ಸಂಸದ ಆದರ್ಶ ಗ್ರಾಮದಲ್ಲಿ ಆದರ್ಶವೇ ಮಾಯ : ಬಿಎಸ್‌ಪಿ ಮುಖಂಡ ನಾಗೇಶ್ ವ್ಯಂಗ್ಯ

harohalli
Published on

ಹಾರೋಹಳ್ಳಿ: ಸ್ಮಶಾನಕ್ಕಾಗಿ ರಸ್ತೆಯಲ್ಲಿ ಶವ ಇಟ್ಟು ಹೋರಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದ್ದು, ಇದಕ್ಕೆ ರಾಜಕಾರಣಿಗಳೇ ಕಾರಣರಾಗಿದ್ದಾರೆ. ಅದೂ ಅಲ್ಲದೇ ಸಂಸದರ ಆದರ್ಶ ಗ್ರಾಮದಲ್ಲಿ ಆದರ್ಶವೇ ಮಾಯವಾಗಿದೆ ಎಂದು ಬಿಎಸ್‌ಪಿ ರಾಮನಗರ ಜಿಲ್ಲಾ ಉಸ್ತುವಾರಿ ನಾಗೇಶ್ ವ್ಯಂಗ್ಯವಾಡಿದರು.

ಸ್ಮಶಾನಕ್ಕಾಗಿ ಆಗ್ರಹಿಸಿ ಪ್ರತಿಭಟಿಸಿದ್ದ ಕುಂಬಾರದೊಡ್ಡಿ ಗ್ರಾಮಸ್ಥರನ್ನು ಬುಧವಾರ ಭೇಟಿಯಾಗಿದ್ದ ಅವರು, ಸುದ್ದಿಗಾರರ ಜತೆ ಮಾತನಾಡಿ, ತಾಲೂಕಿನಾದ್ಯಂತ ಸ್ಮಶಾನದ ಸಮಸ್ಯೆ ಬಿಟ್ಟೂ ಬಿಡದೇ ಕಾಡುತ್ತಿದೆ. ಈ ಬಗ್ಗೆ ಜಿಲ್ಲೆಯ ಸಂಸದರು ಹಾಗೂ ಆಯಾ ಭಾಗದ ಶಾಸಕರು ಸಭೆ ನಡೆಸಿ ಕೂಡಲೇ ಜನಸಂಖ್ಯೆಗನುಗುಣವಾಗಿ ಸ್ಮಶಾನ ನಿರ್ಮಿಸಿಕೊಡುವ ಕೆಲಸವನ್ನು ಮಾಡಬೇಕೆಂದು ಆಗ್ರಹಿಸಿದರು.

ಸ್ಮಶಾನಕ್ಕಾಗಿ ಪ್ರತಿಭಟಿಸಿದ್ದ ಕುಂಬಾರದೊಡ್ಡಿ ಗ್ರಾಮ ಯಲಚವಾಡಿ ಗ್ರಾಪಂ ವ್ಯಾಪ್ತಿಗೆ ಬರಲಿದೆ. ಜತೆಗೆ ಸಂಸದರು ಈ ಗ್ರಾಮವನ್ನು ಆದರ್ಶ ಗ್ರಾಮವನ್ನಾಗಿ ಆಯ್ಕೆ ಮಾಡಿಕೊಂಡು ಅಭಿವೃಧ್ಧಿ ಮಾಡದಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಸಂಸದ ಡಿ.ಕೆ. ಸುರೇಶ್, ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ಶಾಸಕಿ ಅನಿತಾ ಕುಮಾರಸ್ವಾಮಿಯಂತಹ ಪ್ರಭಾವಿ ರಾಜಕಾರಣಿಗಳಿದ್ದರೂ ಜನರು ಸ್ಮಶಾನಕ್ಕಾಗಿ ಪ್ರತಿಭಟಿಸಬೇಕಾದ ಅನಿವಾರ್ಯತೆ ಇದೆ ಎಂದರೆ ಇವರಿಗೆ ನಾಚಿಕೆಯಾಗಬೇಕು. ಸರ್ಕಾರಗಳು ವಾಸಿಸಲು ಮನೆಗಳನ್ನೂ ನೀಡುತ್ತಿಲ್ಲ, ಸತ್ತರೆ ಹೂಳಲು ಸ್ಮಶಾನವೂ ಇಲ್ಲ. ಇದು ಸಂಸದರ ಆದರ್ಶ ಗ್ರಾಮದ ಸ್ಥಿತಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮರಳವಾಡಿ ಸೇರಿ ಜಿಲ್ಲೆಯ ಹಲವು ಕಡೆ ಅರಣ್ಯ ಇಲಾಖೆ ರೈತರನ್ನು ಒಕ್ಕಲೆಬ್ಬಿಸುವ ಕೆಲಸ ಮಾಡುತ್ತಿದೆ. ಜನಪ್ರತಿನಿಧಿಗಳ ಸಭೆಗಳಲ್ಲಿ ಮಾತ್ರ ರೈತರಿಗೆ ತೊಂದರೆ ನೀಡಬೇಡಿ ಎನ್ನುವ ಸಂದೇಶಗಳಿರುತ್ತವೆ. ಆದರೆ ಅವು ಜಾರಿಗೆ ಬರುವುದಿಲ್ಲ. ಅದೆಷ್ಟು ಪ್ರಮಾಣದಲ್ಲಿ ಜನಪ್ರತಿನಿಧಿಗಳ ೋಷಿಸಿದ ಯೋಜನೆಗಳು ಜಾರಿಯಾಗಿವೆ ಎಂಬುದನ್ನು ತೋರಿಸಲಿ ಎಂದು ನಾಗೇಶ್ ಸವಾಲು ಹಾಕಿದರು.

ತೇರು ಬೀದಿ, ದೊಡ್ಡೂರು ಸೇರಿ ಹಲವು ಗ್ರಾಮಗಳು ರಾಜ್ಯದ ಗಡಿಭಾಗದಲ್ಲಿವೆ. ಆದರೆ, ಅಲ್ಲಿನ ಗ್ರಾಪಂ ಅಧಿಕಾರಿಗಳು ಇ-ಖಾತೆ ಮಾಡಿಕೊಡಲು ಜನರಿಂದ 5ರಿಂದ 10 ಸಾವಿರ ರೂ.ಗಳಿಗೆ ಬೇಡಿಕೆ ಇಡುತ್ತಾರೆ. ಬಡವರೆನ್ನದೆ ಅಧಿಕಾರಿಗಳು ಸುಲಿಗೆಗಿಳಿದಿದ್ದಾರೆ. ಹಿರಿಯ ಅಧಿಕಾರಿಗಳು ಗಮನಹರಿಸಬೆಕು ಎಂದು ನಾಗೇಶ್ ಒತ್ತಾಯಿಸಿದರು.

ಬಿಎಸ್‌ಪಿ ಪದಾಧಿಕಾರಿಗಳಾದ ದೇವರಹಳ್ಳಿ ಸ್ವಾಮಿ, ಪ್ರದೀಪ್, ಸಗರ ಶ್ರೀನಿವಾಸ್, ಕುಂಬಾರದೊಡ್ಡಿ ಗ್ರಾಮದ ಉಮೇಶ್ ನಾಯಕ್, ಸುರೇಶ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net