ಸಂಸ್ಕೃತಿ ಕಾಪಾಡುವುದು ಎಲ್ಲರ ಕರ್ತವ್ಯ

3Athni1
Published on

ಅಥಣಿ: ನಮ್ಮ ಸಂಸ್ಕೃತಿ, ಸಂಸ್ಕಾರವನ್ನು ಮುಂದಿನ ಜನಾಂಗಕ್ಕೆ ತಿಳಿಯಪಡಿಸುವುದು ನಮ್ಮೆಲ್ಲರ ಕರ್ತವ್ಯ ಎಂದು ಆರ್.ಎಸ್.ಎಸ್. ಹಿರಿಯ ಸಹ ಸಂಘಚಾಲಕ ಅರವಿಂದರಾವ ದೇಶಪಾಂಡೆ ಹೇಳಿದರು.

ತಾಲೂಕಿನ ಖಿಳೇಗಾಂವಿ ಬಸವೇಶ್ವರ ಜಾತ್ರಾ ಮಹೋತ್ಸವ ಅಂಗವಾಗಿ ಈಚೆಗೆ ಏರ್ಪಡಿಸಿದ್ದ ಜೀವನ ದರ್ಶನ ಪ್ರವಚನ ಉದ್ಘಾಟನಾ ಸಮಾರಂಭದ ಅತಿಥಿಯಾಗಿ ಮಾತನಾಡಿ, ಮಕ್ಕಳನ್ನು ಸನ್ಮಾರ್ಗದತ್ತ ಮುನ್ನಡೆಸುವ ಜವಾಬ್ದಾರಿ ತಾಯಂದಿರ ಮೇಲಿದೆ ಎಂದರು.

ಸಾನ್ನಿಧ್ಯ ವಹಿಸಿದ್ದ ಮಿರಜದ ಶಿವದೇವ ಸ್ವಾಮೀಜಿ ಮಾತನಾಡಿ, ಭಾರತೀಯ ಹಿಂದು ಧರ್ಮವು ಭಕ್ತಿ, ಶ್ರದ್ಧೆಯ ಪ್ರತೀಕವಾಗಿದೆ. ವಿಜ್ಞಾನ ಮತ್ತು ಅಧ್ಯಾತ್ಮ ಬೇರೆಯಾದರೂ ಅವುಗಳ ಸತ್ಯಾಸತ್ಯತೆ ಒಂದೇಯಾಗಿದೆ. ಅಧ್ಯಾತ್ಮದ ಮೇಲೆ ವಿಜ್ಞಾನ ಇದೆ. ಹಿರಿಯರು ಮಾಡಿರುವ ಎಲ್ಲ ಕಾರ್ಯಗಳು ನಮ್ಮ ಬದುಕಿಗೆ ಪೂರಕವಾಗಿವೆ. ಅದಕ್ಕಾಗಿ ಧರ್ಮ ಬಿಡಬಾರದು. ಧರ್ಮದಿಂದಲೆ ನಮ್ಮ ಕೀರ್ತಿ ಹರಡುವುದು ಎಂದರು.

ಪ್ರವಚನಕಾರ ಡಾ. ವಿವೇಕಾನಂದ ದೇವರು ಮಾತನಾಡಿ, ಆಧ್ಯಾತ್ಮಿಕ ಚಿಂತನೆಗಳಿಂದ ಮನಸ್ಸು, ಆರೋಗ್ಯ ಸುಧಾರಣೆಯಾಗಿ ಉತ್ತಮ ವಿಚಾರಗಳು ನಮ್ಮ ಬದುಕಿಗೆ ಪ್ರೇರಕಶಕ್ತಿ ನೀಡುತ್ತವೆ ಎಂದರು.

ದೇವಸ್ಥಾನ ಟ್ರಸ್ಟ್ ಕಮಿಟಿ ಅಧ್ಯಕ್ಷ ಸತೀಶ ಹೊನ್ನಾಗೊಳ, ಹನುಮಂತ ಕಾಲುವೆ, ಈಶ್ವರ ಅಳ್ಳಟ್ಟಿ, ಮುರುಗೇಶ ಬಾನಿ, ಎಂ.ಎಸ್.ದೊಡ್ಡಣವರ ಇತರರಿದ್ದರು. ವಿದ್ಯಾರ್ಥಿಗಳಿಂದ ವಿವಿಧ ಭಕ್ತಿಗೀತೆಗಳ ರೂಪಕ, ವಚನ ನೃತ್ಯಗಳು ಜರುಗಿದವು. ಎಲ್ಲ ಭಕ್ತರಿಗೆ ಪ್ರಸಾದ ಏರ್ಪಡಿಸಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net