ಸಂಸ್ಕೃತಿ ಉತ್ಸವ ಯಶಸ್ಸಿಗೆ ಬೇಕು ಎಲ್ಲರ ಸಹಕಾರ

29BLK3
ಭಾಲ್ಕಿ ಸದ್ಗುರು ವಿದ್ಯಾಲಯದಲ್ಲಿ ಶುಕ್ರವಾರ ಕರೆದಿದ್ದ ಭಾರತೀಯ ಸಂಸ್ಕೃತಿ ಉತ್ಸವದ ಪೂರ್ವಭಾವಿ ಸಭೆಯಲ್ಲಿ ಪ್ರಥಮ ದರ್ಜೆ ಗುತ್ತಿಗೆದಾರ ಚನ್ನಬಸವಣ್ಣ ಬಳತೆ ಮಾತನಾಡಿದರು. ರೇವಣಸಿದ್ದಪ್ಪ ಜಲಾದೆ, ಶಿವು ಲೋಖಂಡೆ, ಸೋಮನಾಥಪ್ಪ ಅಷ್ಟೂರೆ, ಮಲ್ಲಮ್ಮ ಪಾಟೀಲ, ಚಂದ್ರಶೇಖರ ಎಮ್ಮೆ ಇತರರಿದ್ದರು.
Published on

ಭಾಲ್ಕಿ: ಕಲಬುರಗಿ ಜಿಲ್ಲೆ ಸೇಡಂನಲ್ಲಿ ಜ.೨೯ರಿಂದ ಫೆ.೬ರವರೆಗೆ ಹಮ್ಮಿಕೊಂಡಿರುವ ಕೊತ್ತಲ ಸ್ವರ್ಣ ಜಯಂತಿ ಮತ್ತು ಭಾರತೀಯ ಸಂಸ್ಕೃತಿ ಉತ್ಸವ ಯಶಸ್ಸಿಗೆ ಎಲ್ಲರ ಸಹಕಾರ ಅಗತ್ಯವಿದೆ ಎಂದು ಪ್ರಥಮ ದರ್ಜೆ ಗುತ್ತಿಗೆದಾರ ಚನ್ನಬಸವಣ್ಣ ಬಳತೆ ಹೇಳಿದರು.

ಪಟ್ಟಣದ ಸದ್ಗುರು ವಿದ್ಯಾಲಯದಲ್ಲಿ ಶುಕ್ರವಾರ ಕರೆದಿದ್ದ ಉತ್ಸವದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಭಾರತೀಯ ಸಂಸ್ಕೃತಿ ಜಗದ್ವಿಖ್ಯಾತ ಉತ್ಸವವಾಗಿದೆ. ಸೇಡಂ ರಸ್ತೆಯ ಬೀರನಹಳ್ಳಿ ಕ್ರಾಸ್‌ನ ಸುಮಾರು ೨೪೦ ಎಕರೆ ಪ್ರದೇಶದಲ್ಲಿ ಒಂಬತ್ತು ದಿನ ವಿಜೃಂಭಣೆಯಿಂದ ಉತ್ಸವ ನಡೆಯಲಿದೆ. ೩೦ ಲಕ್ಷ ಜನ ಭಾಗವಹಿಸುವ ನಿರೀಕ್ಷೆ ಇದೆ. ನಮ್ಮ ತಾಲೂಕಿನಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನ ಪಾಲ್ಗೊಳ್ಳಬೇಕು ಎಂದು ಕೋರಿದರು.

ವಿಕಾಸ ಅಕಾಡೆಮಿ ಪ್ರಮುಖ ರೇವಣಸಿದ್ದಪ್ಪ ಜಲಾದೆ ಮಾತನಾಡಿ, ಉತ್ಸವದಲ್ಲಿ ಮಾತೃ ಸಮಾವೇಶ, ಶೈಕ್ಷಣಿಕ, ಯುವ, ಗ್ರಾಮ, ಕೃಷಿ, ಆಹಾರ ಆರೋಗ್ಯ, ಸ್ವಯಂ ಉದ್ಯೋಗ, ಪ್ರಕೃತಿ ಮತ್ತು ನಾವು, ಸೇವಾಶಕ್ತಿ, ದೇಶ ಧರ್ಮ ಸಂಸ್ಕೃತಿ ಸೇರಿ ಹಲವಾರು ಸಮಾವೇಶಗಳು ನಡೆಯಲಿವೆ. ಎಲ್ಲದರಲ್ಲಿ ಭಾರತೀಯ ಸಂಸ್ಕೃತಿ ಬಿಂಬಿಸುವ ಗಣ್ಯರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಪ್ರಮುಖರಾದ ಶಿವು ಲೋಖಂಡೆ, ಸೋಮನಾಥಪ್ಪ ಅಷ್ಟೂರೆ, ಮಲ್ಲಮ್ಮ ಆರ್.ಪಾಟೀಲ, ಚಂದ್ರಶೇಖರ ಎಮ್ಮೆ, ಕಿಶನರಾವ ಪಾಟೀಲ ಇಂಚೂರಕರ, ನಾಗಭೂಷಣ ಮಾಮಡಿ, ಶಿವಾಜಿರಾವ ಮಾನೆ, ರೇವಣಸಿದ್ದಪ್ಪ ಜಾಡರ, ಶ್ರುತಿ ಸಂತೋಷ ಬಿಜಿ ಪಾಟೀಲ, ಕವಿತಾ ಓಂಕಾರ ಮಜಕೂರೆ, ಮಹಾಲಿಂಗ ಖಂಡ್ರೆ ಉಪಸ್ಥಿತರಿದ್ದರು. ಜೈರಾಜ ಕೊಳ್ಳಾ ಸ್ವಾಗತಿಸಿದರು. ರೇವಣಸಿದ್ದ ಜಾಡರ ನಿರೂಪಣೆ ಮಾಡಿದರು. ಅಕ್ಷಯ ಮುದ್ದಾ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net