ಸಂಸದ ಖೂಬಾಗೆ ಸುತ್ತಿಕೊಂಡ ಟಿಕೆಟ್ ವಿವಾದ !

bhagwanth khuba
Published on

ಬಸವಕಲ್ಯಾಣ: ಕಲಬುರಗಿ ಜಿಲ್ಲೆಯ ಶರಣು ಸಲಗರ್ ಅವರಿಗೆ ಬಿಜೆಪಿ ವರಿಷ್ಠರು ಟಿಕೆಟ್ ನೀಡಿರುವುದು ಸ್ಥಳೀಯ ಆಕಾಂಕ್ಷಿಗಳಲ್ಲಿ ತೀವ್ರ ಅತೃಪ್ತಿ, ಆಕ್ರೋಶಕ್ಕೆ ಕಾರಣವಾಗಿದೆ. ಟಿಕೆಟ್ ಗಾಗಿ ಎರಡ್ಮೂರು ತಿಂಗಳಿಂದ ಜಿದ್ದಾಜಿದ್ದಿನ ಪೈಪೋಟಿ ನಡೆದಿತ್ತು. ಇದರಲ್ಲಿ ಸಲಗರ್ ಜಯ ಗಳಿಸಿದ್ದಾರೆ. ಪಕ್ಷದ ಹೈಕಮಾಂಡ್ ಈ ನಿರ್ಣಯ ಕೈಗೊಂಡರೂ ಟಿಕೆಟ್ ಸಂಬಂಧದ ವಿವಾದ ಕ್ಷೇತ್ರದ ಚುನಾವಣಾ ಉಸ್ತುವಾರಿ, ಸಂಸದ ಭಗವಂತ ಖೂಬಾ ಅವರಿಗೆ ಸುತ್ತಿಕೊಂಡಿದೆ.

ಟಿಕೆಟ್ ವಂಚಿತ ಹಲವರು ಬಿಜೆಪಿ ಹೈಕಮಾಂಡ್ ಗಿಂತ ಹೆಚ್ಚಾಗಿ ಸಂಸದ ಖೂಬಾ ಮೇಲೆ ಸಿಟ್ಟಾಗಿದ್ದು, ಬಹಿರಂಗ ಆರೋಪ ಮಾಡುತ್ತಿದ್ದಾರೆ. ಟಿಕೆಟ್ ವಂಚಿತರ ಬೆಂಬಲಿಗರಂತೂ ಬಿಜೆಪಿ ಟಿಕೆಟ್ ಬಿಕ್ರಿಯಾಗಿದೆ ಎಂದು ಗುಲ್ಲೆಬ್ಬಿಸಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಅನೇಕ ಪೋಸ್ಟ್, ಕಮೆಂಟ್ ಹರಿದಾಡುತ್ತಿವೆ. ಸಲಗರ್ ಅವರಿಗೆ ಟಿಕೆಟ್ ಸಿಕ್ಕಿರುವುದರ ಹಿಂದೆ ಖೂಬಾ ಪ್ರಮುಖ ಪಾತ್ರ ವಹಿಸಿದ್ದಾರೆ ಎಂಬುದು ಇವರ ಗಂಭೀರ ಆರೋಪ.

ಹೈಕಮಾಂಡ್ ಮಟ್ಟದಲ್ಲಿ ಅದ್ಯಾವ ಬೆಳವಣಿಗೆ ನಡೆದಿವೆಯೋ? ಯಾವ ಲೆಕ್ಕಾಚಾರ ಹಾಗೂ ಮಾನದಂಡದಲ್ಲಿ ವರಿಷ್ಠರು ಟಿಕೆಟ್ ಅಂತಿಮಗೊಳಿಸಿದ್ದಾರೋ ಯಾರಿಗೂ ಖಚಿತವಾಗಿ ಗೊತ್ತಿಲ್ಲ. ಆದರೆ ಅತೃಪ್ತರ ಕೆಂಗಣ್ಣಿಗೆ ಖೂಬಾ ಗುರಿಯಾಗಿರುವುದು ಸುಳ್ಳಲ್ಲ. ಟಿಕೆಟ್ ಘೋಷಣೆಯಾಗಿ ನಾಲ್ಕು ದಿನವಾಗಿದೆ. ಅಂದಿನಿಂದ ಈವರೆಗೆ ಟಿಕೆಟ್ ಹಂಚಿಕೆ ವಿವಾದದ ಚರ್ಚೆ, ಸಂಸದರ ವಿರುದ್ಧ ಟೀಕೆ ಟಿಪ್ಪಣಿಗಳು ಕಮ್ಮಿ ಆಗದಿರುವುದು ಗಮನಾರ್ಹ.

