ಸಂಸದೆ ಮಂಗಲ ಅಂಗಡಿ ಅವರಿಂದ ಅಭಿವೃದ್ಧಿ ನಿರೀಕ್ಷೆ

05Huk2-Web
ಬೆಳಗಾವಿಯ ದಿ. ಸುರೇಶ ಅಂಗಡಿ ನಿವಾಸದಲ್ಲಿ ನೂತನ ಸಂಸದೆ ಮಂಗಲ ಅಂಗಡಿ ಅವರನ್ನು ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ರಮೇಶ ಕತ್ತಿ ಹೂಗುಚ್ಛ ನೀಡಿ ಅಭಿನಂದಿಸಿದರು.
Published on

ಹುಕ್ಕೇರಿ: ಜಿಲ್ಲೆಯಲ್ಲಿ ಭಾರತೀಯ ಜನತಾ ಪಕ್ಷದ ಬೆಳವಣಿಗೆಗೆ ಹಗಲಿರುಳು ಶ್ರಮಿಸಿದ ಮತ್ತು ಕೇಂದ್ರ ಸರ್ಕಾರದಲ್ಲಿ ರೈಲ್ವೆ ಖಾತೆ ಸಚಿವರಾಗಿ ಜಿಲ್ಲೆಗೆ ಅಪಾರ ಕೊಡುಗೆ ನೀಡಿದ ಕೇಂದ್ರ ಸಚಿವ ದಿ.ಸುರೇಶ ಅಂಗಡಿ ಅವರ ಕನಸನ್ನು ನನಸು ಮಾಡಲು ನೂತನ ಸಂಸದೆ ಮಂಗಲ ಅಂಗಡಿ ಶ್ರಮಿಸುತ್ತಾರೆ ಎಂದು ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ರಮೇಶ ಕತ್ತಿ ಹೇಳಿದರು. ಬೆಳಗಾವಿಯಲ್ಲಿ ಬುಧವಾರ ಸಂಸದೆ ಮಂಗಲ ಅಂಗಡಿ ಅವರನ್ನು ಅಭಿನಂದಿಸಿ ಮಾತನಾಡಿದ ಅವರು, ನಾನು ಸಂಸದನಾಗಿದ್ದ ಸಂದರ್ಭದಲ್ಲಿ ನನ್ನ ಜತೆಗೆ ಸಂಸದರಾಗಿದ್ದ ಸುರೇಶ ಅಂಗಡಿ ಅವರ ಪ್ರಾಮಾಣಿಕ ಮತ್ತು ಸರಳ ನಡೆ-ನುಡಿ ನನಗೆ ಆದರ್ಶವಾಗಿತ್ತು. ಅವರಲ್ಲಿದ್ದ ಜನಪರ ಚಿಂತನೆ ಮತ್ತು ಬಿಜೆಪಿ ಬಲಿಷ್ಠಗೊಳಿಸುವ ಯೋಚನೆ ಇತರರಿಗೆ ಆದರ್ಶಪ್ರಾಯ ಎಂದರು.

ಅಂಗಡಿ ಅವರ ಅಕಾಲಿಕ ನಿಧನದಿಂದ ತೆರವಾದ ಸ್ಥಾನವನ್ನು ಅವರ ಧರ್ಮಪತ್ನಿ ಮಂಗಲ ಅಂಗಡಿ ಅವರು ತುಂಬಿರುವುದು ನನಗೂ ಮತ್ತು ಪಕ್ಷದ ಕಾರ್ಯಕರ್ತರ ಸಂತಸ ಹೆಚ್ಚಿಸಿದೆ ಎಂದರು. ಪದವೀಧರೆ ಆಗಿರುವ ನೂತನ ಸಂಸದರಿಂದ ದಿ.ಸುರೇಶ ಅಂಗಡಿ ಅವರ ಕನಸು ಮತ್ತು ಅರ್ಧಗೊಳಿಸಿದ ಜನಪರ ಕಾರ್ಯಗಳು ಪೂರ್ಣಗೊಳ್ಳಲಿವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಸಂಸದೆ ಮಂಗಲ ಅಂಗಡಿ ಅವರು ಮಾತನಾಡಿ, ಪಕ್ಷದ ಹಿರಿಯರ ಹಾಗೂ ಕಾರ್ಯಕರ್ತರ ಆಶೀರ್ವಾದದಿಂದ ದೊರೆತ ಸಂಸದ ಸ್ಥಾನಕ್ಕೆ ಚ್ಯುತಿಯಾಗದಂತೆ ಅಭಿವೃದ್ಧಿ ಕೈಗೊಳ್ಳುತ್ತೇನೆ. ಹಿರಿಯರ ಮಾರ್ಗದರ್ಶನ ಹಾಗೂ ಕಿರಿಯರ ವಿಶ್ವಾಸ ಸದಾಕಾಲ ನನಗೆ ಶ್ರೀರಕ್ಷೆಯಾಗಿರಲಿ ಎಂದು ಆಶಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net