ಸಂಸದರ ನೂತನ ಕಚೇರಿ ಉದ್ಘಾಟಿಸಿದ ಸಚಿವ ಕೆ.ಎನ್.ರಾಜಣ್ಣ

ಸಂಸದರ ನೂತನ ಕಚೇರಿ ಉದ್ಘಾಟಿಸಿದ ಸಚಿವ ಕೆ.ಎನ್.ರಾಜಣ್ಣ
Published on

ಹಾಸನ: ನಗರದ ಜಿಲ್ಲಾಧಿಕಾರಿ ಕಚೇರಿ ಕಟ್ಟಡದ ಎರಡನೇ ಮಹಡಿಯಲ್ಲಿ ಗುರುವಾರ ಸಂಸದ ಶ್ರೇಯಸ್ ಪಟೇಲ್ ಅವರ ನೂತನ ಕಚೇರಿಯನ್ನು ಸಹಕಾರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್.ರಾಜಣ್ಣ ಉದ್ಘಾಟಿಸಿದರು.
ನಂತರ ನೂತನ ಕಚೇರಿಯಲ್ಲಿ ಸಂವಿಧಾನದ ಪೀಠಿಕೆಗೆ ಪುಷ್ಪಾರ್ಚನೆ ಮಾಡಲಾಯಿತು. ಇದೇ ವೇಳೆ ಕಚೇರಿ ಉದ್ಘಾಟನೆ ಅಂಗವಾಗಿ ನಡೆದ ವಿಶೇಷ ಹೋಮ-ಹವನ ಹಾಗೂ ಪೂಜೆಯಲ್ಲಿ ಸಚಿವರು, ಸಂಸದರು, ಶ್ರೇಯಸ್ ಪಟೇಲ್ ಕುಟುಂಬ ಸದಸ್ಯರು ಹಾಗೂ ಕಾಂಗ್ರೆಸ್ ಮುಖಂಡರು ಭಾಗಿಯಾಗಿದ್ದರು.
ಬಳಿಕ ಮಾತನಾಡಿದ ರಾಜಣ್ಣ ಅವರು, 25 ವರ್ಷಗಳ ಬಳಿಕ ಕಾಂಗ್ರೆಸ್ ಅಭ್ಯರ್ಥಿಗೆ ಹಾಸನ ಜಿಲ್ಲೆಯ ಜನ ಆಶೀರ್ವಾದ ಮಾಡಿ ಶ್ರೇಯಸ್ ಪಟೇಲ್ ಅವರನ್ನು ಸಂಸದನನ್ನಾಗಿ ಆಯ್ಕೆ ಮಾಡಿದ್ದಾರೆ. ಇದಕ್ಕೆ ಕಾರಣರಾದ ನಮ್ಮ ಪಕ್ಷದ ಎಲ್ಲ ಮುಖಂಡರು, ಕಾರ್ಯಕರ್ತರಿಗೂ ಮತ್ತೊಮ್ಮೆ ಅಭಿನಂದನೆ ಸಲ್ಲಿಸುವೆ ಎಂದರು.
ಮುಂದಿನ ದಿನಗಳಲ್ಲಿ ಜನರ ಆಶೋತ್ತರಗಳನ್ನು ಈಡೇರಿಸಲು ಹಾಗೂ ಅವರಿಗೆ ಸುಲಭವಾಗಿ ಸಿಗುವ ನಿಟ್ಟಿನಲ್ಲಿ ಇಂದು ಕಚೇರಿ ಆರಂಭಿಸಿದ್ದಾರೆ. ಈ ಕಚೇರಿಯನ್ನು ಉತ್ತಮ ರೀತಿಯಲ್ಲಿ ಬಳಸಿಕೊಂಡು ಆಗಾಗ ಕಚೇರಿಗೆ ಆಗಮಿಸುವ ಮೂಲಕ ಜನರ ಅಹವಾಲು ಸ್ವೀಕರಿಸಿ, ಅವರ ಸಮಸ್ಯೆ ಬಗೆ ಹರಿಸುವ ಮೂಲಕ ಜನರ ವಿಶ್ವಾಸ ಗಳಿಸುವ ನಿಟ್ಟಿನಲ್ಲಿ ಕೆಲಸ ಮಾಡಲಿ ಎಂದು ಸಚಿವರು ಸಲಹೆ ನೀಡಿದರು.