ಬಿಜೆಪಿ ಟಿಕೆಟ್ ಗೆ ಸ್ಥಳೀಯ 16 ಆಕಾಂಕ್ಷಿಗಳಿದ್ದರು. ಇವರಲ್ಲಿ ಯಾರಾದರೊಬ್ಬರಿಗೆ ಟಿಕೆಟ್ ಕೊಡಿ ಎಂಬ ಬೇಡಿಕೆ ಮಂಡಿಸಲಾಗಿತ್ತು. ಇದಕ್ಕೆ ವರಿಷ್ಠರು ಮಾನ್ಯ ಮಾಡದೆ ಹೊರ ಜಿಲ್ಲೆಯವರಿಗೆ ನೀಡಿದ್ದು ಎಷ್ಟು ಸರಿ ಎಂಬುದು ಇವರ ಪ್ರಶ್ನೆ. ಇದೀಗ ಈ ಪ್ರಶ್ನೆಯೇ ಚುನಾವಣೆಯಲ್ಲಿ ದೊಡ್ಡ ವಿಷಯವಾಗಿ ಮಾರ್ಪಟ್ಟಿದ್ದು, ಟಿಕೆಟ್ ಘೋಷಿಸಿದ ವರಿಷ್ಠರ ತಲೆಬಿಸಿಗೆ ಕಾರಣವಾಗಿದೆ.

ಸ್ಥಳೀಯರ ಟಿಕೆಟ್ ಕೈತಪ್ಪಲು ಖೂಬಾ ಕಾರಣ ಎಂದು ಹಲವರು ದೂರುವ ಜತೆಯಲ್ಲಿ ಟಿಕೆಟ್ ಮಾರಾಟವಾಗಿದೆ ಎಂದು ನೇರವಾಗಿ ಸಂಸದರ ವಿರುದ್ಧ ಹೇಳಿಕೆ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಟೀಕೆ ಬಂದಿದ್ದವು. ಈ ಆರೋಪ ಠಾಣೆಗೆ ದೂರು ನೀಡುವವರೆಗೂ ಹೋಗಿದೆ. ಚುನಾವಣೆ ಉಸ್ತುವಾರಿ ಪಟ್ಟಿಯಲ್ಲಿ ಸಂಸದ ಖೂಬಾ ಸೇರಿ ಏಳೆಂಟು ಮುಖಂಡರಿದ್ದಾರೆ. ಆದರೆ ಟಿಕೆಟ್ ಸಂಬಂಧದ ವಿವಾದದೊಳಗೆ ಖೂಬಾ ಹೆಸರು ಮಾತ್ರ ಥಳಕು ಹಾಕಿಕೊಳ್ಳುವ ಜತೆಗೆ ಪಕ್ಷದಲ್ಲಿ ಬಂಡಾಯದ ಬಿರುಗಾಳಿ ಎಬ್ಬಿಸಿರುವುದು ಚರ್ಚೆಗೆ ಗ್ರಾಸವಾಗಿದೆ.

ಟಿಕೆಟ್ ಹಂಚಿಕೆಯಲ್ಲಿ ನನ್ನದೇನೂ ಪಾತ್ರವಿಲ್ಲ. ಇದು ವರಿಷ್ಠರ ನಿರ್ಣಯ. ಹೈಕಮಾಂಡ್ ಎಲ್ಲವೂ ಅಳೆದು, ತೂಗಿ ಗೆಲ್ಲುವ ಅಭ್ಯರ್ಥಿಯನ್ನು ಕಣಕ್ಕಿಳಿಸಿದೆ. ಟಿಕೆಟ್ ಮಾರಾಟ ಮಾಡುವ ಸಂಸ್ಕೃತಿ ಬಿಜೆಪಿಯಲ್ಲಿಲ್ಲ. ಇದೆಲ್ಲ ಜೆಡಿಎಸ್ ಇತರ ಪಕ್ಷದವರ ಸಂಸ್ಕೃತಿ ಎಂದು ಸಂಸದ ಖೂಬಾ ಸುದ್ದಿಗೋಷ್ಠಿ ನಡೆಸಿ ಸಮಜಾಯಿಷಿ ನೀಡಿದ್ದಾರೆ. ತಮ್ಮ ವಿರುದ್ಧ ಟೀಕೆ ಮಾಡುವವರು ಬಿಜೆಪಿಯವರೇ ಅಲ್ಲ ಎಂದೂ ಹೇಳಿದ್ದಾರೆ. ಆದರೂ ಕಲ್ಯಾಣ ಕಣದಲ್ಲಿನ ಸ್ಥಿತಿಯೇ ಬೇರೆಯಿದೆ. ಟಿಕೆಟ್ ಹಂಚಿಕೆ ಸಂಬಂಧ ಭುಗಿಲೆದ್ದ ಅಸಮಾಧಾನ ತಣ್ಣಗಾಗುವುದಾ ಅಥವಾ ದಿನಕ್ಕೊಂದು ತಿರುವು ಪಡೆಯುತ್ತಾ? ಇದು ಏನೆಲ್ಲ ಬೆಳವಣಿಗೆಗೆ ಕಾರಣವಾಗಬಹುದು ಕಾದು ನೋಡಬೇಕು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net