

ಗೊರೇಬಾಳ: ಆರ್ಯವೈಶ್ಯ ಸಮುದಾಯದ ಯುವಕರು ದುಡಿಮೆಯೊಂದಿಗೆ ಸಂಸ್ಕಾರವಂತರಾದಲ್ಲಿ ಸಮಾಜದ ಏಳಿಗೆ ಸಾಧ್ಯವಾಗಲಿದೆ ಎಂದು ಕರ್ನಾಟಕ ಆರ್ಯವೈಶ್ಯ ಯುವಜನ ಮಹಾಸಭಾ ಅಧ್ಯಕ್ಷ ಎಸ್.ಸುನೀಲ್ ಹೇಳಿದರು.
ಶ್ರೀಪುರಂ ಜಂಕ್ಷನ್‌ನ ವಾಸವಿ ಕನ್ಯಕಾ ಪರಮೇಶ್ವರಿ ಕಲ್ಯಾಣ ಮಂಟಪದಲ್ಲಿ ವಾಸವಿ ಯುವಜನ ಸಂಘದ ಸಂಯುಕ್ತಾಶ್ರಯದಲ್ಲಿ ಕರ್ನಾಟಕ ಆರ್ಯವೈಶ್ಯ ಯುವಜನ ಮಹಾಸಭಾದಿಂದ ಆಯೋಜಿಸಿದ್ದ ‘ಹನುಮನಾಡು ವಿಭಾಗೀಯ ಸ್ನೇಹ ಸಮ್ಮಿಲನ’ ಕಾರ್ಯಕ್ರಮದಲ್ಲಿ ಶುಕ್ರವಾರ ಮಾತನಾಡಿದರು.
ತಂದೆ-ತಾಯಿಯ ಆಶ್ರಯದಲ್ಲಿದ್ದು ನಿಮ್ಮ ಜಾಣ್ಮೆಯಿಂದ ದುಡಿಮೆ ಮಾಡಿದಾಗ ತಾಯಿಯ ಋಣ ತೀರಿಸಲು ಸಹಕಾರಿಯಾಗಲಿದೆ. ಪಾಲಕರು ಕಷ್ಟಪಟ್ಟು ಮಕ್ಕಳನ್ನು ಓದಿಸುತ್ತಾರೆ. ಕೆಲಸ ಅರಸಿಕೊಂಡು ಬೆಂಗಳೂರಿಗೆ ಹೋಗುತ್ತಾರೆ. ಜಮಿನು ಇದ್ದರೆ ಅದರಲ್ಲೇ ಬೆಳೆ ಬೆಳೆಯಬೇಕೆಂದು ಸಲಹೆ ನೀಡಿದರು.
ದಾವಣಗೆರೆಯ ಜಗನ್ನಾಥ ನಾಡಿಗೇರ ಉಪನ್ಯಾಸ ನೀಡಿ, ತಾಯಂದಿರು ಮಕ್ಕಳನ್ನು ಸಂಸ್ಕಾರವಂತರನ್ನಾಗಿ ಮಾಡುವ ಮೊದಲ ಗುರುಗಳಾಗಬೇಕು. ಮಕ್ಕಳಿಗೆ ಮೊಬೈಲ್ ನೀಡಬಾರದು ಎಂದು ಸಲಹೆ ನೀಡಿದರು. ವಾಸವಿ ಯುವಜನ ಸಂಘದ ಸ್ಥಳೀಯ ಘಟಕದ ಅಧ್ಯಕ್ಷ ವಜ್ರಾಲ ವೀರಯ್ಯ ಶ್ರೇಷ್ಠಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಮಹಾಸಭಾ ಉಪಾಧ್ಯಕ್ಷ ಆನಂದ ಗುರುಗುಂಟಾ, ನಿರ್ದೇಶಕ ಇಲ್ಲೂರು ವೀರಭದ್ರಪ್ಪ ಶ್ರೇಷ್ಠಿ, ಡಿ.ವಿ.ಸತ್ಯನಾರಾಯಣ ಶ್ರೇಷ್ಠಿ, ಜಿ.ಬಿ.ಕೋಟೇಶ್ವರರಾವ್, ಕೃಷ್ಣ ಕೆ., ಎ.ವೈ.ಮಧುಸೂದನ, ಆನಂದ ದೇವರಶೆಟ್ಟಿ, ರಮೇಶ್ ಚಿತ್ರಾಲಿ, ಎಸ್.ನಾಗೇಶ, ಎಂ.ಮಂಜುನಾಥ, ಕೆ.ಕೆ.ವಿಶ್ವೇಶ್ವರ ರಾವ್, ಯು.ಹೇಮಾಮಣಿ ಇತರರಿದ್ದರು.