

ಚಿತ್ರದುರ್ಗ: ಜಗಳದಿಂದ ಸಂಸಾರಗಳು ತೊಂದರೆಗೆ ಸಿಲುಕುವ ಸಂದರ್ಭಗಳೇ ಹೆಚ್ಚು. ಆದ್ದರಿಂದ ಎಂಥದ್ದೇ ಸಂಕಷ್ಟಗಳು ಎದುರಾದರೂ ಸಂಸಾರದಲ್ಲಿ ಹೊಂದಾಣಿಕೆ ಮುಖ್ಯ ಎಂದು ಶ್ರೀ ಬಸವಪ್ರಭು ಸ್ವಾಮೀಜಿ ಹೇಳಿದರು.
ಮುರುಘಾ ಮಠದಲ್ಲಿ ಸೋಮವಾರ ಏರ್ಪಡಿಸಿದ್ದ 33ನೇ ವರ್ಷದ 6ನೇ ತಿಂಗಳ ಸಾಮೂಹಿಕ ಕಲ್ಯಾಣ ಮಹೋತ್ಸವ ಸಾನ್ನಿಧ್ಯ ವಹಿಸಿ ಮಾತನಾಡಿ, ಸಂಸಾರಕ್ಕೆ ಹೊಂದಾಣಿಕೆಯೇ ಬುನಾದಿ. ಕಲಹಗಳಿಗೆ ಶಾಶ್ವತವಾಗಿ ವಿರಾಮ ಹಾಕಲು ಸಹಕಾರಿ ಎಂದರು.
ಪರಿಸರ ರಕ್ಷಣೆಯ ಹೊಣೆ ನಮ್ಮೆಲ್ಲರದ್ದಾಗಿದೆ. ಪ್ರಕೃತಿ ತಾಯಿ ಇದ್ದಂತೆ. ಮುಂದಿನ ಸಂಕುಲ ಉಳಿಯ ಬೇಕಾದರೆ ಪ್ರಕೃತಿ ಮಗುವಿನಂತೆ ಪೋಷಿಸಿ, ರಕ್ಷಿಸ ಬೇಕಾಗಿದೆ ಎಂದು ಹೇಳಿದರು.
ನಿಪ್ಪಾಣಿಯ ಮುರುಘೇಂದ್ರ ಮಠದ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ ಮಾತನಾಡಿ, 12ನೇ ಶತಮಾನದಲ್ಲಿ ಜಾತಿ ಮತ ಪಂಥಗಳನ್ನು ಮೀರಿ ಅನುಭವ ಮಂಟಪದಲ್ಲಿ ಭಾಗವಹಿಸುತ್ತಿದ್ದರು. ಶರಣೆ ದಾನಮ್ಮದೇವಿ ಹಾಗೂ ಬಸವಾದಿ ಪ್ರಮಥರು ಸಾಮೂಹಿಕ ಕಲ್ಯಾಣಕ್ಕೆ ಅಂದೇ ಚಾಲನೆ ನೀಡಿದರು. ಹಾಗೆಯೇ ಶ್ರೀಮಠವು ಸಹ ಕಳೆದ 33 ವರ್ಷಗಳಿಂದ ಜಾತ್ಯತೀತವಾಗಿ ಕಲ್ಯಾಣ ಮಹೋತ್ಸವವನ್ನು ನಡೆಸಿಕೊಂಡು ಬರುತ್ತಿರುವುದು ಈ ಭಾಗದ ಜನರ ಕಲ್ಯಾಣ ಕಾರ‌್ಯಗಳಿಗೆ ಅನುಕೂಲವಾಗಿದೆ ಎಂದರು.
ದಾವಣಗೆರೆಯ ಸಮಾಜ ಸೇವಕ ಡಾ.ಸಿ.ಆರ್.ನಸೀರ್ ಅಹಮದ್ ಮಾತನಾಡಿ, ಇದೊಂದು ಐತಿಹಾಸಿಕ ಮಠ. ಬಸವಾದಿ ಪ್ರಮಥರ ತತ್ವಸಿದ್ಧಾಂತದ ತಳಹದಿಯ ಮೇಲೆ ಶ್ರೀಮಠ ನಡೆಯುತ್ತಿದೆ. ಸಾಮೂಹಿಕ ಕಲ್ಯಾಣ ಮಹೋತ್ಸವದಿಂದ ಸಮಾಜಕ್ಕೆ ಒಳ್ಳೆಯ ಸಂದೇಶ ಹೋಗಿದೆ. ಇಲ್ಲಿನ ದಾಸೋಹ ಸೇವೆ ಹಿರಿದಾಗಿದೆ. ಶ್ರೀಮಠವು ಎಲ್ಲ ಸಮಾಜ, ಧರ್ಮಗಳನ್ನು ಅಪ್ಪಿ, ಒಪ್ಪಿಕೊಂಡಿದೆ ಎಂದು ಹೇಳಿದರು.
ಅಂತರ್ಜಾತಿ ವಿವಾಹ ಸೇರಿ 12 ಜೋಡಿಗಳ ವಿವಾಹ ನೆರವೇರಿತು. ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ನವದಂಪತಿಗಳಿಂದ ಮಠದ ಆವರಣದಲ್ಲಿ ಸಸಿ ನೆಡಲಾಯಿತು.
ಯುಗಧರ್ಮ ರಾಮಣ್ಣ ಲಾವಣಿಗಳನ್ನು ಹಾಡಿದರು. ಪೈಲ್ವಾನ್ ತಿಪ್ಪೇಸ್ವಾಮಿ ಇತರರು ಇದ್ದರು. ತೋಟಪ್ಪ ಮತ್ತು ಸಂಗಡಿಗರು ಪ್ರಾರ್ಥಿಸಿದರು. ಶಿವಕುಮಾರ್ ಸ್ವಾಗತಿಸಿದರು. ಪ್ರಕಾಶ್ ದೇವರು ನಿರೂಪಿಸಿದರು.