

ಚಾಮರಾಜನಗರ: ಗುಣಮಟ್ಟ ಹಾಗೂ ಸಂಸ್ಕಾರಯುತ ಶಿಕ್ಷಣ ದೊರೆತದಾಗ ಮಕ್ಕಳು ಭವಿಷ್ಯ ಉಜ್ವಲವಾಗುತ್ತದೆ ಎಂದು ಜಿಲ್ಲಾ
ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮೋನಾ ರೋತ್ ತಿಳಿಸಿದರು.
ನಗರದ ಜೆಎಸ್‌ಎಸ್ ಪಬ್ಲಿಕ್ ಸ್ಕೂಲ್‌ನ 11ನೇ ವಾರ್ಷಿಕೋತ್ಸವದ ಅಂಗವಾಗಿ ಬುಧವಾರ ಆಯೋಜಿಸಿದ್ದ ಸಂಸ್ಕೃತಿ ಸಂಗಮ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಶಿಕ್ಷಣದ ಜತೆಗೆ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬೇಕು. ಈ ನಿಟ್ಟಿನಲ್ಲಿ ಜೆಎಸ್‌ಎಸ್ ಮಹಾವಿದ್ಯಾಪೀಠ ಶಿಕ್ಷಣ, ಆರೋಗ್ಯ ಮತ್ತು ಸಂಸ್ಕೃತಿಯನ್ನು ಬಿಂಬಿಸುವ ಶಿಕ್ಷಣವನ್ನು ನೀಡುತ್ತಿದೆ. ಇಂಥ ಶಿಕ್ಷಣದಿಂದ ಜಿಲ್ಲೆ ಹಾಗೂ ರಾಜ್ಯ ಅಭಿವೃದ್ದಿಯತ್ತ ಸಾಗುತ್ತದೆ. ಸರ್ಕಾರ ಯೋಜನೆಗಳು ಸದ್ಬಳಕೆಯ ಜತೆಗೆ ಹೆಚ್ಚು ಪರಿಣಾಮಕಾರಿಯಾಗಿ ಅನುಷ್ಠಾನಗೊಳ್ಳುತ್ತದೆ. ಈ ನಿಟ್ಟಿನಲ್ಲಿ ಜೆಎಸ್‌ಎಸ್ ವಿದ್ಯಾಪೀಠ ಸೇವೆ ಅನನ್ಯ, ಇಂಥ ಸಂಸ್ಥೆಯಲ್ಲಿ ವ್ಯಾಸಂಗ ಮಾಡುತ್ತಿರುವ ಮಕ್ಕಳು ಕಲಿಕಾ ಪ್ರಗತಿ ತೃಪ್ತಿದಾಯಕವಾಗಿದೆ ಎಂದರು.
ಜೆಎಸ್‌ಎಸ್ ಸಾರ್ವಜನಿಕ ಸಂಪರ್ಕ ಅಧಿಕಾರಿ ಆರ್.ಎಂ.ಸ್ವಾಮಿ ಮಾತನಾಡಿ, ಮಕ್ಕಳಿಗೆ ಸಂಸ್ಕಾರಯುತ ಶಿಕ್ಷಣ ದೊರೆಯಬೇಕೆಂಬ ಉದ್ದೇಶದಿಂದ ಶ್ರೀಗಳು ಶಿಕ್ಷಣ ಸಂಸ್ಥೆಯನ್ನು ಆರಂಭಿಸಿರುವುದು ಫಲಪ್ರದವಾಗಿದೆ. ಬೆಳೆಯುವ ಪೈರು ಮೊಳಕೆಯಲ್ಲಿ ನೋಡು ಎಂಬಂತೆ ನಿಮ್ಮ ಮಕ್ಕಳ ಸಾಧನೆಯನ್ನು ವೇದಿಕೆಯಲ್ಲಿ ನೋಡಿದ್ದೀರಿ. ಎಲ್‌ಕೆಜಿಯಿಂದ ಎಸ್‌ಎಸ್‌ಎಲ್‌ಸಿವರೆಗೆ ಹೆಚ್ಚು ಅಂಕ ಪಡೆದು ವಿದ್ಯಾರ್ಥಿಗಳನ್ನು ಸನ್ಮಾನಿಸಲಾಗಿದೆ ಎಂದು ಹೇಳಿದರು.
ಶಾಲೆಯಲ್ಲಿ ಕಳೆದ ವರ್ಷದ ಹೆಚ್ಚು ಅಂಕ ಪಡೆದ ಎಲ್‌ಕೆಜಿಯಿಂದ 10ನೇ ತರಗತಿ ವರೆಗಿನ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ಹಾಗೂ ನೆನಪಿನ ಕಾಣಿಕೆ ನೀಡಿ ಗಣ್ಯರು ಅಭಿನಂದಿಸಿದರು. ನಂತರ ವಿದ್ಯಾರ್ಥಿಗಳಿಂದ ಸಂಸ್ಕೃತಿ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಪ್ರಾಂಶುಪಾಲ ಎಚ್.ಎಂ. ಉಮೇಶ್, ಸಹ ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಪಾಲಕರು ಇದ್ದರು.