

ಅಥಣಿ ಗ್ರಾಮೀಣ: ನಮ್ಮ ಮಕ್ಕಳಿಗೆ ಸರಿಯಾದ ಸಂಸ್ಕಾರ ಸಿಗದಿದ್ದರೆ, ನಮ್ಮನ್ನು ವೃದ್ಧಾಶ್ರಮಕ್ಕೆ ಅಟ್ಟುತ್ತಾರೆ ಎಂದು ಇಂಚಗೇರಿಯ ರೇವಣಸಿದ್ಧೇಶ್ವರ ಮಹಾರಾಜರು ಹೇಳಿದರು.
ಅಥಣಿ ತಾಲೂಕಿನ ರಡ್ಡೇರಹಟ್ಟಿ ಗ್ರಾಮದ ಗಿರಿಮಲ್ಲೇಶ್ವರ ಮಹಾರಾಜರ ಆಶ್ರಮ ಉದ್ಘಾಟನೆ, ಮೂರ್ತಿ ಪ್ರತಿಷ್ಠಾಪನೆ ಹಾಗೂ ಕಳಸಾರೋಹಣ ನಿಮಿತ್ತ ಶನಿವಾರ ಹಮ್ಮಿಕೊಂಡಿದ್ದ ಕುಂಭೋತ್ಸವ, ಗಿರಿಮಲ್ಲೇಶ್ವರ ಮಹಾರಾಜರ ಮೂರ್ತಿ ಮೆರವಣಿಗೆ ಹಾಗೂ ದಾಸಬೋಧ, ವೀಣಾಪೂಜೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮಕ್ಕಳಿಗೆ ಶಿಣ ಕೊಡಿಸಲು ದೂರದ ಹಾಸ್ಟೆಲ್ನಲ್ಲಿ ಇಡುವ ಪರಿಪಾಠ ಬೆಳೆಯುತ್ತಿದೆ. ಇದರಿಂದ ಮಕ್ಕಳಿಗೆ ಪಾಲಕರ ಬಾಂಧವ್ಯ ಅರ್ಥ ಮಾಡಿಕೊಳ್ಳಲು ಆಗುತ್ತಿಲ್ಲ. ಇದರಿಂದ ಮುಪ್ಪಿನಾವಸ್ಥೆಯಲ್ಲಿ ತಂದೆ&ತಾಯಿಯನ್ನು ವೃದ್ಧಾಶ್ರಮಕ್ಕೆ ಅಟ್ಟುವ ಪ್ರವೃತ್ತಿ ಹೆಚ್ಚುತ್ತದೆ. ಸಂಸ್ಕಾರದಿಂದ ಬದುಕು ಸುಗಮ ಎಂದರು.
ಪದವಿಗಾಗಿ ವಿದ್ಯೆ ಕಲಿತರೆ ಅದು ವ್ಯಾಪಾರ. ವಿದ್ಯೆ ನಮಗೆ ಸಂಸ್ಕಾರ ಮತ್ತು ಸೇವೆ ಕಲಿಸಿಕೊಡಬೇಕು. ಧರ್ಮ ಮಾರ್ಗದಲ್ಲಿ ಹಣ, ಆಸ್ತಿ, ಆಭರಣ ಸಂಪಾದಿಸಿದರೆ ತಪ್ಪಿಲ್ಲ. ಆದರೆ ಅವಸರಪಟ್ಟು ಅನರ್ಥ ಕಾರ್ಯ ಮಾಡದಿರಿ. ಗಿರಿಮಲ್ಲೇಶ್ವರರ ಆದರ್ಶ ಅಳವಡಿಸಿಕೊಳ್ಳಬೇಕು ಎಂದರು.
ಪ್ರವಚನಕಾರ ವಿಲಾಸರಾವ ಮಹಾರಾಜರು ಮಾತನಾಡಿ, ಸದ್ಗುರುವಿನ ಕರುಣೆ ಸಿಗಬೇಕಾದರೆ ದಾನ ಮಾಡಬೇಕು. ಹಸಿದವರಿಗೆ ತುತ್ತು ಅನ್ನ ನೀಡಬೇಕು ಎಂದರು.
ಗ್ರಾಮದ ಸರ್ಕಾರಿ ಪ್ರೌಢಶಾಲೆಯಿಂದ ವಾಲ್ಮೀಕಿ, ಬಸವೇಶ್ವರ ವೃತ್ತದ ಮೂಲಕ ಆಶ್ರಮದವರೆಗೆ ಗಿರಿಮಲ್ಲೇಶ್ವರ ಮಹಾರಾಜರ ಮೂರ್ತಿ ಮೆರವಣಿಗೆ ನೆರವೇರಿತು. 3 ಸಾವಿರ ಸುಮಂಗಲೆಯರು ಕುಂಭೋತ್ಸವದಲ್ಲಿ ಪಾಲ್ಗೊಂಡರು. ರಡ್ಡೇರಹಟ್ಟಿಯ ಸದಾಶಿವ ಮಹಾರಾಜರು, ಅಭಿಯಂತ ಸಂಗಮೇಶ ಬೆಳ್ಳಂಕಿ ಮಾತನಾಡಿದರು. ಅಣ್ಣಾಸಾಬ ಬಿಸಲಾಪುರ ದಾಸಬೋಧ ವಾಚಿಸಿದರು. ಸದಾಶಿವ ಗಲಗಲಿ, ಬಸಪ್ಪ ಖೋತ, ಅಶೋಕ ಬೆಳ್ಳಂಕಿ, ಮುರಿಗೆಪ್ಪ ಗಲಗಲಿ, ನಾಗಪ್ಪ ಬೆಳ್ಳಂಕಿ, ಪಾಂಡು ಭೋಸಲೆ, ಅಣ್ಣಪ್ಪ ಕಿತ್ತೂರ, ಬಸವರಾಜ ಬೆಳ್ಳಂಕಿ, ಬಾಬು ಹುಲ್ಯಾಳ, ವಿಜಯ ಪೋತದಾರ, ಜ್ಞಾನೇಶ್ವರ ಖೋತ, ಚನ್ನಪ್ಪ ಪಾಟೀಲ, ಮಹಾಂತೇಶ ಜನವಾಡ, ಬಾಹುಬಲಿ ದಾದಪ್ಪಗೋಳ, ರಾಜು ಚನ್ನಾಪುರ ಇತರರಿದ್ದರು.