

ಹುಲಸೂರು: ದಶಕಗಳ ಹಿಂದೆ ಗ್ರಾಮೀಣ ಭಾಗದಲ್ಲಿ ಜಾತ್ರೆಗಳು ಮನೋರಂಜನೆ ಹಾಗೂ ಖರೀದಿ ಕೇಂದ್ರಗಳಾಗಿದ್ದವು. ಆದರೆ ಇದೀಗ ಜಾತ್ರೆ,ಧಾರ್ಮಿಕ ಕಾರ್ಯಕ್ರಮಗಳು ಸಂಸ್ಕೃತಿ ಉಳಿಸುವಲ್ಲಿ ಸಹಕಾರಿಯಾಗಿದೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ವಿಜಯಸಿಂಗ್ ಹೇಳಿದರು.
ಪಟ್ಟಣದ ಶ್ರೀ ವೀರಭದ್ರೇಶ್ವರ ದೇವಸ್ಥಾನದ ಆವರಣದಲ್ಲಿ ಶ್ರೀ ವೀರಭದ್ರೇಶ್ವರ ಜಾತ್ರೋತ್ಸವದ ನಿಮಿತ್ತ ಸೋಮವಾರ ರಾತ್ರಿ ಆಯೋಜಿಸಿದ್ದ ಧರ್ಮಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಮನ ಶುದ್ಧಿಗೆ ಇಂತಹ ಶರಣ ಸಂಸ್ಕೃತಿ ಉತ್ಸವ ಹಾಗೂ ಧಾರ್ಮಿಕ ಕಾರ್ಯಕ್ರಮ ಮಾಡುವುದು ಅವಶ್ಯವಾಗಿದೆ. ಮಕ್ಕಳು ವಿದ್ಯಾವಂತರಾಗಬೇಕು, ಯುವಕರು ದುಶ್ಚಟಗಳಿಗೆ ಬಲಿಯಾಗಬಾರದು. ನಾವೆಲ್ಲರೂ ಒಂದು ಎಂಬ ಭಾವನೆ ಮೂಡಿದಾಗ ಮಾತ್ರ ಸಮಾಜದಲ್ಲಿ ನೆಮ್ಮದಿ ಕಾಣಲು ಸಾಧ್ಯ ಎಂದರು.
ಬೇಲೂರಿನ ಶ್ರೀ ಪ್ರಭುಕುಮಾರ ಶಿವಾಚಾರ್ಯರು ಮಾತನಾಡಿ, ಭಾರತ ದೇಶ ಸೂಫಿ, ಸಂತರು, ಮಹಾನ್ ಪುರುಷರು ನಡೆದಾಡಿದ ಪುಣ್ಯ ಭೂಮಿಯಾಗಿದೆ ಎಂದು ಹೇಳಿದರು.
ಸಾಯಿಗಾಂವದ ಶ್ರೀ ಶಿವಾನಂದ ಸ್ವಾಮೀಜಿ, ಶ್ರೀ ಶಂಕರಲಿಂಗ ಶಿವಾಚಾರ್ಯರು, ಶ್ರೀ ಬಸವಲಿಂಗ ಶಿವಾಚಾರ್ಯರು, ಜಿಪಂ ಮಾಜಿ ಸದಸ್ಯ ಮಲ್ಲಪ್ಪ ಧಬಾಲೆ, ಪಿಕೆಪಿಎಸ್ ಸಹಕಾರ ಸಂಘದ ಅಧ್ಯಕ್ಷ ಎಂ.ಜಿ ರಾಜೋಳೆ ಮಾತನಾಡಿದರು.
ಶ್ರೀ ಡಾ.ಶಿವಾನಂದ ಸ್ವಾಮೀಜಿ, ಗ್ರಾಪಂ ಅಧ್ಯಕ್ಷೆ ದೀಪಾರಾಣಿ ಭೋಸ್ಲೆ , ದೇವಸ್ಥಾನ ಪಂಚ ಕಮಿಟಿ ಅಧ್ಯಕ್ಷ ಕಾಶಿನಾಥ ಪಾರಶೆಟ್ಟಿ, ಕಾರ್ಯದರ್ಶಿ ಬಂಡುರಾವ ಪಾಟೀಲ, ಸಂಗೀತಗಾರ ಪ್ರಕಾಶ ಬೋರಗಿ, ರಮೇಶ ಸೇಡಂ ಇತರರಿದ್ದರು. ಪರಶುರಾಮ ರಾಠೋಡ್ ಸ್ವಾಗತಿಸಿ ನಿರೂಪಣೆ ಮಾಡಿದರು. ಶ್ರೀ ವೀರಭದ್ರೇಶ್ವರ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನೋಡುಗರ ಗಮನ ಸೆಳೆದವು.