ಸಂಸ್ಕಾರ ನಾಶಕ್ಕೆ ದುರಾಸೆಯೇ ಮೂಲ - ಡಾ. ಗುರುಬಸವ ಶ್ರೀ- ದತ್ತಿ ಉಪನ್ಯಾಸ ಕಾರ್ಯಕ್ರಮ

dvg-MAADAR-CHANNAYYA.jpg
Published on

ದಾವಣಗೆರೆ: ಬೇಗನೇ ಹಣ ಮಾಡುವ ದುರಾಸೆಗೆ ಜೋತು ಬಿದ್ದ ಜನರು ಸಂಸ್ಕಾರ ಕಳೆದುಕೊಳ್ಳುತ್ತಿದ್ದಾರೆ ಎಂದು ಪಾಂಡೋಮಟ್ಟಿ ಡಾ. ಗುರು ಬಸವ ಸ್ವಾಮಿಜಿ ವಿಷಾದಿಸಿದರು.

ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನಿಂದ

ನಗರದ ಭಾರತ ಸೇವಾದಳ ಭವನದಲ್ಲಿ ಭಾನುವಾರ ಆಯೋಜಿಸಿದ್ದ ಮಾದಾರ ಚನ್ನಯ್ಯ ಜಯಂತಿ, ದತ್ತಿ ಉಪನ್ಯಾಸ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.

ಇತ್ತೀಚಿನ ದಿನಗಳಲ್ಲಿ ಜನರು ತಮ್ಮ ಆಚಾರ,ವಿಚಾರಗಳನ್ನು ಗಾಳಿಗೆ ತೂರಿ ಆಧುನಿಕತೆ ಜತೆ ಹೆಜ್ಜೆ ಹಾಕುತ್ತಿದ್ದಾರೆ.ಆಚಾರ, ವಿಚಾರಗಳ ಉಳಿವು ಇಂದಿನ ಅಗತ್ಯವಾಗಿದೆ ಎಂದರು.

ಅಂದು ಸಮಾಜದಿಂದ ಹೊರಗಿದ್ದ ಎಷ್ಟೋ ಜನರು, ಇಂದು ಸಮಾಜದ ಮುನ್ನೆಲೆಗೆ ಬರುವುದಕ್ಕೆ ಶರಣ ಸಾಹಿತ್ಯವೇ ಕಾರಣ. ನಮ್ಮ ಸಂಸ್ಕೃತಿಯಲ್ಲಿ ಯಾವ ಶಾಸ್ತ್ರವೂ ಮನುಷ್ಯತ್ವದ ವಿರೋಧಿ ಅಲ್ಲ. ಎಲ್ಲರೂ ಸಮಾನರು ಎಂಬ ಹೃದಯವಂತಿಕೆಯಿಂದ ಬದುಕಬೇಕು ಎಂದರು.

ಭಾರತ ಸೇವಾದಳದ ಜಿಲ್ಲಾ ಅಧ್ಯಕ್ಷ ಎಚ್.ಚನ್ನಪ್ಪ ಪಲ್ಲಾಗಟ್ಟೆ ಉದ್ಘಾಟಿಸಿ ಮಾತನಾಡಿ, ಪರಿಷತ್ತಿನ ವಿಚಾರಗಳು ಸಮಾಜದ ಉದ್ದಗಲಕ್ಕೂ ಹರಡಬೇಕು. ಯುವಕರು ಹಾಗೂ ಶಾಲಾ ಮಕ್ಕಳಿಗೆ ಉತ್ತಮ ಭಾವನೆ ಬೆಳಸಲು ಶರಣ ಸಾಹಿತ್ಯದ ವಿಚಾರಗಳನ್ನು ಪರಿಚಯಿಸಬೇಕಿದೆ ಎಂದು ಹೇಳಿದರು.

ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾ ಅಧ್ಯಕ್ಷ ಕೆ.ಬಿ. ಪರಮೇಶ್ವರಪ್ಪ, ಚಿಕ್ಕಮಗಳೂರು ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ರವೀಶ್ ಕ್ಯಾತನಬೀಡು, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಬಿ. ವಾಮದೇವಪ್ಪ, ಜಿಲ್ಲಾ ಕದಳಿ ಮಹಿಳಾ ವೇದಿಕೆ ಅಧ್ಯಕ್ಷೆ ವಿನೋದಾ ಅಜಗಣ್ಣನವರ್, ಎನ್.ಎಸ್. ರಾಜು, ಬಿ.ಟಿ. ಪ್ರಕಾಶ್, ಎನ್.ಟಿ. ಮಂಜುನಾಥ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net