೆಳೆಯುತ್ತಿದ್ದ ಮೆಣಸಿನ ಕಾಳನ್ನು ತಮ್ಮ ರಾಷ್ಟ್ರಕ್ಕೆ ಕೊಂಡೊಯ್ಯುತ್ತಿದ್ದರು. ಅದನ್ನು ನಿಯಂತ್ರಿಸಿ ಬ್ರಿಟಿಷ್ ವಸಾಹತು ಕಾರವಾರದಲ್ಲಿ ವಿಸ್ತರಿಸದಂತೆ ತಡೆದ ಕೀರ್ತಿ ಆತನಿಗೆ ಸಲ್ಲುತ್ತದೆ. ಅದರ ನೆನಪಿಗಾಗಿ ಬಿಜೆಪಿ ಕಳೆದ ನಾಲ್ಕೈದು ವರ್ಷಗಳಿಂದ ಕಡವಾಡದಲ್ಲಿ ವಿಜಯ ದಿವಸ ಆಚರಿಸುತ್ತಿದೆ.</