

ಹಾಸನ: ಹಾಸನದ ಸಂಸದರು ನನಗಿಂತ ವಯಸ್ಸಿನಲ್ಲಿ ಕಿರಿಯರು. ಅವರು ನನ್ನ ಬಗ್ಗೆ ಏಕವಚನದಲ್ಲಿ ಮಾತನಾಡಿರುವುದು ಅವರ ಹತಾಶ ಮನೋಭಾವನೆ ಮತ್ತು ಸಂಸ್ಕೃತಿಯನ್ನು ಬಿಂಬಿಸುತ್ತದೆ’ ಎಂದು ಶಾಸಕ ಪ್ರೀತಂಗೌಡ ತಿರುಗೇಟು ನೀಡಿದರು.
ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಮನೆ ಮತ್ತು ಪಕ್ಷದಲ್ಲಿ ಸಂಸ್ಕಾರ ಕಲಿಸಿಕೊಟ್ಟಿದ್ದಾರೆ. ನಾನು 10 ವರ್ಷದ ಬಾಲಕನಿಗೂ ಏಕವಚನದಲ್ಲಿ ಮಾತನಾಡಿಸುವುದಿಲ್ಲ. ಗೌರವ ಕೊಟ್ಟು, ಗೌರವ ತೆಗೆದುಕೊಳ್ಳುತ್ತೇನೆ. ಜನಪ್ರತಿನಿಧಿಗಳನ್ನು ಕುರಿತು ಸಾರ್ವಜನಿಕವಾಗಿ ಯಾವ ರೀತಿ ಮಾತನಾಡಬೇಕು ಎಂಬುದನ್ನು ಮುಂದಿನ ದಿನಗಳಲ್ಲಿ ಮತದಾರರು ಹೇಳಿಕೊಡಲಿದ್ದಾರೆ ಎಂದರು.
ಸಾರ್ವಜನಿಕವಾಗಿ ಮತ್ತು ಮಾಧ್ಯಮಗಳ ಬಳಿ ಯಾವ ರೀತಿ ಮಾತನಾಡಬೇಕು, ಕಾರ್ಯಕರ್ತರನ್ನು ಯಾವ ರೀತಿ ನಡೆಸಿಕೊಳ್ಳಬೇಕು ಎಂಬ ಕುರಿತು ಸಂಸದರು ಮತ್ತು ಹೊಳೆನರಸೀಪುರ ಶಾಸಕರಿಗೆ ತರಬೇತಿ ನೀಡಿದರೆ ಒಳ್ಳೆಯದು. ಸಂಸದರ ತಂದೆ ತಮ್ಮದೇ ಪಕ್ಷದ ಕಾರ್ಯಕರ್ತರನ್ನು ಕುಡುಕರು, ರೌಡಿಶೀಟರ್‌ಗಳು ಎನ್ನುತ್ತಾರೆ; ಸಂಸದರು ಚುನಾಯಿತ ಪ್ರತಿನಿಧಿಯನ್ನು ಏಕವಚನದಲ್ಲಿ ಸಂಬೋಧಿಸುತ್ತಾರೆ. ಇದು ಅವರ ಸಂಸ್ಕಾರವನ್ನು ಎತ್ತಿ ತೋರಿಸುತ್ತದೆ ಎಂದು ಟೀಕಿಸಿದರು.
ರಾಜಕೀಯ ಪ್ರಬುದ್ಧತೆ ಇಲ್ಲ:
‘ನಾನು ಚುನಾವಣೆಗೆ ನಿಲ್ಲುವುದು ಹಾಸನ ವಿಧಾನಸಭಾ ಕ್ಷೇತ್ರದಿಂದ, ಮತ ಹಾಕುವವರು ಈ ಕ್ಷೇತ್ರದ ಜನವೇ ಹೊರತು ಇಡೀ ಜಿಲ್ಲೆಯ ಜನ ಅಲ್ಲ. ಈ ಬಗ್ಗೆ ಸಂಸದರಿಗೆ ಮಾಹಿತಿ ಇರುವಂತೆ ಕಾಣುತ್ತಿಲ್ಲ. ರಾಜಕೀಯ ಪ್ರಬುದ್ಧತೆ ಇಲ್ಲದೆ ತಾತನ ಹೆಸರು ಹೇಳಿಕೊಂಡು ಬಂದರೆ ಹೀಗೆ ನಗೆಪಾಟಲಿಗೆ ಈಡಾಗಬೇಕಾಗುತ್ತದೆ ಎಂದು ವ್ಯಂಗ್ಯವಾಡಿದರು.
