ಸಂಸ್ಕಾರ ಪಸರಿಸುವಲ್ಲಿ ತಾಯಂದಿರ ಪಾತ್ರ ಅಪಾರ:ಟಿ. ಗುರುರಾಜ್

ಸಂಸ್ಕಾರ ಪಸರಿಸುವಲ್ಲಿ ತಾಯಂದಿರ ಪಾತ್ರ ಅಪಾರ:ಟಿ. ಗುರುರಾಜ್
Published on

ಹಾಸನ: ನಮ್ಮ ಸಂಸ್ಕೃತಿ, ಸಂಸ್ಕಾರವನ್ನು ಮುಂದಿನ ಪೀಳಿಗೆಗೆ ಪಸರಿಸುವಲ್ಲಿ ತಾಯಂದಿರ ಪಾತ್ರ ಮಹತ್ತರವಾಗಿದೆ ಎಂದು ಹಿರಿಯ ಪತ್ರಕರ್ತ ಹಾಗೂ ಸಂಸ್ಕೃತಿ ಚಿಂತಕ ಟಿ.ಗುರುರಾಜ್ ಹೇಳಿದರು.
ನಗರದ ಎಂ.ಜಿ ರಸ್ತೆಯ ಶ್ರೀ ಆದಿಚುಂಚನಗಿರಿ ಸಮುದಾಯ ಭವನದಲ್ಲಿ ನಡೆದ ಗುರು ತೋರಿದ ದಾರಿ ತಿಂಗಳ ಮಾಮನ ತೇರು 119ನೇ ಹುಣ್ಣಿಮೆ ಕಾರ್ಯಕ್ರಮದಲ್ಲಿ ‘ಅವ್ವ’ ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡಿದ ಅವರು, ಆಧುನಿಕತೆಯ ಕಡೆಗೆ ನಾವು ಎಷ್ಟೇ ವಾಲಿದರೂ ನಮ್ಮ ಸಂಸ್ಕೃತಿ, ಸಂಸ್ಕಾರವನ್ನು ಮೆರೆಯದಂತೆ ನಮ್ಮನ್ನು ಮುನ್ನಡೆಸುತ್ತಿರುವವಳು ತಾಯಿ. ಆ ಸ್ಥಾನಕ್ಕೆ ಅಷ್ಟು ಶಕ್ತಿ ಇರುವುದರಿಂದ ಭಾರತೀಯ ಸಂಸ್ಕೃತಿಯಲ್ಲಿ ಹೆಣ್ಣನ್ನು ಗೌರವಿಸುವ ಪರಂಪರೆ ಇಂದಿಗೂ ಬದಲಾಗಿಲ್ಲ ಎಂದರು.
ತಾಯಿ ಎಷ್ಟೇ ಕಷ್ಟಪಟ್ಟರೂ ತನ್ನ ಕಷ್ಟವನ್ನು ಮಕ್ಕಳೆದುರು ತೋರ್ಪಡಿಸಿಕೊಳ್ಳುವುದಿಲ್ಲ. ಆದರೆ ನಾವು ತಾಯಿಯನ್ನು ಅರ್ಥ ಮಾಡಿಕೊಳ್ಳುವುದರಲ್ಲಿ ಸೋಲುತ್ತಿದ್ದೇವೆ. ಇಂದಿನ ದಿನಗಳಲ್ಲಿ ತಾಯಿಯನ್ನು ಕಡೆಗಣಿಸುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ. ಇದೊಂದು ಅಪಾಯಕಾರಿ ಬೆಳವಣಿಗೆ. ಯೌವನದಲ್ಲಿ ನಾವು ತುಂಬಿಕೊಳ್ಳುವ ಅಹಂನಿಂದಾಗಿ ಇಂದು ಸಂಬಂಧಗಳನ್ನು ಕಳೆದುಕೊಳ್ಳುತ್ತಿದ್ದೇವೆ. ತಾಯಿ ಜೀವನದುದ್ದಕ್ಕೂ ಕುಟುಂಬಕ್ಕಾಗಿ ಜೀವ ಸವೆಸಿದ್ದನ್ನು ಮರೆತಂತೆ ವರ್ತಿಸುತ್ತಿರುವ ನಾವು ಆಕೆಯ ಬೇಕು ಬೇಡಗಳನ್ನು ಈಡೇರಿಸುವಲ್ಲಿ ಸೋಲುತ್ತಿದ್ದೇವೆ ಎಂದು ವಿಷಾದಿಸಿದರು.
ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಹಾಸನ ಮಠದ ಶ್ರೀ ಶಂಭುನಾಥ ಸ್ವಾಮೀಜಿ ಆಶೀರ್ವಚನ ನೀಡಿ, ಗುರು-ಹಿರಿಯರು, ಹೆತ್ತವರ ಮಾರ್ಗದರ್ಶನ ನಮ್ಮ ಬದುಕಿಗೆ ದಾರಿ ದೀಪವಾಗಬೇಕು. ಮಹನೀಯರು ನಮ್ಮ ಸಂಸ್ಕೃತಿಗೆ ಸಾಕಷ್ಟು ಕೊಡುಗೆ ನೀಡಿದ್ದು, ಅದನ್ನು ಅರಿಯುವ ಕೆಲಸ ನಮ್ಮಿಂದಾಗಬೇಕಿದೆ ಎಂದರು.
ಶ್ರೀ ಮಠದ ಹುಣ್ಣಿಮೆ ಕಾರ್ಯಕ್ರಮ ಒಂದು ಯಾಗದಂತೆ ನಡೆದುಕೊಂಡು ಬರುತ್ತಿದೆ. ಇದೊಂದು ವಿಶೇಷವಾದ ಕಾರ್ಯಕ್ರಮವಾಗಿದ್ದು, ಗುರು ಪರಂಪರೆಯ ಬಗೆಗೆ ಬೆಳಕು ಚೆಲ್ಲುವ ಪ್ರಯತ್ನ ನಿರಂತರವಾಗಿ ಸಾಗುತ್ತಿದೆ. ಈ ಪವಿತ್ರ ಕಾರ್ಯಕ್ರಮದಲ್ಲಿನ ವಿಚಾರಧಾರೆಗಳನ್ನು ಎಲ್ಲರೂ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕಿದೆ ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಬಾಗಲಕೋಟೆಯ ಭಜನಾ ಕಲಾವಿದರಾದ ಲಕ್ಷ್ಮೀ ಮುತ್ತಪ್ಪ ಗಾಜಿ ಭಜನೆ ಕಾರ್ಯಕ್ರಮ ನಡೆಸಿಕೊಟ್ಟು ಸಭೆಯ ಗಮನ ಸೆಳೆದರು.
ಕಾರ್ಯಕ್ರಮದಲ್ಲಿ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಕಬ್ಬಳಿ ಮಠದ ಶ್ರೀ ಶಿವಪುತ್ರನಾಥ ಸ್ವಾಮೀಜಿ, ಶ್ರೀ ಮಠದ ಹುಣ್ಣಿಮೆ ಕಾರ್ಯಕ್ರಮಗಳ ಸಂಚಾಲಕ ಎಚ್.ಬಿ ಮದನಗೌಡ, ಶ್ರೀ ಮಠದ ವ್ಯವಸ್ಥಾಪಕ ಚಂದ್ರಶೇಖರ್, ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಬಿ.ಆರ್ ಬೊಮ್ಮೇಗೌಡ ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net