

ವಿಜಯವಾಣಿ ಸುದ್ದಿಜಾಲ ಹೊಸಕೋಟೆ
ಬಿಜೆಪಿಯಿಂದ ಸಂಸದರಾದ ಬಿ.ಎನ್.ಬಚ್ಚೇಗೌಡರು ಪುತ್ರನ ಪರ ಮತಪ್ರಚಾರ ಮಾಡುತ್ತಿರುವುದು ಪಕ್ಷದ್ರೋಹವಾಗುತ್ತದೆ. ಈ ಬಗ್ಗೆ ವರಿಷ್ಠರಿಗೆ ದೂರು ನೀಡಿದ್ದೇನೆ ಎಂದು ಸಚಿವ ಎಂಟಿಬಿ ನಾಗರಾಜ್ ಹೇಳಿದರು.
ಹೊಸಕೋಟೆ ವಾರ್ಡ್ 13ರಲ್ಲಿ ಶನಿವಾರ ಜನರಿಗೆ ಹೊಸವರ್ಷದ ಉಡುಗೊರೆ ಹಂಚಿಕೆ ವೇಳೆ ಮಾತನಾಡಿದರು. ಬಚ್ಚೇಗೌಡರಿಗೆ ನೈತಿಕತೆ ಇಲ್ಲ, ಬಿಜೆಪಿ ಸಂಸದರಾಗಿ ಕಾಂಗ್ರೆಸ್ ಪರ ಪ್ರಚಾರ ಮಾಡುತ್ತಿದ್ದಾರೆ. ಮಗನ ಪರ ಒಲವಿದ್ದರೆ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿ, ಬಳಿಕ ಪ್ರಚಾರ ಮಾಡಿದರೆ ನಮ್ಮದೇನೂ ಅಭ್ಯಂತರವಿಲ್ಲ ಎಂದು ಹೇಳಿದರು.
8 ತಾಲೂಕುಗಳಿಗೆ ಸಂಸದರಾಗಿರುವ ಬಚ್ಚೇಗೌಡರು ಯಾವ ತಾಲೂಕಿನ ಕಡೆಗೂ ತಲೆ ಹಾಕುವುದಿಲ್ಲ, ಸಂಸದರನ್ನು ಹುಡುಕಿಕೊಡಿ ಎಂಬ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು ಎಂದು ಸಚಿವರು ಕುಟುಕಿದರು.
ಶಿಷ್ಟಾಚಾರ ಪಾಠ ಕಲಿಯಬೇಕಿಲ್ಲ: ಸ್ಥಳೀಯ ಶಾಸಕರು ಯಾವಾಗಲು ಶಿಷ್ಟಾಚಾರದ ಪಾಠ ಮಾಡಲು ಬರುತ್ತಾರೆ. ಆದರೆ ಅವರಿಗೆ ಶಿಷ್ಟಾಚಾರದ ಬಗ್ಗೆ ಸಮರ್ಪಕವಾಗಿ ತಿಳಿದಿಲ್ಲ ಎಂದು ಎಂಟಿಬಿ ನಾಗರಾಜ್ ವ್ಯಂಗ್ಯವಾಡಿದರು. ಕೇಂದ್ರ ಸರ್ಕಾರದ ಗಾಂಧಿಗ್ರಾಮ ಯೋಜನೆ ಕಾರ್ಯಕ್ರಮದ ಬ್ಯಾನರ್‌ಗಳಲ್ಲಿ ಕೇಂದ್ರ ನಾಯಕರ ಭಾವಚಿತ್ರ ಬಳಸದೆ ಶಿಷ್ಟಾಚಾರ ಉಲ್ಲಂಸಿದ್ದಾರೆ. ಅಲ್ಲಿನ ಗ್ರಾಪಂ ಸದಸ್ಯೆಯೊಬ್ಬರು ಈ ಬಗ್ಗೆ ಪ್ರಶ್ನಿಸಿದ್ದಕ್ಕೆ ಉತ್ತರ ನೀಡಲು ಶಾಸಕರು ಪರದಾಡಿದ್ದಾರೆ ಎಂದು ಗೇಲಿ ಮಾಡಿದರು.
ವರ್ಷಕ್ಕೆರಡು ಬಾರಿ ಉಡುಗೊರೆ: ನಗರಸಭೆ ಸದಸ್ಯ ಬಿರಿಯಾನಿ ಆನಂದ್ ಅವರು ವಾರ್ಡ್‌ನಲ್ಲಿ ವರಮಹಾಲಕ್ಷ್ಮೀ ಹಬ್ಬ ಹಾಗೂ ಹೊಸವರ್ಷದ ಸಂದರ್ಭದಲ್ಲಿ ಬಡವರಿಗೆ ಏನಾದರೂ ಉಡುಗೊರೆ ನೀಡುವ ಸಂಪ್ರದಾಯ ಇಟ್ಟುಕೊಂಡಿದ್ದಾರೆ. ಅದೇ ರೀತಿ ಈ ಬಾರಿಯೂ ಸಿಹಿಯೊಂದಿಗೆ ಉಡುಗೊರೆ ವಿತರಿಸುತ್ತಿದ್ದಾರೆ. ವಾರ್ಡ್‌ನಲ್ಲಿ ಹೆಚ್ಚು ಮತದಿಂದ ಗೆಲುವು ಕಂಡಿದ್ದು, ಅದೇ ರೀತಿ ವಾರ್ಡ್ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ ಎಂದು ಎಂಟಿಬಿ ಹೇಳಿದರು.