ಭ್ರಮೆಯಲ್ಲಿರುವುದು ಅವರು:
‘ಬಿಳಿ ಪ್ಯಾಂಟು, ಬಿಳಿ ಶರ್ಟು ಹಾಕಿಕೊಂಡು ತಮ್ಮ ಸುತ್ತ ಇರುವ ಐದಾರು ಜನರ ಮಾತು ಕೇಳಿಕೊಂಡು ಭ್ರಮೆಯಲ್ಲಿರುವವರು ಅವರು, ನಾನಲ್ಲ. ನನ್ನ ಸವಾಲು ಸ್ವೀಕಾರ ಮಾಡಿ ಹಾಸನ ವಿಧಾನಸಭಾ ಕ್ಷೇತ್ರದ ಚುನಾವಣೆಗೆ ಬರಲಿ. ನಾನು ಪುನರಾಯ್ಕೆ ಆಗುವುದರ ಜೊತೆಗೆ ಪಕ್ಕದ ಕ್ಷೇತ್ರದಲ್ಲೂ ಬಿಜೆಪಿ ಗೆಲ್ಲಿಸುತ್ತೇನೆ. ನಾನು ರಿಸಲ್ಟ್ ಓರಿಯೆಂಟೆಡ್ ಪೊಲಿಟಿಷಿಯನ್. ಅವರು ಕೆ.ಆರ್.ಪೇಟೆ, ಹುಣಸೂರು, ಶಿರಾ ಉಪ ಚುನಾವಣೆಗೆ ಬಂದು ಮೂರನೇ ಸ್ಥಾನಕ್ಕೆ ಹೋದರು’ ಎಂದು ಕಟಕಿಯಾಡಿದರು.
‘ಸಂಸದರು ಹಾಸನ ಕ್ಷೇತ್ರಕ್ಕೆ ತಮ್ಮ ತಾಯಿಯನ್ನು ಕರೆತಂದು ನಿಲ್ಲಿಸಿದರೂ ಅವರಿಗೆ ಮೂರನೇ ಸ್ಥಾನವೇ ಗತಿ. ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನಾಯಕರು ಮತ್ತು ಸಿದ್ದರಾಮಯ್ಯನವರ ಕಾಲು ಹಿಡಿದು ಕಾಂಗ್ರೆಸ್ ಅಭ್ಯರ್ಥಿ ಹಾಕಿಸದೆ ಸಂಸದರಾಗಿದ್ದಾರೆ. 2024 ರಲ್ಲಿ ನಡೆಯುವ ಎಂಪಿ ಚುನಾವಣೆಯಲ್ಲಿ ಆ ಪರಿಸ್ಥಿತಿ ಇರುವುದಿಲ್ಲ. ಮೂರೂ ಪಕ್ಷಗಳ ಅಭ್ಯರ್ಥಿಗಳು ಕಣದಲ್ಲಿರುತ್ತಾರೆ. ಆಗ ಪರದೆ ಮೇಲೆ ಪಿಕ್ಚರ್ ಏನು ಅಂತ ತೋರಿಸುವೆ’ ಎಂದು ಮೂದಲಿಸಿದರು.
ಭವಾನಿ ಅಕ್ಕ ಹಳ್ಳಿ ಸುತ್ತಿ ನೋಡಲಿ:
‘ಭವಾನಿ ಅಕ್ಕ ಅವರಿಗೆ ಹಾಸನದ ಗಣಪತಿ ಎಲ್ಲಿವೆ, ರೋಡ್ ಯಾವುದು, ಎನ್ನೋದು ಗೊತ್ತಿರಲಿಲ್ಲ. ಪ್ರೀತಂ ಗೌಡ ಬಂದ ಮೇಲೆ ಹಾಸನ ಹೆಂಗಿದೆ ಎಂದು ನೋಡೋ ಅವಕಾಶ ಕಲ್ಪಿಸಿ ಕೊಟ್ಟಿದ್ದೇನೆ. ಅವರು ಹಳ್ಳಿ ಕಡೆ ಹೋಗಿ ನೋಡಿಬರಲಿ. ಅವರು ಏನು ಮಾಡಿದ್ದರು, ಪ್ರೀತಂಗೌಡ ಏನು ಮಾಡಿದ್ದಾನೆ ಎಂಬುದನ್ನು ಕಾಣಲಿ. ಬಹುಶಃ ಅವರು ಹಾಸನ ವಿಧಾನಸಭಾ ಕ್ಷೇತ್ರದ ಎಲ್ಲ ಹಳ್ಳಿಗಳನ್ನು ಸುತ್ತಾಡಿ ಬಂದರೆ ಚುನಾವಣೆಗೆ ನಿಲ್ಲುವುದಿಲ್ಲ. ಆಗಿರೋ ಅಭಿವೃದ್ಧಿ, ಜನರ ಸ್ಪಂದನೆ ಹೇಗಿದೆ ಎಂಬುದು ಗೊತ್ತಾಗುತ್ತೆ. ನಂತರ ಅವರು ಚುನಾವಣೆಗೆ ನಿಲ್ಲುತ್ತಾರೆಯೇ ಎಂಬುದನ್ನು ಕೇಳಿ ನೋಡಿ’ ಎಂದು ನುಡಿದರು.
