ಸಂಸ್ಕಾರಯುತ ಮಕ್ಕಳಿಂದ ಉನ್ನತ ಹುದ್ದೆ

1301KLB 01
Published on

ಕಲಬುರಗಿ: ಪ್ರಸ್ತುತ ಸಂಸ್ಕಾರ, ಮೌಲ್ಯಯುತ ಶಿಕ್ಷಣ ಅವಶ್ಯವಿದೆ. ಮಕ್ಕಳು ಶಿಕ್ಷಣ ಪಡೆದು ಉನ್ನತ ಹುದ್ದೆಗೆ ಹೋಗುತ್ತಿದ್ದಾರೆ. ಆದರೆ ಹೆತ್ತವರನ್ನು ಮರೆಯುತ್ತಿದ್ದಾರೆ ಎಂದು ಶಾಸಕ ಅಲ್ಲಮಪ್ರಭು ಪಾಟೀಲ್ ಕಳವಳ ವ್ಯಕ್ತಪಡಿಸಿದರು.

ನಗರದ ಹೊರವಲಯದ ಕೆಸರಟಗಿ ರಸ್ತೆಯಲ್ಲಿನ ಕಾಯಕ ಫೌಂಡೇಷನ ಶಿಕ್ಷಣ ಸಂಸ್ಥೆಯ ವಸತಿ ಶಾಲೆ, ವಿಜ್ಞಾನ, ವಾಣಿಜ್ಯಕಾಲೇಜಿನ ವಾರ್ಷಿಕೋತ್ಸವದ ಕಾಯಕ ಸಂಭ್ರಮದಲ್ಲಿ ಮಾತನಾಡಿ, ಮಕ್ಕಳಲ್ಲಿ ಪ್ರೀತಿ, ವಾತ್ಸಲ್ಯ, ಕರುಣೆ, ವಿಶ್ವಾಸ, ಪರೋಪಕಾರ, ತಾಳ್ಮೆಯನ್ನು ಬೆಳೆಸಿದಾಗ ಉತ್ತಮ ಪ್ರಜೆಗಳಾಗುತ್ತಾರೆ ಎಂದರು.

ದಾವಣಗೆರೆಯ ರೆಡ್ಡಿ ಗುರುಪೀಠದ ಶ್ರೀ ವೇಮಾನಂದ ಸ್ವಾಮೀಜಿ ಮಾತನಾಡಿ, ಎಲ್ಲರೂ ಕಾಯಕ ಜೀವಿಗಳಾಗಿ ಬದುಕಿದಾಗ ಉತ್ತಮ ಫಲ ದೊರೆಯುತ್ತದೆ. ಕಾಯಕದಲ್ಲೇ ಕೈಲಾಸ ಕಾಣಬೇಕು. ಕ್ರೀಯಾಶೀಲರಾಗಿ ಸಂಸ್ಕಾರಯುತ ಜೀವನ ಸಾಗಿಸಬೇಕು ಎಂದು ನುಡಿದರು.

ಜೆಸ್ಕಾಂ ಎಂಡಿ ರವೀಂದ್ರ ಕರಲಿಂಗಣ್ಣನವರ ಮಾತನಾಡಿ, ಸ್ಪರ್ಧಾತ್ಮಕ ಯುಗದಲ್ಲಿ ಮಕ್ಕಳು ಕ್ರಮಬದ್ಧ ಅಭ್ಯಾಸ ಮಾಡಿದರೆ ಸಾಧಕರಾಗಬಹುದು ಎಂದು ಹೇಳಿದರು.

ಸಂಸ್ಥೆ ಸಂಸ್ಥಾಪಕ ಶಿವರಾಜ ಪಾಟೀಲ್ ಮಾತನಾಡಿ, ಮಕ್ಕಳಲ್ಲಿ ಸಂಸ್ಕಾರ ಬೆಳೆದರೆ ಹೆತ್ತವರಿಗೆ, ಗುರು ಹಿರಿಯರಿಗೆ, ಶಿಕ್ಷಕರಿಗೆ ಗೌರವ ನೀಡುತ್ತಾರೆ. ಆಗ ಮಾತ್ರ ಭಾರತ ಸೂಪರ್ ಪವರ್ ಆಗುತ್ತದೆ ಎಂದರು.

ವಿದ್ಯಾರ್ಥಿಗಳಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಸಪ್ನಾ ರೆಡ್ಡಿ ಪಾಟೀಲ್ ಅಧ್ಯಕ್ಷತೆ ವಹಿಸಿದ್ದರು. ಜೆಸ್ಕಾಂ ಅಧಿಕಾರಿ ಸಚಿನ ಹುಂಡೇಕಾರ, ಮಾಜಿ ಮಹಾಪೌರ ಮಹೇಶ ಹೊಸುರಕರ್, ಶಂಕರಗೌಡ ಪೊಲೀಸ್ ಪಾಟೀಲ್, ಗೋವಿಂದ ಕುಲಕರ್ಣಿ, ಡಾ.ವೀರಣ್ಣ ಕಲಕೋರಿ, ಬಸವರಾಜ ರಡ್ಡಿ, ರಾಜೇಶ ರಡ್ಡಿ ಇತರರಿದ್ದರು. ಪ್ರಾಂಶುಪಾಲ ನಾಗರಾಜ ಕಾಮಾ ಸ್ವಾಗತಿಸಿದರು. ಅಮೂಲ್ಯ, ಸೃಷ್ಟಿ ನಿರೂಪಣೆ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net