ಸಂಸದ ಪ್ರತಾಪ್ ಸಿಂಹನ ಸಹೋದರನ ಬಂಧನ

ಸಂಸದ ಪ್ರತಾಪ್ ಸಿಂಹನ ಸಹೋದರನ ಬಂಧನ
Published on

ಹಾಸನ: ಬೇಲೂರು ತಾಲೂಕಿನ ನಂದಗೋಡನಹಳ್ಳಿಯಲ್ಲಿ ಮರಗಳ ಮಾರಣ ಹೋಮ ಪ್ರಕರಣ ಸಂಬಂಧ ಸಂಸದ ಪ್ರತಾಪ್ ಸಿಂಹ ಸಹೋದರ ವಿಕ್ರಂ ಸಿಂಹ ಅವರನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬೆಂಗಳೂರು ಪೊಲೀಸರ ಸಹಾಯದಿಂದ ಬೆಂಗಳೂರಿನಲ್ಲಿ ಶನಿವಾರ ಸಂಜೆ ಬಂಧಿಸಿದ್ದಾರೆ.
ಮರಗಳನ್ನು ಕಡಿದ ಪ್ರಕರಣ ಸಂಬಂಧ ಈಗಾಗಲೇ ಕರ್ತವ್ಯ ಲೋಪ ಆರೋಪದಡಿ ಅರಣ್ಯ ಇಲಾಖೆಯ ಡಿಎಫ್‌ಒ ಸೇರಿದಂತೆ ಐವರು ಅಧಿಕಾರಿಗಳನ್ನು ರಾಜ್ಯ ಸರ್ಕಾರ ಅಮಾನತು ಮಾಡಿದೆ. ಈ ಸಂಬಂಧ ಪ್ರಕರಣದ ಪ್ರಮುಖ ಆರೋಪಿಯಾಗಿರುವ ವಿಕ್ರಂ ಸಿಂಹ ಪ್ರಕರಣ ಬೆಳಕಿಗೆ ಬಂದ ಮೇಲೆ ತಲೆ ಮರೆಸಿಕೊಂಡಿದ್ದರು.
ವಿಕ್ರಂ ಸಿಂಹ ಬೆಂಗಳೂರಿನಲ್ಲಿ ಇರುವ ಮಾಹಿತಿ ಪಡೆದ ಅರಣ್ಯ ಇಲಾಖೆ ಅಧಿಕಾರಿಗಳು ಬೆಂಗಳೂರಿನ ಅಪರಾಧ ವಿಭಾಗದ ಪೊಲೀಸರ ಸಹಾಯ ಪಡೆದು ಬೆಂಗಳೂರಿನ ಜಾಲಹಳ್ಳಿಯ ಗಂಗಮ್ಮ ಸರ್ಕಲ್ ಜಳಿ ಇರುವ ಜಾರಕಬಂಡೆ ಕಾವಲ್ ಫಾರೆಸ್ಟ್ ಕ್ಯಾಂಪ್‌ನಲ್ಲಿ ಬಂಧಿಸಿ, ಅರಣ್ಯ ಭವನದಲ್ಲಿ ವಿಚಾರಣೆಗೆ ಒಳಪಡಿಸಿದ್ದಾರೆ.
ಡಿ.16ರಂದು ನಂದಗೋಡನಹಳ್ಳಿಯಲ್ಲಿ ಸರ್ಕಾರಿ ಜಾಗ ಸೇರಿದಂತೆ 12 ಎಕರೆ ಜಾಗದಲ್ಲಿದ್ದ ಕಾಡು ಜಾತಿಯ ಹಾಗೂ ಮನ್ನಾ ಜಾತಿಗೆ ಸೇರಿದ ಅಂದಾಜು 25-30 ಲೋಡ್‌ನಷ್ಟು ಕತ್ತರಿಸಿ ಸಾಗಿಸಿದ್ದಾರೆ. ಸರ್ಕಾರಿ ಪ್ರದೇಶದಲ್ಲಿ 126 ಮರಗಳನ್ನು ಕಡಿಯಲಾಗಿದೆ. ರಸ್ತೆಗೆ ಹೊಂದಿಕೊಂಡಂತೆ ಇರುವ ಜಾಗದಲ್ಲಿ ಎರಡು ಹಿಟಾಚಿ, ಟ್ರಾೃಕ್ಟರ್‌ಗಳನ್ನು ಬಳಸಿ ಹಲವು ದಿನಗಳಿಂದ ಮರಗಳನ್ನು ಕಡಿಯುತ್ತಿರುವುದು ಅರಣ್ಯ ಇಲಾಖೆ ಸಿಬ್ಬಂದಿಯ ಗಮನಕ್ಕೆ ಬಾರದಿರುವುದು ಹಾಗೂ ಕರ್ತವ್ಯ ಲೋಪ ಎಸಗಿರುವುದು ಮೇಲ್ನೋಟಕ್ಕೆ ಕಂಡು ಬಂದ ಕಾರಣ ಹಾಸನ ಡಿಎಫ್‌ಒ ಸೇರಿದಂತೆ ಐವರು ಅಧಿಕಾರಿಗಳು, ಸಿಬ್ಬಂದಿಯನ್ನು ಸರ್ಕಾರ ಅಮಾನತುಗೊಳಿಸಿದೆ.
ಅರೇಹಳ್ಳಿ ಹೋಬಳಿಯ ನಂದಗೋಡನಹಳ್ಳಿ ಗ್ರಾಮದಲ್ಲಿ ಬೆಲೆಬಾಳುವ ಸಾಗವಾನಿ, ಹೊನ್ನೆ, ಬೀಟೆ, ಹಲಸು ಸೇರಿದಂತೆ ಇನ್ನಿತರ ಬೆಲೆಬಾಳುವ ಕಾಡು ಜಾತಿ ಮರಗಳನ್ನು ಕಡಿದು ಮಾರಣ ಹೋಮ ಮಾಡಲಾಗಿತ್ತು. ಅದೇ ಗ್ರಾಮಕ್ಕೆ ಅಂದು ರೆವಿನ್ಯೂ ಇನ್ಸ್‌ಪೆಕ್ಟರ್ ಹಾಗೂ ಗ್ರಾಮಲೆಕ್ಕಿಗ ಹಕ್ಕುಪತ್ರ ನೀಡಲೆಂದು ತೆರಳಿದ್ದ ಸಂದರ್ಭದಲ್ಲಿ ಈ ಘಟನೆ ತಿಳಿದು ಬಂದಿದ್ದು, ತಕ್ಷಣ ತಹಸೀಲ್ದಾರ್ ಮಮತಾ ಅವರಿಗೆ ವಿಚಾರ ತಿಳಿಸಿದ್ದಾರೆ. ವಿಚಾರ ತಿಳಿದ ಕೂಡಲೆ ತಹಸೀಲ್ದಾರ್ ಮಮತಾ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ ಕ್ರಮ ಕೈಗೊಂಡಿದ್ದರು. ಈ ಸಂಬಂಧ ಸರ್ಕಾರಕ್ಕೆ ವರದಿಯನ್ನು ಸಲ್ಲಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net