ಭವಾನಿ ಅಕ್ಕನವರು ಅಭ್ಯರ್ಥಿ ಅದರೆ ನನಗೆ ಬಹಳ ಸಂತೋಷ. ಆ ಧೈರ್ಯವನ್ನು ವಿನಾಯಕ ಕೊಡಲಿ ಎಂಬುದಾಗಿ ಪ್ರಾರ್ಥಿಸುವೆ.ನನ್ನ ಸವಾಲು ಸ್ವೀಕಾರ ಮಾಡಿದ್ದೇವೆ ಎಂದ ಮೇಲೆ ಅಭ್ಯರ್ಥಿ ತಾವೇ ಎಂದು ಘೋಷಣೆ ಮಾಡಿಕೊಳ್ಳಲಿ. ನಾನಂತೂ ಚುನಾವಣೆಗೆ ರೆಡಿಯಾಗಿದ್ದೇನೆ’ ಎಂದು ಮರುಸವಾಲು ಹಾಕಿದರು.
ಯಾವುದೇ ಹಳ್ಳಿಗೆ ಹೋಗದ ಸಂಸದರು, ಈಗಲಾದರೂ ಹಾಸನ ವಿಧಾನಸಭಾ ಕ್ಷೇತ್ರವನ್ನು ಒಮ್ಮೆ ಪ್ರದಕ್ಷಿಣೆ ಹಾಕಿಬರಲಿ. ಸಂಸದರು ಜಿಲ್ಲೆಗೆ ಯಾವುದೇ ಶಾಶ್ವತ ಯೋಜನೆಯನ್ನು ತಂದಿಲ್ಲ ಎಂದು ಟೀಕಿಸಿದರು.
ಪೇಸಿಎಂ ಅಭಿಯಾನಕ್ಕೆ ಟೀಕೆ:
ಕಾಂಗ್ರೆಸ್‌ನ ಪೇಸಿಎಂ ಅಭಿಯಾನ ಕುರಿತು, ಪೇಸಿಎಂ ಅಂದರೆ ಪೇ ಕಾಂಗ್ರೆಸ್ ಮೇಡಂ ಅಂತ ಅರ್ಥ. ಅವರ ಮೇಡಂ ಅಂದ್ರೆ ಸೋನಿಯಾಗಾಂಧಿ. ಚುನಾವಣೆ ವೇಳೆ ದೇಣಿಗೆ ಸಂಗ್ರಹ ಮಾಡಲು ಇಂತಹ ಅಭಿಯಾನ ಮಾಡುತ್ತಿದ್ದಾರೆ ಎಂದು ಶಾಸಕ ಪ್ರೀತಂಗೌಡ ಟೀಕಿಸಿದರು.
ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಬೀದಿಗಳಿದು ಪೋಸ್ಟರ್ ಅಂಟಿಸಿದ ಮಾತ್ರಕ್ಕೆ ಸುಳ್ಳು ಸತ್ಯ ಆಗಲ್ಲ. ಅವರು ಅಧಿಕಾರಕ್ಕೆ ಬರಲು ಯಾವ ಮಟ್ಟಕ್ಕೆ ಬೇಕಾದರೂ ಇಳಿಯುತ್ತಾರೆ ಎಂಬುದುಕ್ಕೆ ಪೇಸಿಎಂ ಅಭಿಯಾನವೇ ಸಾಕ್ಷಿ. ಸೋಲಿನ ಭೀತಿಯಿಂದ ಹೀಗೆಲ್ಲಾ ಮಾಡುತ್ತಿದ್ದಾರೆ. ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುವುದು ನೂರಕ್ಕೆ ನೂರು ಸತ್ಯ ಎಂದು ವಿಶ್ವಾಸ ವ್ಯಕ್ತಪಡಿಸಿದರು.