ಸಂಸ್ಕೃತಿಗೆ ಹಾನಿಕರ ಭಾಷಾ ಸಂಕರ

GOKARNA
Published on

ಗೋಕರ್ಣ: ಇಂದು ನಮ್ಮ ಸ್ವಭಾಷೆ ಖಿಲವಾಗುತ್ತಿರುವ ಆತ್ಮವಿಸ್ಮರಣೆಗೆ ನಾವು ಒಳಗಾಗಿದ್ದೇವೆ. ಗೋ ತಳಿಗಳ ಸಂಕರದಂತೆಯೇ ಭಾಷಾ ಸಂಕರ ಕೂಡ ನಮ್ಮ ಸಂಸ್ಕೃತಿಗೆ ಅತೀವ ಹಾನಿಕರವಾದುದು. ಕಾರಣ, ನಮ್ಮಿಂದ ಮರೆತುಹೋದ ನಮ್ಮದೇ ಮನೆ ಮಾತಿನ ಸ್ವಭಾಷಾ ಕನ್ನಡ ಶಬ್ದಗಳನ್ನು ಮತ್ತೆ ನೆನಪಿಸುವ ಮಹಾ ಪ್ರಯತ್ನವಾಗಿ ಈ ವಿಶ್ವಾವಸು ಸಂವತ್ಸರದ ಚಾತುರ್ವಸ್ಯಕ್ಕೆ ಸ್ವಭಾಷಾ ಚಾತುರ್ವಸ್ಯ ಎಂಬ ಅಭಿನಾಮದೊಂದಿಗೆ ಆಚರಿಸಲಾಗುತ್ತಿದೆ ಎಂದು ಶ್ರೀರಾಮಚಂದ್ರಾಪುರ ಮಠದ ಪೀಠಾಧಿಪತಿಗಳಾದ ಶ್ರೀರಾಘವೇಶ್ವರ ಭಾರತೀ ಸ್ವಾಮೀಜಿ ನುಡಿದರು.

ಈ ವರ್ಷ ಜುಲೈ 10ರಿಂದ ಸೆಪ್ಟೆಂಬರ್ 7ರ ವರೆಗೆ ಶ್ರೀಮಠದ ಮೂಲತಾಣ ಇಲ್ಲಿನ ಅಶೋಕೆಯಲ್ಲಿ ನಡೆಯುವ ಚಾತುರ್ವಸ್ಯದ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಶ್ರೀಗಳು ಆಶೀರ್ವಾದ ಅನುಗ್ರಹಿಸಿದರು.

ಸ್ವಭಾಷೆಯ ಒಂದು ಪದವನ್ನು ನಾವು ಮರೆತರೆ,ಕಳೆದುಕೊಂಡರೆ ನಮ್ಮದಾಗಿದ್ದ ಒಂದು ಸಂಸ್ಕೃತಿ ಮತ್ತು ಸ್ವ-ಪರಂಪರೆಯನ್ನು ಕಳೆದುಕೊಂಡಂತೆ. ಅನ್ಯ ಭಾಷೆಯ ಒಂದು ಹೊಸ ಶಬ್ದ ನಮ್ಮ ಸ್ವಭಾಷೆಗೆ ಬಂದು ಸೇರಿಕೊಂಡರೆ ಅನ್ಯ ಸಂಸ್ಕೃತಿಯೊಂದು ನಮ್ಮ ಮೇಲೆ ಹೇರಲ್ಪಟ್ಟಂತೆ. ಹೀಗೆ ನಮ್ಮ ಭಾಷೆಯೊಳಗೆ ನುಸುಳುವ ಅನ್ಯ ಭಾಷಾ ಶಬ್ದಗಳ ಮುಖೇನ ನಾವು ನಮಗೆ ಅರಿವಿಗೆ ಬಾರದಂತೆ ದಾಸ್ಯಕ್ಕೆ, ಪರಕೀಯ ದಾಳಿಯ ಅಪಾಯಕ್ಕೆ ಈಡಾಗುತ್ತೇವೆ. ಇಂದು ನಮ್ಮ ಬಟ್ಟೆ-ಬರೆ, ಒನಪು-ವೈಯ್ಯಾರಗಳಲ್ಲಿ ಮಾತ್ರವಲ್ಲದೆ ಅನ್ಯ ಭಾಷಾ ಶಬ್ದಗಳ ಬಳಕೆಯ ಮೂಲಕ ನಮ್ಮ ನಾಲಗೆಯೂ ಪರಕೀಯತೆಯ ಗುಲಾಮಗಿರಿಗೆ, ಗುಪ್ತದಾಸ್ಯಕ್ಕೆ ಒಳಗಾಗಿದೆ.ಈ ದಾಸ್ಯ ಯಾಕೆ ಎಂಬ ಪ್ರಶ್ನೆ ಕೇಳುವ ಸಮಯ ಬಂದೊದಗಿದೆ.ಈಗ ಈ ಪ್ರಶ್ನೆ ಕೇಳದೆ ಹೋದರೆ ಮುಂದೆ ಇದನ್ನು ಕೇಳಲಾರದ ಪ್ರಮೇಯ ಬರುವುದು ನಿಶ್ಚಿತ. ಈ ಹಿನ್ನೆಲೆಯಲ್ಲಿ ನಾವು ಮರೆತ, ನಮ್ಮಿಂದ ಮರೆಯಾದ ಕನ್ನಡ ಸ್ವಭಾಷಾ ಶಬ್ದಗಳನ್ನು ನೆನಪಿಸಿ ಶುದ್ಧ ಕನ್ನಡವನ್ನು ಪಸರಿಸುವ ಪ್ರಯತ್ನವಾಗಿ ಈ ಸಲದ ಚಾತುರ್ವಸ್ಯ ಆಚರಿತವಾಗುತ್ತದೆ. ಈ ಮೂಲಕ ಸಮಾಜದಲ್ಲಿ ಮತ್ತು ಸಮಸ್ತ ನಾಡಿನಲ್ಲಿ ಈ ಸ್ವಭಾಷಾ ಪರಿಸರ ಪಸರಿಸುವ ಮಹತ್ಕಾರ್ಯಕ್ಕೆ ಮುನ್ನುಡಿ ಹಾಕೋಣ ಎಂದು ಶ್ರೀಗಳು ಕರೆಯಿತ್ತು ಆಶೀರ್ವಾದ ಅನುಗ್ರಹಿಸಿದರು.

ಕಾರ್ಯಕ್ರಮದಲ್ಲಿ ಹವ್ಯಕ ಮಹಾಮಂಡಲ ಅಧ್ಯಕ್ಷ ಮೋಹನ ಭಾಸ್ಕರ ಹೆಗಡೆ, ಉಪಾಧ್ಯಕ್ಷ ಜಿ.ಜಿ. ಹೆಗಡೆ ತಲೆಕೇರಿ, ಶ್ರೀಮಠದ ಪ್ರಶಾಸನಾಧಿಕಾರಿ ಸಂತೋಷ ಹೆಗಡೆ, ವಿತ್ತಾಧ್ಯಕ್ಷ ಜಿ.ಎಲ್. ಗಣೇಶ, ಚಾತುರ್ವಸ್ಯ ಸಮಿತಿ ಸಂಚಾಲಕ ಮಂಜುನಾಥ ಭಟ್ಟ ಸುವರ್ಣಗದ್ದೆ, ಯು.ಎಸ್.ಜಿ. ಭಟ್ಟ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net