ಸಂಸ್ಕೃತಿ ಉಳಿಸುವಲ್ಲಿ ಮಠಗಳ ಪಾತ್ರ ಪ್ರಮುಖ

24MNL2
ಮುನವಳ್ಳಿ ಸೋಮಶೇಖರಮಠದ ಸಮಗ್ರ ಮಾಹಿತಿಯುಳ್ಳ ನೂತನ ವೆಬ್‌ಸೈಟ್‌ನ್ನು ವಿಧಾನಸಭೆ ಉಪಸಭಾಧ್ಯಕ್ಷ ಆನಂದ ಮಾಮನಿ ಭಾನುವಾರ ಲೋಕಾರ್ಪಣೆಗೊಳಿಸಿದರು. ಮುರುಘೇಂದ್ರ ಸ್ವಾಮೀಜಿ, ಶಿವಲಿಂಗ ಸ್ವಾಮೀಜಿ, ಅಭಿನವ ಒಪ್ಪತ್ತೇಶ್ವರ ಸ್ವಾಮೀಜಿ, ಶಿವಾನಂದ ಸ್ವಾಮೀಜಿ, ಟಿ.ಪಿ.ಮನೋಳಿ, ಪುಂಡಲೀಕ ಮೇಟಿ, ರಾಜೇಂದ್ರ ವಾಲಿ, ಗುರುನಾಥ ಕುಲಕರ್ಣಿ, ಪೂಜಾ ಕುಲಕರ್ಣಿ, ಚಿನ್ಮಯ ಪತ್ತಾರ ಮತ್ತಿತರರು ಇದ್ದರು.
Published on

ಮುನವಳ್ಳಿ: ಭಾರತೀಯ ಧಾರ್ಮಿಕ ಸಂಸ್ಕೃತಿ, ಪರಂಪರೆ ಉಳಿಸಿ ಬೆಳೆಸುವಲ್ಲಿ ಮಠ-ಮಾನ್ಯಗಳ ಪಾತ್ರ ಹಿರಿದಾಗಿದೆ. ಮಠಗಳು ಧರ್ಮ ಜಾಗೃತಿ ಜತೆಗೆ ಬಸವಾದಿ ಶರಣರು ಹಾಕಿಕೊಟ್ಟ ಸನ್ಮಾರ್ಗದಲ್ಲಿ ತ್ರಿವಿಧದಾಸೋಹ ಹಮ್ಮಿಕೊಂಡು ಸಮಾಜಕಟ್ಟಿ ನಾಡನ್ನು ಪ್ರಗತಿಯತ್ತ ಕರದುಕೊಂಡು ಹೋಗುತ್ತಿರುವುದು ಸಂತಸದ ವಿಚಾರ ಎಂದು ವಿಧಾನಸಭೆ ಉಪಸಭಾಧ್ಯಕ್ಷ ಆನಂದ ಮಾಮನಿ ಹೇಳಿದರು.

ಪಟ್ಟಣದ ಸೋಮಶೇಖರಮಠದ ಲಿಂ. ಬಸವಲಿಂಗ ಸ್ವಾಮೀಜಿ ಅವರ 66ನೇ ಪುಣ್ಯಸ್ಮರಣೋತ್ಸವದ ಪ್ರಯುಕ್ತ ಭಾನುವಾರ ಸಂಜೆ ಹಮ್ಮಿಕೊಂಡಿದ್ದ ಧಾರ್ಮಿಕ ಪ್ರವಚನ ಪಾರಂಭೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಅವರು ಮಾತನಾಡಿದರು. ಸಮಾಜ ಮುಖಿಯಾಗಿ ಸೇವೆ ಸಲ್ಲಿಸಲು ನನಗೆ ಪ್ರೇರಣೆ ನೀಡುವಲ್ಲಿ ಮಠಾಧೀಶರ ಪಾತ್ರವು ಮಹತ್ವದ್ದಾಗಿದೆ.

