

ಮೈಸೂರು: ಸಂಸತ್‌ಗೆ ನುಗ್ಗಿ ದಾಂದಲೆ ನಡೆಸಿದ ಪ್ರಕರಣದ ಪ್ರಮುಖ ಆರೋಪಿ ಮೈಸೂರಿನ ಮನೋರಂಜನ್ ಸ್ನೇಹಿತ ಸೂರಪ್ಪನನ್ನು ದೆಹಲಿ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ ಬೆನ್ನಲ್ಲೇ ಮತ್ತೊಬ್ಬ ಸ್ನೇಹಿತನನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದ್ದಾರೆ.
ಮನೋರಂಜನ್‌ನಿಗೆ ಮತ್ತೊಬ್ಬ ಸ್ನೇಹಿತ ಇದ್ದ ಎಂದು ವಿಚಾರಣೆ ಸಂದರ್ಭದಲ್ಲಿ ಸೂರಪ್ಪ ನೀಡಿದ ಮಾಹಿತಿ ಮೇರೆಗೆ ದೆಹಲಿ ಪೊಲೀಸರು, ಆತನನ್ನು ಸಹ ವಶಕ್ಕೆ ಪಡೆದು ಅಜ್ಞಾತ ಸ್ಥಳದಲ್ಲಿ ವಿಚಾರಣೆಗೆ ಒಳಪಡಿಸಿ ಮಾಹಿತಿ ಕಲೆ ಹಾಕಿದ್ದಾರೆ. ವಶಕ್ಕೆ ಪಡೆದ ಈತನ ಮಾಹಿತಿಯನ್ನು ಬಹಿರಂಗ ಪಡಿಸಿಲ್ಲ. ರಹಸ್ಯ ಕಾಯ್ದುಕೊಳ್ಳಲಾಗುತ್ತಿದೆ.
ಸೂರಪ್ಪನೊಂದಿಗೆ ಮನೋರಂಜನ್ ಹಣಕಾಸು ವ್ಯವಹಾರ ನಡೆಸುತ್ತಿದ್ದ ಎಂಬ ಅಂಶ ಸಹ ವಿಚಾರಣೆ ಸಂದರ್ಭದಲ್ಲಿ ಬಹಿರಂಗವಾಗಿದೆ. ಈ ಕುರಿತು ದೆಹಲಿ ಪೊಲೀಸರಿಗೆ ಮಹತ್ವದ ಮಾಹಿತಿ ದೊರೆತಿದೆ.
ಪ್ರಾರಂಭದಲ್ಲಿ ಸೂರಪ್ಪನ ಕುರಿತು ತಿಳಿದಿಲ್ಲ ಎಂದಿದ್ದ ಮನೋರಂಜನ್ ಪಾಲಕರು, ಬಳಿಕ ಆತನ ಪರಿಚಯ ಇದೆ ಎಂದು ಒಪ್ಪಿಕೊಂಡಿದ್ದಾರೆ.
ಸೂರಪ್ಪ ಅವರೊಂದಿಗೆ ಮನೋರಂಜನ್ ದೂರವಾಣಿ ಮೂಲಕ ಸಂಪರ್ಕದಲ್ಲಿದ್ದ. ಈ ಕುರಿತು ಖಚಿತ ಮಾಹಿತಿ ಮೇರೆಗೆ ವಿಜಯನಗರದಲ್ಲಿ ಹೇರ್ ಸಲೂನ್ ನಡೆಸುತ್ತಿದ್ದ ಸೂರಪ್ಪ ಅವರನ್ನು ಗುರುವಾರವಷ್ಟೇ ದೆಹಲಿ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು.
ಮೈಸೂರಿನಲ್ಲಿದ್ದಾಗ ಸೂರಪ್ಪ ಅವರನ್ನು ಸಲೂನ್‌ನಲ್ಲಿ ಭೇಟಿಯಾಗುತ್ತಿದ್ದ ಮನೋರಂಜನ್, ಸಾಕಷ್ಟು ಸಮಯ ಅವರೊಂದಿಗೆ ಇರುತ್ತಿದ್ದ. ಜತೆಗೆ ಮೈಸೂರಿನಿಂದ ಹೊರಗೆ ಇದ್ದಾಗ ಸಹ ಮೊಬೈಲ್ ಪೋನ್ ಮೂಲಕ ಸಂಪರ್ಕವನ್ನು ಇಟ್ಟುಕೊಂಡಿದ್ದ. ಇದರಿಂದ ಮನೋರಂಜನ್ ಕುರಿತು ಹೆಚ್ಚಿನ ಮಾಹಿತಿ ಕಲೆ ಹಾಕಲು ನಿರ್ಧರಿಸಿದ ದೆಹಲಿ ಪೊಲೀಸರು, ಸೂರಪ್ಪನನ್ನು ವಶಕ್ಕೆ ಪಡೆದಿದ್ದರು. ಈತನ ಮಾಹಿತಿ ಮೇರೆಗೆ ಆರೋಪಿಯ ಮತ್ತೊಬ್ಬ ಸ್ನೇಹಿತನನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.