ಸಂಶೋಧನೆಯಲ್ಲಿ ವಿದ್ಯಾರ್ಥಿಗಳು ಸಕ್ರಿಯವಾಗಲಿ

10
Published on

ಮೈಸೂರು: ವಿದ್ಯಾರ್ಥಿಗಳು ಸಂಶೋಧನೆಯಲ್ಲಿ ಹೆಚ್ಚು ಸಕ್ರಿಯವಾಗಬೇಕು. ಹೊಸ ಆಲೋಚನೆ, ವಿಚಾರದ ಮೂಲಕ ಗುರುತಿಸಿಕೊಳ್ಳಬೇಕು ಎಂದು ವಿಶ್ರಾಂತ ಕುಲಪತಿ ಪ್ರೊ.ಕೆ.ಎಸ್. ರಂಗಪ್ಪ ಹೇಳಿದರು.
ಮೈಸೂರು ವಿಶ್ವವಿದ್ಯಾಲಯದ ರಸಾಯನಶಾಸ ಅಧ್ಯಯನ ವಿಭಾಗದಲ್ಲಿ ಸೋಮವಾರ ಸಂಜೆ ಆಯೋಜಿಸಿದ್ದ ‘ರಾಸಾಯನಿಕ ಸಮಾಜ-2020-21’ ಉದ್ಘಾಟನೆ ಮತ್ತು ಡಾ.ಕೆ.ಎನ್. ಮೋಹನ್‌ಕುಮಾರ್ ಅವರ ‘ಮುಂಗಡ ಭೌತಿಕ ರಸಾಯನಶಾಸ ಪ್ರಯೋಗಗಳು’ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸ್ಪರ್ಧಾತ್ಮಕ ಯುಗದಲ್ಲಿ ಯುವ ಜನರಿಗೆ ವಿಪುಲವಾದ ಅವಕಾಶಗಳಿದ್ದು, ಅವುಗಳನ್ನು ಸೂಕ್ತ ರೀತಿಯಲ್ಲಿ ಬಳಸಿಕೊಳ್ಳುವುದನ್ನು ಕರಗತ ಮಾಡಿಕೊಳ್ಳಬೇಕು ಎಂದರು.
ವಿದ್ಯಾರ್ಥಿಗಳಿಗೆ ಭವಿಷ್ಯದ ಮಾರ್ಗಸೂಚಿ ಅಗತ್ಯ. ಪಠ್ಯಕ್ರಮದೊಂದಿಗೆ ಕೌಶಲ ತರಬೇತಿಯನ್ನು ನೀಡುವ ಮೂಲಕ ಉದ್ಯೋಗ ಗಿಟ್ಟಿಸಿಕೊಳ್ಳಲು ಸಜ್ಜುಗೊಳಿಸಬೇಕಾಗಿದೆ ಎಂದು ಸಲಹೆ ನೀಡಿದರು.
ರಾಸಾಯನಿಕ ಸಮಾಜ ಎನ್ನುವುದು ಶೈಕ್ಷಣಿಕ ಹಬ್ಬ ಆಗಿದೆ. ಇದನ್ನು ಕಲಿಯುವ ವಿದ್ಯಾರ್ಥಿಗಳು, ಸಂಶೋಧಕರು, ಪ್ರಾಧ್ಯಾಪಕರು ಇದರಲ್ಲಿ ಭಾಗವಹಿಸಬೇಕು ಎಂದ ಅವರು, ನಮ್ಮ ದೇಶದಲ್ಲಿ ಅನೇಕ ಪ್ರತಿಭಾವಂತ ವಿದ್ಯಾರ್ಥಿಗಳಿದ್ದು, ಅಂತಹವನ್ನು ಗುರುತಿಸಿ ಉತ್ತೇಜನ ನೀಡುವ ಕೆಲಸವಾಗಬೇಕಿದೆ. ಜತೆಗೆ, ದೇಶ, ವಿದೇಶಗಳ 10 ಜನ ಪರಿಣಿತರನ್ನು ಕರೆಯಿಸಿ ವಿದ್ಯಾರ್ಥಿಗಳಿಗೆ ಆಯಾ ವಿಷಯಗಳಿಗೆ ಸಂಬಂಧಿಸಿದಂತೆ ಮಾಹಿತಿ ತಿಳಿಸಿ ಕೊಡುವಂತಾಗಬೇಕು ಎಂದು ಹೇಳಿದರು.
ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತ್‌ಕುಮಾರ್ ಮಾತನಾಡಿ, ರಸಾಯನಶಾಸ ಅಧ್ಯಯನ ವಿಭಾಗವು ವಿವಿಯಲ್ಲೇ ಹಳೇಯ ವಿಭಾಗವಾಗಿದೆ. ಇಲ್ಲಿ ಅಧ್ಯಯನ ಮಾಡಿದ ವಿದ್ಯಾರ್ಥಿಗಳು ದೇಶ, ವಿದೇಶದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಇಲ್ಲಿಯ ಮುಖ್ಯಸ್ಥರು ಉತ್ತಮವಾಗಿ ಕಾರ್ಯನಿರ್ವಹಣೆ ಮಾಡಿದ್ದರಿಂದ ಈ ವಿಭಾಗವು ವಿವಿಯಲ್ಲಿ ವಿಶೇಷ ಸ್ಥಾನ ಹೊಂದಿದೆ. ವಿವಿಧ ರಚನಾತ್ಮಕ ಕಾರ್ಯಗಳ ಮೂಲಕ ಇದು ಇತರ ವಿಭಾಗಗಳಿಗೂ ಮಾದರಿಯಾಗಿದೆ ಎಂದು ಹೇಳಿದರು.
ರಸಾಯನಶಾಸ ಅಧ್ಯಯನ ವಿಭಾಗದ ಮುಖ್ಯಸ್ಥ ಪ್ರೊ.ನಾಗರಾಜ್ ನಾಯಕ್ ಮಾತನಾಡಿ, ನಮ್ಮ ವಿಭಾಗಕ್ಕೆ 115 ವರ್ಷದ ಇತಿಹಾಸವಿದೆ. ವಿಭಾಗದ ಕಾರ್ಯಗಳನ್ನು ಗುರುತಿಸಿ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಅಗತ್ಯ ಉಪಕರಣಗಳನ್ನು ಒದಗಿಸಿಕೊಡುವಂತೆ ಕೋರಿದರು.
ಮೈಸೂರು ವಿವಿ ಕುಲಸಚಿವ ಪ್ರೊ.ಆರ್. ಶಿವಪ್ಪ, ಸೊಸೈಟಿಯ ಖಜಾಂಚಿ ಡಾ.ಕೆ.ಎನ್. ಮೋಹನ್‌ಕುಮಾರ್ ಇತರರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net