

ಮಂಜುನಾಥ ಟಿ.ಭೋವಿ ಮೈಸೂರು
ಸಾಂಸಾರಿಕ ಜೀವನದಲ್ಲಿ ಆಧ್ಯಾತ್ಮಿಕ ಗುರಿ ಸಾಧಿಸಿದವರು ಕುವೆಂಪು…!
ಹೀಗೆಂದವರು ಮೈಸೂರು ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ, ಸಾಹಿತಿ ಪ್ರೊ.ಎನ್.ಬೋರಲಿಂಗಯ್ಯ.
ಕುವೆಂಪು ಜಯಂತಿ ಅಂಗವಾಗಿ ‘ವಿಜಯವಾಣಿ’ ಜತೆ ಮಾತನಾಡಿದ ಅವರು, ಕುವೆಂಪು ಅವರ ವ್ಯಕ್ತಿತ್ವ, ಒಡನಾಟ, ವಿಚಾರಧಾರೆಗಳು… ಹೀಗೆ ವಿವಿಧ ವಿಷಯಗಳ ಕುರಿತು ಮೆಲುಕು ಹಾಕಿದರು.
ಕುವೆಂಪು ದಾರಿದೀಪ:
ಕೌಟುಂಬಿಕ ಜೀವನಕ್ಕೆ ಮಹತ್ವ ಕೊಟ್ಟಿದ್ದರೂ ಕುವೆಂಪು ಅವರಿಗೆ ಆಧ್ಯಾತ್ಮಿಕ ತುಡಿತವಿತ್ತು. ಆದರೆ ಸಂಸಾರಿಯಾಗಿಯೇ ಇದ್ದುಕೊಂಡು, ರಾಮಕೃಷ್ಣ ಪರಮಹಂಸರು ಮತ್ತು ಸ್ವಾಮಿ ವಿವೇಕಾನಂದರ ಮಾರ್ಗದಲ್ಲಿ ಆಧ್ಯಾತ್ಮಿಕ ಯಶಸ್ಸು ಸಾಧಿಸಿದರು. ಈ ರೀತಿಯ ಆದರ್ಶ ನಡೆ ಈಗಿನ ಸಮಾಜಕ್ಕೆ ಅಗತ್ಯವಾಗಿ ಬೇಕಾಗಿದೆ. ಸನ್ಯಾಸತ್ವ ಸ್ವೀಕರಿಸಿ ಅನಾಚಾರ ಮಾಡುತ್ತಿರುವ ಈಗಿನ ಕಾಲಘಟ್ಟದಲ್ಲಿ ಕುವೆಂಪು ದಾರಿದೀಪವಾಗಿ ಗೋಚರವಾಗುತ್ತಾರೆ. ಅದನ್ನು ಪಾಲನೆ ಮಾಡಬೇಕಷ್ಟೇ.
ಶ್ರೇಷ್ಠ ಶೂದ್ರ ಸಾಹಿತಿ:
1500 ವರ್ಷಗಳ ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಕುವೆಂಪು ಎಂಬಂತಹ ಧೀಮಂತ ಸಾಹಿತಿಯನ್ನು ಕಂಡಿಲ್ಲ. ಬೇಂದ್ರ, ಶಿವರಾಮ ಕಾರಂತರು, ಮಾಸ್ತಿ, ಡಿವಿಜಿ, ತಿನಂಶ್ರೀ ಇತ್ಯಾದಿ ದಿಗ್ಗಜ ಸಾಹಿತಿಗಳ ನಡುವೆ ಕುವೆಂಪು ವಿಶಿಷ್ಟ ಪ್ರತಿಭೆ. ಈ ದಿಗ್ಗಜ ಸಾಹಿತಿಗಳನ್ನು ಕೈಬಿಟ್ಟು 20ನೇ ಶತಮಾನದ ಕನ್ನಡ ಸಾಹಿತ್ಯವನ್ನು ಓದಬಹುದು, ಗ್ರಹಿಸಿಬಹುದು. ಆದರೆ, ಕುವೆಂಪು ಅವರನ್ನು ಕೈಬಿಡಲು ಬರಲ್ಲ. ಅವರು ಈ ಶತಮಾನದ ಏಕೈಕ ಶ್ರೇಷ್ಠ ಶೂದ್ರ ಸಾಹಿತಿ.
