

ವಿಶ್ವ ಸಂಸ್ಕೃತೋತ್ಸವ ಕಾರ್ಯಕ್ರಮ
ಬೆಳಗಾವಿ: ಸಂಸ್ಕೃತ ಭಾಷೆಯು ವಿಶ್ವಭಾಷೆಗಳ ತಾಯಿಯಾಗಿದೆ. ಇದು ಲ್ಯಾಟೀನ್ ಮೊದಲಾದ ಭಾಷೆಗಳಿಗಿಂತ ಪ್ರಾಚೀನವಾದ ಇತಿಹಾಸ ಸಂಸ್ಕೃತ ಭಾಷೆ ಹೊಂದಿದೆ ಎಂದು ಕಮರಿಮಠದ ಶಿವಾನಂದ ದೇವರು ಹೇಳಿದರು.
ಇತ್ತೀಚೆಗೆ ಶಿವಬಸವನಗರದಲ್ಲಿರುವ ಶ್ರೀಸಿದ್ಧಲಿಂಗೇಶ್ವರ ಸಂಸ್ಕೃತ ಪಾಠಶಾಲೆಯಲ್ಲಿ ವಿಶ್ವ ಸಂಸ್ಕೃತೋತ್ಸವ ಮತ್ತು ರಕ್ಷಾಬಂಧನ ಕಾರ್ಯಕ್ರಮದ ದಿವ್ಯಸಾನ್ನಿಧ್ಯವನ್ನು ವಹಿಸಿ ಮಾತನಾಡಿದರು. ಇಂಗ್ಲಿಷ್ ಮೊದಲಗೊಂಡು ಜಗತ್ತಿನ ಎಲ್ಲ ಭಾಷೆಗಳ ಮೇಲೆ ಸಂಸ್ಕೃತ ತನ್ನ ಅಚ್ಚಳಿಯದ ಪ್ರಭಾವ ಬೀರಿದೆ. ಮಾತೃ-ಮದರ್. ಪಿತ್ಕ್ಯ-ಫಾದರ್ ಹೀಗೆ ಎಲ್ಲ ಭಾಷೆಗಳ ಮೂಲ ಬೇರು ಸಂಸ್ಕೃತದಲ್ಲಿದೆ. ಸಂಸ್ಕೃತದಲ್ಲಿರುವಷ್ಟು ಸೊಗಸು. ಸೌಂದರ್ಯ ಉಳಿದ ಭಾಷೆಗಳಲ್ಲಿ ಅಷ್ಟೊಂದಿಲ್ಲ ಎಂದು ಅವರು ಅಭಿಪ್ರಾಯಪಟ್ಟರು. ಇದೇ ಸಂದರ್ಭದಲ್ಲಿ ಕಾರ್ಯಕ್ರಮದ ನೇತೃತ್ವ ವಹಿಸಿದ ಕತ್ರಿದಡ್ಡಿ ಯೋಗಾಶ್ರಮದ ಶ್ರೀಓಂ ಗುರೂಜಿ ಅವರು ರಕ್ಷಾ ಬಂಧನದ ಮಹತ್ವವನ್ನು ವಿವರಿಸಿದರು. ಸಹೋದರರ ಪ್ರೀತಿ ವಾತ್ಸಲ್ಯಕ್ಕೆ ರಕ್ಷಾಬಂಧನ ಒಂದು ಉಜ್ವಲ ನಿದರ್ಶನವಾಗಿದೆ ಎಂದರು. ಜಿ.ಜಿ.ಯಳ್ಳೂರ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿ ಗೀತಾ ಮರಡಿಮಠ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಸಂಸ್ಕೃತ ಶಿಕ್ಷಕ ವೀರಭದ್ರಯ್ಯ ಶಾಸ್ತ್ರಿ ಅವರು ಪ್ರಾಸ್ತಾವಿಕ ಮಾತನಾಡಿ, ಕರ್ನಾಟಕದಲ್ಲಿ ಸಂಸ್ಕೃತ ವಿಶ್ವವಿದ್ಯಾಲಯ ಅಸ್ತಿತ್ವಕ್ಕೆ ಬಂದ ನಂತರ, ಸಂಸ್ಕೃತ ಭಾಷೆಯ ಅಧ್ಯಯನ-ಅಧ್ಯಾಪನ-ಸಂಶೋಧನಾ ಯೋಜನೆಗಳು ಕ್ರಿಯಾಶೀಲವಾಗಿ ಮುನ್ನಡೆಯುತ್ತಿವೆ. ಸಂಸ್ಕೃತ ಭಾಷೆಯ ಬಗೆಗೆ ವಿದ್ಯಾರ್ಥಿಗಳಲ್ಲಿ ಒಲವು ಮೂಡುತ್ತಿದೆ. ದೇವಭಾಷೆಯೆಂದು ಖ್ಯಾತವಾದ ಸಂಸ್ಕೃತ ಭಾಷೆಯು ವಿದ್ಯಾರ್ಥಿಗಳಲ್ಲಿ ಉತ್ತಮ ಸಂಸ್ಕಾರವನ್ನು ಕಲಿಸುತ್ತದೆ. ತನ್ಮೂಲಕ ಸರ್ವಾಂಗ ಸುಂದರ ಸ್ವಾಸ್ಥ್ಯ ಸಮಾಜಕ್ಕೆ ದಾರಿ ಮಾಡಿಕೊಡುತ್ತದೆ ಎಂದರು. ಡಿ.ಡಿ.ಜಾಧವ ನಿರೂಪಣೆ ಮಾಡಿದರು. ಲಕ್ಷ್ಮಣ ರೋಣಿ ವಂದಿಸಿದರು.