ಅಧಿಕಾರ ಬರಲಿದೆ, ಹೋಗಲಿದೆ. ಆದರೆ ಅವರು ಮಾಡುವ ಕೆಲಸ ಶಾಶ್ವತವಾಗಿ ಉಳಿಯಲಿದೆ. ಯಾವುದೇ ಜನಪ್ರತಿನಿಧಿಗಳು ತಮ್ಮ ಅವಧಿಯಲ್ಲಿ ಮಾಡುವ ಒಳ್ಳೆಯ ಕೆಲಸಗಳ ಮೇಲೆ ಅವರ ಹೆಸರು ಚಿರಸ್ಥಾಯಿಯಾಗಿ ಉಳಿಯಲಿದೆ. ನಾವು ಇಲ್ಲದೇ ಹೋದರೂ, ಮಾಡಿದ ಕೆಲಸ ಕಾರ್ಯಗಳ ಬಗ್ಗೆ ಜನರು ಮಾತಾಡುವಂತಾಗಬೇಕು ಎಂದರು. ಅದೇ ರೀತಿ ಶ್ರೇಯಸ್ ಪಟೇಲ್ ಕೂಡ ತನ್ನ ಅಧಿಕಾರಾವಧಿಯಲ್ಲಿ ಒಳ್ಳೆಯ ಕೆಲಸಗಳನ್ನು ಮಾಡುವ ಮೂಲಕ ಅವರ ಹೆಸರು ಚಿರಸ್ಥಾಯಿಯಾಗಿ ಉಳಿಯುವ ನಿಟ್ಟಿನಲ್ಲಿ ಕೆಲಸ ಮಾಡಲಿ ಎಂದು ಹಾರೈಸಿದರು.
ಇತ್ತೀಚಿನ ದಿನಗಳಲ್ಲಿ ಗ್ರಾಮ ಪಂಚಾಯಿತಿ ಸದಸ್ಯನಾಗಿ ಆಯ್ಕೆಯಾಗುವುದು ಸವಾಲಿನ ಕೆಲಸ. ಇಂತಹ ಪರಿಸ್ಥಿತಿಯಲ್ಲಿ ಶ್ರೇಯಸ್ ಪಟೇಲ್ ಪ್ರಥಮ ಪ್ರಯತ್ನದಲ್ಲೇ ಸಂಸದನಾಗಿ ಆಯ್ಕೆಯಾಗಿ ಹೊಸ ಇತಿಹಾಸ ಸೃಷ್ಟಿಸಿದ್ದಾರೆ. ಮುಂದಿನ ದಿನಗಳಲ್ಲಿ ಜಿಲ್ಲೆಯ ಎಲ್ಲಾ ಕಾಂಗ್ರೆಸ್ ಮುಖಂಡರು ಹಾಗೂ ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಒಳ್ಳೆಯ ಅಭಿವೃದ್ದಿ ಕೆಲಸ ಮಾಡುವ ಮೂಲಕ ಜನರ ಆಶೀರ್ವಾದ ಪಡೆದು ಮುಂದಿನ 25 ವರ್ಷ ಶ್ರೇಯಸ್ ಪಟೇಲ್ ಅವರೇ ಎಂಪಿ ಯಾಗಿ ಮುಂದುವರೆಯುವಂತೆ ಆಗಲಿ ಎಂದು ಆಶಿಸಿದರು. ನೂತನ ಕಚೇರಿ ಕಚೇರಿಗೆ ಬಂದ ಜನರ ಹಿನ್ನೆಲೆ ತಿಳಿದು, ಅವರ ಸಮಸ್ಯೆಗೆ ಶೀಘ್ರ ಸ್ಪಂದಿಸಲು ಸಿಬ್ಬಂದಿ ನಿಯೋಜನೆ ಮಾಡಿಕೊಳ್ಳಿ ಎಂದು ಸಲಹೆ ನೀಡಿದರು.
ಸಂಸದ ಶ್ರೇಯಸ್ ಪಟೇಲ್ ಮಾತನಾಡಿ, ಸಚಿವರಾದ ರಾಜಣ್ಣ ಅವರ ಅಮೃತ ಹಸ್ತದಿಂದ ನಮ್ಮ ಕಚೇರಿ ಉದ್ಘಾಟನೆ ಮಾಡಲಾಗಿದೆ, ಜನರ ಸಮಸ್ಯೆಗೆ ಪರಿಹಾರ ಕಲ್ಪಿಸಿಕೊಡುವ ನಿಟ್ಟಿನಲ್ಲಿ ತನ್ನ ಅಧಿಕಾರದ ಅವದಿ ಉದ್ದಕ್ಕೂ ಪ್ರಾಮಾಣಿಕ ಪ್ರಯತ್ನ ಮಾಡುವೆ ಎಂದರು.
