

ಶೃಂಗೇರಿ: ಭಾರತ ಅತಿದೊಡ್ಡ ಸಂವಿಧಾನ ಹೊಂದಿದ್ದು, ಗಣರಾಜೋತ್ಸವ ದಿನಾಚರಣೆ ದೇಶದ ಸಂಸ್ಕೃತಿ, ಹಿರಿಮೆ ಅನಾವರಣಗೊಳಿಸುವ ದಿನ ಎಂದು ತಹಸೀಲ್ದಾರ್ ಅನುಪ್ ಸಂಜೋಗ್ ತಿಳಿಸಿದರು.
ಪಪಂನಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ರಾಷ್ಟ್ರಧ್ವಜಾರೋಹಣ ನೆರವೇರಿಸಿ ಮಾತನಾಡಿ, ರಾಜಪ್ರಭುತ್ವವನ್ನು ತ್ಯಜಿಸಿ ಪ್ರಜಾಪ್ರಭುತ್ವದಲ್ಲಿ ಅಸ್ತಿತ್ವವನ್ನು ಸ್ಥಾಪಿಸಿದ ಭಾರತದ ಏಕತೆಗಾಗಿ ಸರ್ವರೂ ಒಗ್ಗೂಡಿ ಕೆಲಸ ಮಾಡಬೇಕು. ದೇಶದ ಸಾಂಸ್ಕೃತಿಕ, ಆಧ್ಯಾತ್ಮಿಕ, ಸಾಮಾಜಿಕ, ಪಾರಂಪರಿಕ ಮೌಲ್ಯಗಳನ್ನು ಗೌರವಿಸಿ ಎಲ್ಲರೂ ದೇಶಪ್ರೇಮ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.
ನರೇಗಾ ಯೋಜನೆ ಹಾಗೂ ಕಂದಾಯ ವಸೂಲಾತಿಯಲ್ಲಿ ಪ್ರಥಮ ಸ್ಥಾನ ಪಡೆದ ಕೆರೆ ಗ್ರಾಪಂ, ನರೇಗಾ ಯೋಜನೆಯಡಿ ದ್ವಿತೀಯ ಸ್ಥಾನ ಪಡೆದ ಅಡ್ಡಗದ್ದೆ ಗ್ರಾಪಂಗಳ ಅಭಿವೃದ್ಧಿ ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ಪಟ್ಟಣದ ಡಾ. ವಿ.ಆರ್.ಗೌರೀಶಂಕರ್ ಸಭಾಂಗಣದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಗೌರವಿಸಲಾಯಿತು. ಕಳೆದ ಬಾರಿ ದೆಹಲಿಯಲ್ಲಿ ನಡೆದ 75ನೇ ಗಣರಾಜೋತ್ಸವ ಪಥಸಂಚಲನದಲ್ಲಿ ಭಾಗವಹಿಸಿದ್ದ ಕೆ.ಎನ್.ಸುಜಿತ್‌ಕುಮಾರ್ ಅವರನ್ನು ಸನ್ಮಾನಿಸಲಾಯಿತು. ತಾಲೂಕಿನ ವಿವಿಧ ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಮುಖ್ಯರಸ್ತೆಯಲ್ಲಿ ನಡೆದ ಮೆರವಣಿಗೆಯಲ್ಲಿ ಶಾಲಾ ಕಾಲೇಜು ವಿದ್ಯಾರ್ಥಿಗಳು, ವಿವಿಧ ಇಲಾಖೆಗಳ ಅಧಿಕಾರಿಗಳು, ಎನ್‌ಸಿಸಿ ವಿದ್ಯಾರ್ಥಿಗಳು, ಸಂಘ ಸಂಸ್ಥೆಯ ಪದಾಧಿಕಾರಿಗಳು ಪಾಲ್ಗೊಂಡಿದ್ದರು.
ಉಪತಹಸೀಲ್ದಾರ್ ಪ್ರವೀಣ್‌ಕುಮಾರ್, ಪಪಂ ಮುಖ್ಯಾಧಿಕಾರಿ ಸರಸ್ವತಿ ಷಣ್ಮುಗ ಸುಂದರಿ, ಅಕ್ಷರದಾಸೋಹ ಸಹಾಯಕ ನಿರ್ದೇಶಕಿ ಶಾರದಾ, ತಾಪಂ ಇಒ ಸುದೀಪ್, ಪಪಂ ಸದಸ್ಯ ರಫೀಕ್ ಅಹಮದ್, ತಾಪಂ ಮಾಜಿ ಸದಸ್ಯ ರಮೇಶ್, ಡಿಸಿಸಿ ಮಾಜಿ ಉಪಾಧ್ಯಕ್ಷ ಡಿ.ಸಿ.ಶಂಕರಪ್ಪ, ಜಿ.ಆರ್.ಪ್ರಮೋದ್, ಪ್ರಶಾಂತಿ, ನಂದನ್, ಶ್ರೀನಿವಾಸ್, ಪ್ರದೀಪ್, ಶ್ವೇತಾ, ಸುಖಾನ್, ವಿವೇಕ್ ಬೇಗಾನೆ, ಸೌಮ್ಯಾ ವಿಜಯಕುಮಾರ್ ಇದ್ದರು.