ಸಂಸದ ಭಗವಂತ ಖೂಬಾ ವಿರುದ್ಧ ಚಿದ್ರಿ ಆರೋಪ ಅರ್ಥಹೀನ

Sudhir kadadi.
Published on

ಹುಲಸೂರು: ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಗೀತಾ ಚಿದ್ರಿ ಅವರು ಸಂಸದ ಭಗವಂತ ಖೂಬಾ ಅವರ ವಿರುದ್ಧ ಮಾಡಿರುವ ಆರೋಪ ಖಂಡನಿಯ. ಭಾಲ್ಕಿ ತಾಲೂಕಿನಲ್ಲಿ ಮನೆ ಹಂಚಿಕೆ ಆಯ್ಕೆ ಪ್ರಕ್ರಿಯೆಯಲ್ಲಿ ಒಂದೇ ಫಲಾನುಭವಿಗೆ ಎರಡು ಬಾರಿ ಮನೆ ನೀಡಿದ್ದಾರೆ. ಇದರಿಂದ ಬಡವರಿಗೆ ಮನೆ ಸಿಕ್ಕಿಲ್ಲ ಎಂದು ಜಿಪಂ ಪ್ರತಿಪಕ್ಷದ ನಾಯಕ ಸುಧೀರ್ ಕಾಡಾದಿ ಪ್ರಕಟಣೆಯಲ್ಲಿ ಆರೋಪಿಸಿದ್ದಾರೆ.
ಬಡವರಿಗೆ ಸಿಗಬೇಕಾದ ಮನೆಗಳನ್ನು ಈಶ್ವರ ಖಂಡ್ರೆ ಅವರು ತಮ್ಮ ಬೆಂಬಲಿಗರಿಗೆ ಹಂಚಿಕೆ ಮಾಡಿದ್ದಾರೆ. ಇದು ಆಯ್ಕೆ ಸಮಿತಿ ಅಧ್ಯಕ್ಷತೆಯಲ್ಲಿ ನಡೆದಿರುವ ಅಪರಾಧ. ಸಂಸದರ ಹೋರಾಟದ ಫಲದಿಂದ ಭಾಲ್ಕಿ ತಾಲೂಕಿನಲ್ಲಿ 91 ಕೋಟಿ ರೂ. ಹಗರಣ ಬೆಳಕಿಗೆ ಬಂದಿದೆ ಎಂದು ತಿಳಿಸಿದ್ದಾರೆ. ಗೀತಾ ಚಿದ್ರಿ ಅವರು ಭಾಲ್ಕಿ ತಾಲೂಕಿನಲ್ಲಿ ಬಡವರಿಗೆ ಆದ ಅನ್ಯಾಯದ ವಿರುದ್ಧ ಮಾತನಾಡಬೇಕು. ವಿನಾಕಾರಣ ಸಂಸದರ ವಿರುದ್ಧ ಆರೋಪ ಮಾಡಬಾರದು ಎಂದು ಹೇಳಿದ್ದಾರೆ.
ಗೀತಾ ಚಿದ್ರಿ ಅವರು ಅಧ್ಯಕ್ಷರಾದಾಗಿನಿಂದ ಜಿಲ್ಲೆಯಲ್ಲಿ ನಿರೀಕ್ಷಿತ ಪ್ರಮಾಣದ ಅಭಿವೃದ್ಧಿ ಕಾರ್ಯಗಳಾಗಿಲ್ಲ. ಶೀಘ್ರದಲ್ಲಿ ಚಿದ್ರಿ ಅವರ ವಿರುದ್ಧ ಎಲ್ಲ ಜಿಪಂ ಸದಸ್ಯರು ಸೇರಿ ಅವಿಶ್ವಾಸ ಗೊತ್ತುವಳಿ ಮಾಡಲಿದ್ದಾರೆ. ಆದ್ದರಿಂದ ಭೀತಿಗೊಳಗಾಗಿ ಹೀಗೆ ಮಾತನಾಡಿ, ಈಶ್ವರ ಖಂಡ್ರೆ ಅವರ ಅನ್ಯಾಯಕ್ಕೆ ಸಾಥ್ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net