ಜಿಲ್ಲೆಯ ಜನರು ನನಗೆ ಒಂದು ಜವಾಬ್ದಾರಿಯುತ ಸ್ಥಾನ ನೀಡಿದ್ದಾರೆ. ಜಿಲ್ಲೆಯ ಜನರು ಹಾಗೂ ಮುಖಂಡರ ಸಹಕಾರದೊಂದಿಗೆ ಜಿಲ್ಲೆಯ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡುವೆ. ಜೊತೆಗೆ ನನ್ನ ಕಚೇರಿಗೆ ಸಿಬ್ಬಂದಿಗಳನ್ನು ನೇಮಕ ಮಾಡಿ ಜನರ ಅಹವಾಲು ಪಡೆದು ಅವರ ಸಮಸ್ಯೆ ಬಗೆಹರಿಸುವವ ನಿಟ್ಟಿನಲ್ಲಿ ಕೆಲಸ ಮಾಡುವೆ. ಜಿಲ್ಲೆಯ ಅಭಿವೃದ್ಧಿಯೇ ನನ್ನ ಗುರಿ ಎಂದರು.
ಈ ವೇಳೆ ಮಾಜಿ ಎಂಎಲ್‌ಸಿ ಎಂ.ಎ.ಗೋಪಾಲಸ್ವಾಮಿ, ಜಿಲ್ಲಾಧ್ಯಕ್ಷ ಈ.ಎಚ್.ಲಕ್ಷ್ಮಣ್,ಮುಖಂಡರಾದ ಎಚ್.ಕೆ.ಮಹೇಶ್, ಮಾಜಿ ಶಾಸಕ ಸಿ.ಎಸ್.ಪುಟ್ಟೇಗೌಡ, ಹೆಮ್ಮಿಗೆ ಮೋಹನ್, ದೇವರಾಜೇಗೌಡ ಹಾಗೂ ಜಿಲ್ಲಾಧಿಕಾರಿ ಸಿ,ಸತ್ಯಾಭಾಮಾ, ಎಸ್‌ಪಿ.ಮೊಹಮ್ಮದ್ ಸುಜಿತಾ ಸೇರಿದಂತೆ ಕಾಂಗ್ರಸ್ ಮುಖಂಡರು ಕಾರ್ಯಕರ್ತರು ಇದ್ದರು.

ವಾರದಲ್ಲಿ ಎರಡು ದಿನ ಕಚೇರಿಯಲ್ಲಿ ಸಿಗುತ್ತಾನೆ:
ವಾರದಲ್ಲಿ ಎರಡು ದಿನ ಕಚೇರಿಗೆ ಬರುವೆ, ಪ್ರತಿ ಮಂಗಳವಾರ ಕಚೇರಿಯಲ್ಲಿದ್ದು ಸಾರ್ವಜನಿಕರ ಅಹವಾಲು ಸ್ವೀಕಾರ ಮಾಡಿ, ಅವರ ಸಮಸ್ಯೆಗೆ ಸ್ಪಂದಿಸುವೆ.ವಾರವಿಡೀ ಸಿಬ್ಬಂದಿ ಇರುತ್ತಾರೆ. ಎಂದು ಸಂಸದರು ಹೇಳಿದರು.
ಯಾವುದೇ ಅರ್ಜಿ ಬಂದರೂ ಸ್ವೀಕರಿಸಿ ಸಂಬಂಧಪಟ್ಟವರನ್ನು ಸಂಪರ್ಕಿಸಿ ಪರಿಹಾರಕ್ಕೆ ಪ್ರಯತ್ನ ಮಾಡುವೆ. ನನಗೆ ಜಿಲ್ಲೆಯ ಅಭಿವೃದ್ಧಿ ಮುಖ್ಯ. ಜಿಲ್ಲೆಯಲ್ಲಿ ಹಲವು ಸಮಸ್ಯೆ ಇವೆ. ಆ ಬಗ್ಗೆ ಪಟ್ಟಿ ಮಾಡಿ ಆದ್ಯತೆ ಮೇರೆಗೆ ಹಂತ ಹಂತವಾಗಿ ಪರಿಹರಿಸುವ ಕೆಲಸ ಮಾಡುವೆ. ಮುಖ್ಯವಾಗಿ ರಾಷ್ಟ್ರೀಯ ಹೆದ್ದಾರಿ 75ಕ್ಕೆ ಕಾಯಕಲ್ಪ ನೀಡಬೇಕಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net