

ಕಲಬುರಗಿ: ಆಹಾರ, ಆರೋಗ್ಯ, ಶಿಕ್ಷಣ ಉಳಿಸಿ ದೇಶವನ್ನು ಅಭಿವೃದ್ಧಿ ಪಡಿಸಿ ಹಾಗೂ ಸಮಾನ ವೇತನ ನಿಗದಿಪಡಿಸಿ ಶ್ರಮಿಕರ ಬದುಕು ಉಳಿಸಲು ಆಗ್ರಹಿಸಿ ಜಿಲ್ಲಾ ಕೇಂದ್ರಗಳಲ್ಲಿ ಜ.೨೩ರಂದು ಸಂಸದರ ಕಚೇರಿ ಚಲೋ ಜಾಥಾ ನಿಮಿತ್ತ ಸಹಿ ಸಂಗ್ರಹ ಅಭಿಯಾನ ನಗರದಲ್ಲಿ ಶುಕ್ರವಾರ ನಡೆಯಿತು.
ನಗರದ ಸರ್ದಾರ್ ವಲ್ಲಭಭಾಯ್ ಪಟೇಲ್ ವೃತ್ತದಲ್ಲಿ ಸ್ಕಿಂ ನೌಕರರ ಸಂಘಟನೆಗಳು ಮತ್ತು ಸಿಐಟಿಯು ರಾಜ್ಯ ಸಮಿತಿಯಿಂದ ಸಹಿ ಸಂಗ್ರಹಿಸಲಾಯಿತು. ಬಂಡವಾಳಗಾರರು ಮತ್ತು ಕಾರ್ಪೋರೇಟ್ ಕಂಪನಿಗಳಿಗೆ ೧೪.೫ ಲಕ್ಷ ಕೋಟಿ ರೂ. ಸಾಲ ಮನ್ನಾ ಮಾಡಿದ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
1 ಕೋಟಿ ನೌಕರರಿಗೆ ಕನಿಷ್ಠ ವೇತನ, ನಿವೃತ್ತಿ ಸೌಲಭ್ಯ ಕೊಡಬೇಕು, ೩ ರಿಂದ ೬ ವರ್ಷದೊಳಗಿನ ಮಕ್ಕಳಿಗೆ ಉಚಿತ, ಕಡ್ಡಾಯ ಪೂರ್ವ ಪ್ರಾಥಮಿಕ ಶಿಕ್ಷಣ ನೀಡುವ ಕಾನೂನು ರಚಿಸಬೇಕು, ಗುತ್ತಿಗೆ, ಒಳಗುತ್ತಿಗೆ ಮತ್ತು ಹೊರಗುತ್ತಿಗೆ ನೌಕರರನ್ನು ಕಾಯಂ ಮಾಡಬೇಕು, ಸಮಾನ ವೇತನ ನೀಡಬೇಕು, ೪೯ ವರ್ಷದಿಂದ ದುಡಿಯುತ್ತಿರುವ ಅಂಗನವಾಡಿ ನೌಕರರು ೨೧ ವರ್ಷದಿಂದ ದುಡಿಯುವ ಬಿಸಿಯೂಟ ನೌಕರರಿಗೆ, ಆಶಾ ಮತ್ತು ಇತರೆ ಸಿಬ್ಬಂದಿಗೆ ೩೧ ಸಾವಿರ ಕನಿಷ್ಠ ವೇತನ ಜಾರಿ ಮಾಡಬೇಕು, ಮಾಸಿಕ ಕನಿಷ್ಠ ೧೦,೦೦೦ ರೂ. ಪಿಂಚಣಿ ಕೊಡಬೇಕು ಸೇರಿ ವಿವಿಧ ಬೇಡಿಕೆ ಈಡೇರಿಸಬೇಕು ಎಂದು ಆಗ್ರಹಿಸಿದರು.
ಸಂಘಟನೆ ಜಿಲ್ಲಾ ಕಾರ್ಯದರ್ಶಿ ಎಂ.ಬಿ.ಸಜ್ಜನ್, ಅಂಗನವಾಡಿ ಕಾರ್ಯಕರ್ತೆಯರ ಸಂಘದ ಜಿಲ್ಲಾಧ್ಯಕ್ಷ ಗೌರಮ್ಮ ಪಾಟೀಲ್, ಜಿಲ್ಲಾ ಖಜಾಂಚಿ ಮಹಾದೇವಮ್ಮ, ತಾಲೂಕು ಅಧ್ಯಕ್ಷೆ ಮಂಜುಳಾ, ರತ್ನಾ, ರಾತ್ ಸುಲ್ತಾನ ಇತರರಿದ್ದರು.