ಸಮಾಜ ನನಗೇನು ಮಾಡಿತು ಎನ್ನುವುದಕ್ಕಿಂತ ಸಮಾಜಕ್ಕೆ ನಮ್ಮ ಕೊಡುಗೆ ಏನು ಎಂದು ಅರಿತು ನಡೆದಾಗ ಮಾತ್ರ ಸಮಾಜ ಉನ್ನತಿಯತ್ತ ಸಾಗುತ್ತದೆ ಎಂದರು. ಕಟಕೋಳದ ಶರಣ ಸಹಸ್ರಮಾನರತ್ನ ಪ್ರಶಸ್ತಿ ವಿಭೂಷಿತ ಟಿ.ಪಿ.ಮನೋಳಿ ಮಾತನಾಡಿ, ನಾಡಿನಲ್ಲಿ ಧರ್ಮ, ಸಂಸ್ಕೃತಿ, ಸಂಸ್ಕಾರವನ್ನು ಜನಮಾನಸದಲ್ಲಿ ತುಂಬಿ ಸಕಲರಿಗೂ ಲೇಸು
ಬಯಸುತ್ತ ಬಂದಿರುವ ಸೋಮಶೇಖರಮಠವು ಬಸವ ಪರಂಪರೆಯ ದಿವ್ಯ ಮಠವಾಗಿದೆ ಎಂದರು.

ಪ್ರವಚನಕಾರ ಗುಳೇದಗುಡ್ಡದ ಅಭಿನವ ಒಪ್ಪತ್ತೇಶ್ವರ ಸ್ವಾಮೀಜಿ, ಸವದತ್ತಿಯ ಬಿದರಿಕಲ್ಮಠದ ಶಿವಲಿಂಗ ಸ್ವಾಮೀಜಿ ಮಾತನಾಡಿ, ಪ್ರವಚನ ಶ್ರವಣದಿಂದ ಶಾಂತಿ ಹಾಗೂ ಮಾನಸಿಕ ಸಮಾಧಾನ ಸಿಗುತ್ತದೆ. ಆದ್ದರಿಂದ ಪ್ರವಚನ ಆಲಿಸಿ ಪುನೀತರಾಗಲು ಕರೆ ನೀಡಿದರು. ಸೋಮಶೇಖರಮಠದ ಮುರುಘೇಂದ್ರ ಸ್ವಾಮೀಜಿ ವಹಿಸಿದ್ದರು. ಸಾನ್ನಿಧ್ಯವನ್ನು ಸವದತ್ತಿ ಬ್ರಹ್ಮಾನಂದ ಆಶ್ರಮದ ಶಿವಾನಂದ ಸ್ವಾಮೀಜಿ ವಹಿಸಿದ್ದರು.

ರೇಣುಕಾ ಯಲ್ಲಮ್ಮದೇವಸ್ಥಾನ ವ್ಯವಸ್ಥಾಪನಾ ಸಮಿತಿ ಸದಸ್ಯ ಪುಂಡಲೀಕ ಮೇಟಿ ಹಾಗೂ ಯರಗಟ್ಟಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ರಾಜೇಂದ್ರ ವಾಲಿ ಅವರನ್ನು ಶ್ರೀಮಠದಲ್ಲಿ ಗೌರವಿಸಲಾಯಿತು. ಗುರುನಾಥ ಕುಲಕರ್ಣಿ, ಚಿನ್ಮಯ ಪತ್ತಾರ ತಯಾರಿಸಿದ ಸೋಮಶೇಖರಮಠದ ನೂತನ
ವೆಬ್‌ಸೈಟ್ ಲೋಕಾರ್ಪಣೆಗೊಂಡಿತು. ಬಿ.ಬಿ.ಹುಲಿಗೊಪ್ಪ ನಿರೂಪಿಸಿದರು. ಗಂಗಾಧರ ಗೊರಾಬಾಳ ಸ್ವಾಗತಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net