ಸಂಸತ್ ಸದಸ್ಯ ಸ್ಥಾನದಿಂದ ಶೀಘ್ರ ಅನರ್ಹಗೊಳ್ಳಲಿದ್ದಾರೆ: ದೇವರಾಜೇಗೌಡ

ಸಂಸತ್ ಸದಸ್ಯ ಸ್ಥಾನದಿಂದ ಶೀಘ್ರ ಅನರ್ಹಗೊಳ್ಳಲಿದ್ದಾರೆ: ದೇವರಾಜೇಗೌಡ
Published on

ಹಾಸನ: ಇನ್ನು ಮೂರ್ನಾಲ್ಕು ತಿಂಗಳಲ್ಲಿ ಸಂಸದ ಶ್ರೇಯಸ್ ಪಟೇಲ್ ಸದಸ್ಯತ್ವ ಅನರ್ಹತೆ ಆಗಲಿದೆ. ಪ್ರಜ್ಚಲ್ ರೇವಣ್ಣ ಪ್ರಕರಣದಲ್ಲಿ ನಮಗೆ ಅನುಭವ ಇರಲಿಲ್ಲ. ಈಗ ನಾವು ಸೂಕ್ತ ರೀತಿಯಲ್ಲಿ ದಾಖಲೆ ನೀಡಿದ್ದೇವೆ. ಶೀಘ್ರವಾಗಿ ಶ್ರೇಯಸ್ ಪಟೇಲ್ ಸಂಸತ್ ಸದಸ್ಯ ಸ್ಥಾನದಿಂದ ಅನರ್ಹತೆ ಆಗಲಿದ್ದಾರೆ ಎಂದು ವಕೀಲ ಜಿ.ದೇವರಾಜೇಗೌಡ ಭವಿಷ್ಯ ನುಡಿದರು.
ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶ್ರೇಯಸ್ ತಮ್ಮ ಚುನಾವಣಾ ಪ್ರಮಾಣ ಪತ್ರದಲ್ಲಿ ದೊಡ್ಡಮಟ್ಟದ ಆಸ್ತಿ ವಿಚಾರ ಬಹಿರಂಗ ಪಡಿಸದ ಆರೋಪದ ಮೇಲೆ ನನ್ನ ಮಗ ಡಿ. ಚರಣ್ ಗೌಡ ಸಲ್ಲಿಸಿದ ಅರ್ಜಿ ಸಂಬಂಧ ನೂತನ ಸಂಸದ ಶ್ರೇಯಸ್ ಪಟೇಲ್ ಖುದ್ದು ಹಾಜರಾಗುವಂತೆ ಹೈಕೋರ್ಟ್ ಸಮನ್ಸ್ ನೀಡಿದೆ ಎಂದು ವಕೀಲ ಜಿ.ದೇವರಾಜೇಗೌಡ ತಿಳಿಸಿದರು.
ಜನರ ಅನುಕಂಪ ಗಿಟ್ಟಿಸುವ ಸಲುವಾಗಿ ನೂರಾರು ಕೋಟಿ ರೂ. ಮೌಲ್ಯದ ಆಸ್ತಿಗೆ ಕಡಿಮೆ ಮೌಲ್ಯ ದಾಖಲಿಸಿದ್ದಾರೆ. ಚುನಾವಣಾ ಖರ್ಚು- ವೆಚ್ಚದ ಬಗ್ಗೆ ಕೂಡ ತಪ್ಪಾಗಿ ಮಾಹಿತಿ ನೀಡಿದ್ದಾರೆ. ಚುನಾವಣೆಯಲ್ಲಿ ಹೆಚ್ಚುವರಿಯಾಗಿ 21 ಲಕ್ಷ ರೂ. ಖರ್ಚು ಮಾಡಿರುವ ಬಗ್ಗೆ ದೂರು ನೀಡಲಾಗಿದೆ. ಅಂದಿನ ಚುನಾವಣಾ ಅಧಿಕಾರಿ ಜತೆ ಶಾಮೀಲಾಗಿ ಖರ್ಚು ವೆಚ್ಚವನ್ನು ಮುಚ್ಚಿಡಲಾಗಿದೆ. ಆದಾಯ ತೆರಿಗೆ ಇಲಾಖೆಗೂ ಕೂಡ ತಪ್ಪು ಮಾಹಿತಿ ನೀಡಲಾಗಿದೆ. ತಪ್ಪು ಮಾಹಿತಿ ಕೊಡುವುದು ಕೂಡ ಚುನಾವಣಾ ಅಕ್ರಮ ಎಂದು ಹೇಳಿದರು.
ಹಿಂದಿನ ಸಂಸದ ಪ್ರಜ್ಚಲ್ ರೇವಣ್ಣ ಅವರ ಅಶ್ಲೀಲ ವಿಡಿಯೋಗಳನ್ನು ಬಿಡುಗಡೆ ಮಾಡಿ ಶ್ರೇಯಸ್ ಪಟೇಲ್ ಅದರ ಲಾಭ ಪಡೆದುಕೊಂಡಿದ್ದಾರೆ. ಈ ಬಗ್ಗೆಯೂ ಕೂಡ ನ್ಯಾಯಾಲಯಕ್ಕೆ ಮಾಹಿತಿ ನೀಡಲಾಗಿದೆ. ಹಾಗಾಗಿ ಅವರ ಸದಸ್ಯತ್ವ ಅನರ್ಹತೆಗೆ ಕೇಸ್ ಹಾಕಲಾಗಿದೆ. ಅವರು ತಪ್ಪು ಮಾಹಿತಿ ನೀಡಿರುವ ಬಗ್ಗೆ ಹೈಕೋರ್ಟ್ ಸೇರಿದಂತೆ ಕೇಂದ್ರ ಚುನಾವಣಾ ಆಯೋಗಕ್ಕೂ ಕೂಡ ದೂರು ನೀಡಲಾಗಿದೆ. ಈ ಪ್ರಕರಣದಲ್ಲಿ ನನ್ನ ಮಗನಿಂದಲೇ ದೂರು ಕೊಡಿಸಿದ್ದೇನೆ. ಯಾವುದೇ ಆಮಿಷಕ್ಕೆ ಬಲಿಯಾಗಬಾರದು ಎಂದು ಹೀಗೆ ಮಾಡಿದ್ದೇನೆ ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net