ಸಂಸ್ಕಾರದ ಅರಿವು ಮಕ್ಕಳಿಗೆ ಸಿಗಲಿ

20 vikram 4
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ಇತ್ತೀಚಿನ ದಿನಗಳಲ್ಲಿ ಗರ್ಭ ಸಂಸ್ಕೃತಿ ಮತ್ತು ಸಂಸ್ಕಾರದ ಅರಿವು ಇಲ್ಲದ ಕಾರಣ ಅನೇಕರು ತೊಂದರೆ ಅನುಭವಿಸುತ್ತಿದ್ದಾರೆ. ಇದನ್ನು ತಡೆಯಲು ಇಂತಹ ಕಾರ್ಯಕ್ರಮ ಯೋಜನೆ ಹೆಚ್ಚಾಗಬೇಕು ಎಂದು ಡಾ. ಸಿಸ್ಟರ್​ ವೀಣಾ ಬ್ರಗಾಂಝ ಹೇಳಿದರು.

ರೋಟರಿ ಕ್ಲಬ್​ ಧಾರವಾಡ ವತಿಯಿಂದ ನಗರದ ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾದ ಸಭಾಭವನದಲ್ಲಿ ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾ, ಸಿ.ಬಿ. ಗುತ್ತಲ ಆಯುರ್ವೇದಿಕ ವೈದ್ಯಕಿಯ ಕಾಲೇಜು, ಬಿ.ಡಿ. ಜತ್ತಿ ಹೋಮಿಯೋಪಥಿ ವೈದ್ಯಕಿಯ ಕಾಲೇಜು ಹಾಗೂ ಧಾರವಾಡ ಹಮ್​ ಫೌಂಡೇಶನ್​ ಭಾರತ ಆಶ್ರಯದಲ್ಲಿ ಭಾನುವಾರ ಏರ್ಪಡಿಸಿದ್ದ ಗರ್ಭ ಸಂಸ್ಕಾರ ಅರಿವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಹಿಂದಿನ ಕಾಲದಲ್ಲಿ ಹಿರಿಯರ ಮಾರ್ಗದರ್ಶನ ಹಾಗೂ ಸಂಸ್ಕಾರದ ಅರಿವು ಮಕ್ಕಳಿಗೆ ಸಿಗುತ್ತಿದ್ದ ಕಾರಣ ಅವರಲ್ಲಿ ಅರಿವಿತ್ತು. ಋತುಮತಿ ನಂತರ ಹಾಗೂ ಮದುವೆ, ಮಕ್ಕಳು ಆಗುವರೆಗೂ ಆರೋಗ್ಯ ರಕ್ಷಣೆ ಕುರಿತು ಮಾಹಿತಿ ಸಿಗುತ್ತಿತ್ತು. ಹಿರಿಯರು ಅನುಸರಿಸುತ್ತಿದ್ದ ಆಹಾರ, ವಿಹಾರ ಪದ್ಧತಿ ಅಳವಡಿಸಿಕೊಂಡು ಸುಖ ಜೀವನ ನಡೆಸಬೇಕು ಎಂದರು.

ಡಾ. ಅಶ್ವಿನಿ ವೆಂಕಟೇಶ ಮಾತನಾಡಿ, ಸನಾತನ ಧರ್ಮದಲ್ಲಿ ಸಂಸ್ಕಾರಗಳನ್ನು ಹಿರಿಯರು ಮಕ್ಕಳಿಗೆ ತಿಳಿಸಿ ಜಾಗೃತಿ ಮೂಡಿಸುತ್ತಿದ್ದರು. ಹೀಗಾಗಿ ನಮ್ಮ ಕಾಲದ ಮಕ್ಕಳು ಉತ್ತಮ ಸಂಸ್ಕಾರ ಪಡೆದರು. ಆದರೆ ಇತ್ತೀಚೆಗೆ ಗರ್ಭಿಣಿ ತನ್ನ ಆಹಾರ ಪದ್ಧತಿ ಆಳವಡಿಕೆ ಮಾಡುವಲ್ಲಿ ಜಾರುತ್ತಿದ್ದಾರೆ. ಮಗು ಗರ್ಭದಲ್ಲಿದ್ದಾಗ ಉತ್ತಮ ಹವ್ಯಾಸ, ಓದು, ಯೋಗ, ವ್ಯಾಯಾಮದ ಜತೆಗೆ ಉತ್ತಮ ಆಹಾರ ಪಡೆಯಬೇಕು. ಟಿವಿ, ಮೋಬೈಲ್​ ಬಿಟ್ಟು ಸಮಾಜದ ಜತೆಗೆ ಬೆರೆತು ಮನಸ್ಸು ಶಾಂತವಾಗಿ ಇಟ್ಟುಕೊಂಡು ಒಳ್ಳೆ ಮಕ್ಕಳಿಗೆ ಜನ್ಮ ನೀಡಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಮಾಜಿ ಮೇಯರ್​ ಈರೇಶ ಅಂಚಟಗೇರಿ ಮಾತನಾಡಿ, ಇಂತಹ ವಿನೂತನ ಕಾರ್ಯಕ್ರಮಗಳನ್ನು ಇನ್ನು ಹೆಚ್ಚಿನ ಸಂಖ್ಯೆಯಲ್ಲಿ ಏರ್ಪಡಿಸಿ ಜನರಲ್ಲಿ ಅರಿವು ಮೂಡಿಸಬೇಕು. ವಿಶೇಷವಾಗಿ ದಂಪತಿಗೆ ಇಂತಹ ಮಾಹಿತಿ ಅವಶ್ಯಕತೆ ಇದೆ ಎಂದರು.

ನಗರದ ನೂರಾರು ದಂಪತಿ ಕಾರ್ಯಕ್ರಮದಲ್ಲಿ ಭಾವಗಹಿಸಿದ್ದರು. ರೋಟರಿ ಕ್ಲಬ್​ ಅಧ್ಯಕ್ಷ ಲಕ್ಷ್ಮೀಕಾಂತ ನಾಯಿಕ, ಡಾ. ಸುನೀತ್​ ಪುರೋಹಿತ, ಡಾ. ಸುಜಾತಾ ಸರನಾಡಗೌಡರ, ಲಕ್ಷ್ಮೀ ಪಾಟೀಲ, ಜಗದೀಶ ಮಳಿಗಿ, ಅಶೋಕ ನಾಗಸಮುದ್ರ, ಶ್ರೀಕಾಂತ ದೊಡವಾಡ, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net