ಸಂಸ್ಕೃತ ಸಾಹಿತ್ಯವನ್ನು ವೈಜ್ಞಾನಿಕ ಸಂಶೋಧನೆಗೆ ಒಳಪಡಿಸಿ

sri pucc
ಶೃಂಗೇರಿ ಪಿಯು ಕಾಲೇಜಿನಲ್ಲಿ ಆಯೋಜಿಸಿದ್ದ ಸಂಸ್ಕೃತೋತ್ಸವದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಮೆಣಸೆ ಕೇಂದ್ರೀಯ ಸಂಸ್ಕೃತ ವಿಶ್ವವಿದ್ಯಾಲಯದ ಮುಕ್ತಸ್ವಾಧ್ಯಾಯ ಪೀಠದ ಸಹನಿರ್ದೇಶಕ ಡಾ. ವೆಂಕಟೇಶಮೂರ್ತಿ ಬಹುಮಾನ ವಿತರಿಸಿದರು. ಪ್ರಣೀತಾ, ವಂದನಾ ಇದ್ದರು.
Published on

ಶೃಂಗೇರಿ: ಸಂಸ್ಕೃತ ಸಾಹಿತ್ಯದಲ್ಲಿ ವೈಜ್ಞಾನಿಕ ಸಂಶೋಧನೆಗೆ ಬೇಕಾದ ಅನೇಕ ಆಕರಗ್ರಂಥಗಳಿವೆ. ಆಧುನಿಕ ವಿಜ್ಞಾನದ ಶಾಖೆಗಳಿಗೆ ಸಂಬಂಧಪಟ್ಟ ಸಂಸ್ಕೃತ ಗ್ರಂಥಗಳ ಕುರಿತು ಸಂಶೋಧನೆ ನಡೆದರೆ ಜಗತ್ತಿಗೆ ಮಹದುಪಕಾರವಾಗುತ್ತದೆ ಎಂದು ಮೆಣಸೆ ಕೇಂದ್ರೀಯ ಸಂಸ್ಕೃತ ವಿಶ್ವವಿದ್ಯಾಲಯದ ಮುಕ್ತಸ್ವಾಧ್ಯಾಯ ಪೀಠದ ಸಹನಿರ್ದೇಶಕ ಡಾ. ವೆಂಕಟೇಶಮೂರ್ತಿ ಹೇಳಿದರು.

ಪಟ್ಟಣದ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಗುರುವಾರ ನಡೆದ ಸಂಸ್ಕೃತೋತ್ಸವದಲ್ಲಿ ಮಾತನಾಡಿ, ರಸರತ್ನಸಮುಚ್ಛಯವೆಂಬ ಗ್ರಂಥದಲ್ಲಿ 90 ವಿಧದ ಅಯಸ್ಕಾಂತಗಳ ವರ್ಣನೆ ಇದೆ. ಅಯಸ್ಕಾಂತದಿಂದ ತಯಾರಿಸಿದ ಪಾತ್ರಗಳ ಉಲ್ಲೇಖ ಹಾಗೂ ಅವುಗಳ ವೈಶಿಷ್ಟ್ಯವನ್ನು ಬಹಳ ಚೆನ್ನಾಗಿ ವಿವರಿಸಲಾಗಿದೆ. ಅದೇ ರೀತಿ ಪಾದರಸದ ಔಷಧೀಯ ಗುಣ, ವಜ್ರವನ್ನು ಕರಗಿಸುವ ತಂತ್ರಜ್ಞಾನ ವಿವರಿಸುವ ಗ್ರಂಥಗಳಿವೆ. ಇವುಗಳ ಆಧಾರದಲ್ಲಿ ಆಧುನಿಕ ವಿಜ್ಞಾನಿಗಳು ಸಂಶೋಧನೆ ನಡೆಸಿದರೆ ವಿಷಯಗಳು ಅನಾವರಣಗೊಳ್ಳಬಹುದು. ಪ್ರಾಚೀನ ಚಿಂತನೆಯನ್ನು ಆಧುನಿಕ ತಂತ್ರಜ್ಞಾನದ ಓರೆಗಲ್ಲಿಗೆ ಹಚ್ಚಿದರೆ ಅಭೂತಪೂರ್ವ ಸಾಧನೆ ಮಾಡಬಹುದು. ಅದೇ ರೀತಿ ಕಂಪ್ಯೂಟರ್‌ಗೆ ಸಂಬಂಧಿಸಿದ ಕೃತಕ ಬುದ್ಧಿಮತ್ತೆಯ ನಿರ್ಮಾಣದಲ್ಲಿಯೂ ಸಂಸ್ಕೃತದ ಪಾತ್ರ ಮಹತ್ವದ್ದಾಗಿದೆ. ಈ ನಿಟ್ಟಿನಲ್ಲಿ ಐಐಟಿ ಮುಂತಾದ ಸಂಸ್ಥೆಗಳು ತೊಡಗಿಸಿಕೊಂಡಿವೆ ಎಂದರು.

ಕಾಲೇಜಿನ ಪ್ರಾಚಾರ್ಯ ಅರುಣ್‌ಕುಮಾರ್ ಮಾತನಾಡಿ, ಸಂಸ್ಕೃತ ಭಾಷೆಯಲ್ಲಿ ಅತ್ಯಮೂಲ್ಯ ಸಾಹಿತ್ಯ ಗ್ರಂಥಗಳು ಇವೆ. ಪ್ರಾಚೀನ ಭಾಷೆಗಳಲ್ಲಿ ಒಂದಾದ ಸಂಸ್ಕೃತ ಭಾಷೆ ಸರಳವಾಗಿದೆ. ಅದು ಜನಸಾಮಾನ್ಯರನ್ನು ತಲುಪುವ ಪ್ರಕ್ರಿಯೆಯಲ್ಲಿ ವಿದ್ಯಾರ್ಥಿಗಳು ತೊಡಗಿಸಿಕೊಳ್ಳಬೇಕು. ಸಾಹಿತ್ಯದ ಸದ್ವಿಚಾರಗಳನ್ನು ಯುವಪೀಳಿಗೆ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

ಸಂಸ್ಕೃತೋತ್ಸವಕ್ಕೆ ಸಂಬಂಧಿಸಿದಂತೆ ನಡೆಸಿದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಕಾಲೇಜಿನ ಸಂಸ್ಕೃತ ವಿದ್ಯಾರ್ಥಿಗಳು ಹಾಡು, ಪ್ರಹಸನ, ನೃತ್ಯ ಮುಂತಾದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು. ಆಂಗ್ಲ ಉಪನ್ಯಾಸಕಿ ಪೂರ್ಣಿಮಾ, ಭೌತಶಾಸ್ತ್ರ ಉಪನ್ಯಾಸಕ ಆದಿತ್ಯರಾವ್, ಸಂಸ್ಕೃತ ಉಪನ್ಯಾಸಕ ಡಾ. ಮಹೇಶ ಕಾಕತ್ಕರ್, ಕವಿತಾ, ಸಮೃದ್ಧಿ,ಪ್ರಣೀತಾ, ವಂದನಾ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net