

ಚಿತ್ರದುರ್ಗ: ಸಂಸ್ಕೃತ ಬರೀ ಭಾಷೆಯಾಗಿರದೆ ಭಾರತೀಯರ ಜೀವನಾಡಿಯಾಗಿದೆ ಎಂದು ಸಂಸ್ಕೃತ ಶಿಕ್ಷಣ ನಿರ್ದೇಶನಾಲಯ ನಿರ್ದೇಶಕ ಪ್ರೊ. ಸಿ.ಪಾಲಯ್ಯ ಹೇಳಿದರು.
ಬೆಂಗಳೂರು ಸಂಸ್ಕೃತ ವಿಶ್ವವಿದ್ಯಾಲಯ, ಸಂಸ್ಕೃತ ಶಿಕ್ಷಣ ನಿರ್ದೇಶನಾಲಯ ಹಾಗೂ ಕರ್ನಾಟಕ ಪ್ರೌಢಶಾಲಾ ಸಂಸ್ಕೃತ ಅಧ್ಯಾಪಕರ ಸಂಘ ಜಿಲ್ಲಾಶಾಖೆ ಆಶ್ರಯದಲ್ಲಿ ನಗರದ ಶ್ರೀ ಕಬೀರಾನಂದಾಶ್ರಮದಲ್ಲಿ ಈಚೆಗೆ ಏರ್ಪಡಿಸಿದ್ದ ‘ಸಂಸ್ಕೃತೋತ್ಸವ’ ಪ್ರತಿಭಾ ಪುರಸ್ಕಾರ ಹಾಗೂ ಬಹುಮಾನ ವಿತರಣಾ ಕಾರ‌್ಯಕ್ರಮದಲ್ಲಿ ಅವರು ಮಾತನಾಡಿ, ಸಂಸ್ಕೃತ ಸಂಸ್ಕಾರ ಕಲಿಸುತ್ತದೆ.
ಸಮಾಜದಲ್ಲಿ ಉತ್ತಮ ಪ್ರಜೆಗಳಾಗಿ ಹೊರ ಹೊಮ್ಮಲು ನೆರವಾಗುತ್ತದೆ. ಈ ಭಾಷೆ ಯಾವುದೋ ಒಂದು ಪಂಗಡಕ್ಕೆ ಸೀಮಿತವಾಗಿಲ್ಲ. ಸಾವಿರಾರು ವರ್ಷಗಳಿಂದ ನಮ್ಮ ಪ್ರಾಚೀನರು ಈ ಭಾಷೆಯನ್ನು ಬಳಸಿಕೊಂಡು ಬಂದಿದ್ದಾರೆ ಎಂದರು.
ಡಿಡಿಪಿಐ ಎಂ.ಆರ್.ಮಂಜುನಾಥ್ ಅವರು ಮಾತನಾಡಿ, ಸಂಸ್ಕೃತ ಎಲ್ಲ ಭಾಷೆಗಳಿಗೆ ತಾಯಿ ಇದ್ದಂತೆ, ಕಲೆ, ಸಾಹಿತ್ಯ, ಸಂಗೀತ, ಶಿಲ್ಪ ಕಲೆಗಳು ಇದರಲ್ಲಿ ಅಡಗಿವೆ ಎಂದರು.
ಸಾನ್ನಿಧ್ಯ ವಹಿಸಿದ್ದ ಶ್ರೀ ಶಿವಲಿಂಗಾನಂದ ಸ್ವಾಮೀಜಿ ಮಾತನಾಡಿ, ಇಂಗ್ಲಿಷ್ ವ್ಯಾಮೋಹದಿಂದಾಗಿ ಕನ್ನಡ ಶಾಲೆಗಳು ಮುಚ್ಚುವಂಥ ಸ್ಥಿತಿ ಬಂದಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಡಾ.ಕೆ.ಕೃಷ್ಣಮೂರ್ತಿ, ಎಚ್.ಸಿ.ಗಂಗಾಧರಯ್ಯ, ರಾಜಣ್ಣ, ಗಿರೀಶ್, ಲಕ್ಷ್ಮೀನಾರಾಯಣ, ಗಣಪತಿ ಶಾಸ್ತ್ರಿ, ಸುಬ್ರಾಯ್ ಭಟ್ ಇದ್ದರು.
ಅನನ್ಯ ಸಂಗಡಿಗರು ಪ್ರಾರ್ಥಿಸಿದರು, ಗುರುಮೂರ್ತಿ ಸ್ವಾಗತಿಸಿದರು. ಲಾಸಿಕಾ ಫೌಂಡೇಷನ್ ವಿದ್ಯಾರ್ಥಿಗಳು ಭರತನಾಟ್ಯ ಕಾರ‌್ಯಕ್ರಮ ನಡೆಸಿಕೊಟ್ಟರು. ಎಸ್ಸೆಸ್ಸೆಲ್ಸಿಯಲ್ಲಿ ದ್ವಿತಿಯ, ತೃತೀಯ ಭಾಷೆಯಾಗಿ ಸಂಸ್ಕೃತವನ್ನು ತೆಗೆದುಕೊಂಡು ಹೆಚ್ಚು ಅಂಕ ಪಡೆದ ಹಾಗೂ ವಿವಿಧ ಸ್ಪರ್ಧೆಗಳ ವಿಜೇತ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.