ಚಳವಳಿಗಳಿಗೆ ಪ್ರೇರಕ ಶಕ್ತಿ:
ಅನೇಕ ಚಳವಳಿಗಳಿಗೆ ಕುವೆಂಪು ಅವರೇ ಸ್ಫೂರ್ತಿಯ ಸೆಲೆ. ಸ್ವಾತಂತ್ರೃ ಚಳವಳಿ, ಬರಹಗಾರರ ಒಕ್ಕೂಟದ ಚಳವಳಿ, ಬೂಸಾ ಚಳವಳಿ, ಜಾತಿ ವಿನಾಶ ಚಳವಳಿ, ದಲಿತ ಬಂಡಾಯ, ಮಹಿಳಾ ಚಳವಳಿಗಳಿಗೆಲ್ಲ ಇವರೇ ಪ್ರೇರಕ ಶಕ್ತಿ. ಈ ಹೋರಾಟಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಶಕ್ತಿ ಮತ್ತು ಹೊಸ ರೂಪ ಕೊಟ್ಟವರು. ಅವರ ಮುಖ್ಯವಿಚಾರಧಾರೆಯಾದ ಮನುಜಮತ, ವಿಶ್ವಪಥ, ಸರ್ವೋದಯ, ಸಮನ್ವಯ, ಪೂರ್ಣದೃಷ್ಟಿ- ಈ ಪಂಚಮಂತ್ರ ಮುಂದಿನ ದೃಷ್ಟಿಯಾಗಬೇಕಾಗಿದೆ.
ತಾರತಮ್ಯ ಜಾಗಕ್ಕೆ ಏಕೆ?
1935ರಲ್ಲೇ ಕುವೆಂಪು ಹೇಳಿರುವ ‘ಗುಡಿ, ಚರ್ಚು, ಮಸೀದಿಗಳ ಬಿಟ್ಟು ಹೊರಬನ್ನಿ, ಬಡತನವ ಬುಡಮುಟ್ಟಿ ಕೀಳಬನ್ನಿ’ ಎಂಬ ಮಾತು ಇನ್ನೂ ಸಾಕಾರಗೊಂಡಿಲ್ಲ. ‘ಅನ್ಯ ಧರ್ಮಕ್ಕೆ ಮತಾಂತರಗೊಂಡವರನ್ನು ಮತ್ತೆ ಹಿಂದು ಧರ್ಮಕ್ಕೆ ಕರೆತರುವುದು ಏಕೆ? ಮತ್ತೆ ಅದೇ ತಾರತಮ್ಯ ಜಾಗಕ್ಕೆ ಏಕೆ ತಂದು ಬಿಡುತ್ತೀರಿ? ಅವರು ಎಲ್ಲಿ ಇರುತ್ತಾರೋ ಅಲ್ಲಿ ನೆಮ್ಮದಿಯಿಂದ ಇರಲಿ ಬಿಡಿ’ ಎಂಬ ಮಾತನ್ನು ಈಗಿನವರು ಕೇಳಿಸಿಕೊಳ್ಳುತ್ತಿಲ್ಲ.
ರಾವಣನೊಬ್ಬ ಕಲಿ ಮತ್ತು ಶೂರ:
‘ರಾಮ-ಸೀತೆ ಹುಟ್ಟು ಅಯೋಧ್ಯೆಯಲ್ಲಿ. ಆದರೆ, ಆತ್ಮಸಾಕ್ಷಾತ್ಕಾರವಾಗಿದ್ದು ಲಂಕೆಯಲ್ಲಿ. ರಾವಣನೊಬ್ಬ ಕಲಿ ಮತ್ತು ಶೂರ. ಅವನು ಇರದಿದ್ದರೆ ರಾಮ-ಸೀತೆಯರಿಬ್ಬರೂ ಹೊರಪ್ರಪಂಚಕ್ಕೆ ಗೊತ್ತಾಗುತ್ತಿರಲಿಲ್ಲ’ ಎಂದು ಕುವೆಂಪು ಹೇಳಿದ್ದು ಈಗಲೂ ನೆನಪಿದೆ.
ಪತ್ನಿಯೇ ಸ್ಫೂರ್ತಿ:
ಪತ್ನಿ ಹೇಮಾವತಿ ಅವರೇ ಕುವೆಂಪು ಅವರ ಬರವಣಿಗೆಗೆ ಸ್ಫೂರ್ತಿ. ಅವರೆಲ್ಲ ಸಾಧನೆಗೂ ಅವರ ಪತ್ನಿಯೇ ಆದಿಶಕ್ತಿ ರೂಪಕದಂತೆ. ಅಂತ್ಯಕ್ರಿಯೆ ಸಂದರ್ಭದಲ್ಲಿ ಮೃತ ಪತ್ನಿಯ ಕಾಲುಮುಟ್ಟಿ ನಮಸ್ಕರಿಸಿ ಗಳಗಳನೆ ಅತ್ತಿದ್ದರು. ಇದು ಅವರ ಹೆಂಡತಿ ಮೇಲಿನ ಪ್ರೀತಿಗೆ ಧ್ಯೋತಕ. ಪತ್ನಿಯ ನಿಧನದ ಬಳಿಕ ಅವರ ಬರವಣಿಗೆ ಸಹ ಕಡಿಮೆ ಆಯಿತು.
ಸದಾಕಾಲಕ್ಕೂ ಪ್ರಸ್ತುತವೇ:
ಕುವೆಂಪು ಅವರಿಗೆ ಹೆಣ್ಣು ಮಕ್ಕಳ ಬಗ್ಗೆ ಜೀವಪರ ಕನಿಕರ, ಕಾಳಜಿ ಇತ್ತು. ಅವರ ಸುಖದುಃಖದಲ್ಲಿ ಭಾಗಿಯಾಗದೆ ಪುರುಷರು ಹೇಗೆ ಬದುಕುತ್ತಿದ್ದಾರೆ ಅಲ್ವೇ ಎಂಬ ಪ್ರಶ್ನೆ ಅವರನ್ನು ಸದಾ ಕಾಡಿತು. ಕುವೆಂಪು ವಿಚಾರಧಾರೆಗಳು ಸದಾಕಾಲಕ್ಕೂ ಪ್ರಸ್ತುತವೇ. ಆದರೆ, ಅವುಗಳೆಲ್ಲವನ್ನೂ ಮರೆತು ಈ ಸಮಾಜ ಉಸಿರಾಡುತ್ತಿದೆ. ಇದಕ್ಕೆ ಭವಿಷ್ಯದಲ್ಲಿ ಬೆಲೆ ತೆರಬೇಕಾಗುತ್ತದೆ.
ಕುವೆಂಪು ‘ಕರ್ನಾಟಕದ ಅಂಬೇಡ್ಕರ್’
ಕುವೆಂಪು ಅವರನ್ನು ಕರ್ನಾಟಕದ ಅಂಬೇಡ್ಕರ್ ಮತ್ತು ಕರ್ನಾಟಕದ ಟಾಲ್ ಸ್ಟಾಯ್ (ಸಾಹಿತ್ಯ ಮಹರ್ಷಿ) ಎಂದು ಕರೆಯಬಹುದು. ಕನ್ನಡ ಸಾಹಿತ್ಯದಲ್ಲಿ ಕುವೆಂಪು ಹತ್ತಿರಕ್ಕೂ ಮತ್ತೊಬ್ಬ ಸಾಹಿತಿ ಸೃಷ್ಟಿಯಾಗಲಿಲ್ಲ. ಆದರೆ, ಅವರ ನಂತರ ದೇವನೂರ ಮಹಾದೇವ ಮುಂದುವರಿಯುತ್ತಿದ್ದಾರೆ. ಆ ರೀತಿ ‘ಕುವೆಂಪು ವಾಯ್ಸ’ ಅನ್ನು ಮಹಾದೇವ ಉಳಿಸಿಕೊಂಡು ಸಾಗುತ್ತಿದ್ದಾರೆ. ಪ್ರೊ.ಎನ್.ಬೋರಲಿಂಗಯ್ಯ.