ಸಂಶೋಧನೆಗೆ ಒತ್ತು ನೀಡಲು ವೇದಿಕೆ

Puratatva
Published on

ಚಿತ್ರದುರ್ಗ: ಪ್ರಸ್ತುತ ದಿನಗಳಲ್ಲಿ ವಸ್ತು ಸಂಗ್ರಹಾಲಯಕ್ಕಷ್ಟೇ ಸೀಮಿತವಾಗದೆ, ಸಂಶೋಧನೆಗೂ ಒತ್ತು ನೀಡಿ ವೇದಿಕೆಗಳನ್ನು ಸೃಷ್ಟಿಸಲಾಗುತ್ತಿದೆ ಎಂದು ಶಿವಮೊಗ್ಗದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಸಹ ಪ್ರಾಧ್ಯಾಪಕ ಡಾ.ರಂಗನಾಥರಾವ್ ಎಚ್ ಕರಾಡ್ ತಿಳಿಸಿದರು.

ನಗರದ ರಂಗಯ್ಯನ ಬಾಗಿಲ ಬಳಿಯ ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ವಸ್ತು ಸಂಗ್ರಹಾಲಯ ದಿನಾಚರಣೆಯಲ್ಲಿ ಮಾತನಾಡಿದರು.

ಕೃತಕ ಬುದ್ಧಿಮತ್ತೆ ಹಲವು ಕ್ಷೇತ್ರಗಳಲ್ಲಿ ಬಳಸಲಾಗುತ್ತಿದ್ದು, ಇದಕ್ಕೆ ಪೂರಕವಾಗಿ ವಿಭಿನ್ನ ತಂತ್ರಜ್ಞಾನ ಅಳವಡಿಸಿಕೊಳ್ಳಲು ಯುವಸಮೂಹ ಕೌಶಲ ಹೆಚ್ಚಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಇಟಲಿಯ ರೋಮ್ ನಗರದಲ್ಲಿ 1479ರಲ್ಲಿ ಸ್ಥಾಪಿತವಾದ ಅತ್ಯಂತ ಪ್ರಾಚೀನ ವಸ್ತು ಸಂಗ್ರಹಾಲಯದ ಬೆಳವಣಿಗೆ ಕಂಡು ಪ್ರೇರಿತವಾದ ವಿಶ್ವದ ಅನೇಕ ರಾಷ್ಟ್ರಗಳು ತಮ್ಮ ಸಂಸ್ಕೃತಿ, ಪರಂಪರೆ ಹಾಗೂ ಇತಿಹಾಸದ ಅಭಿವೃದ್ಧಿಗೆ ಪೂರಕವಾಗಿ ವಸ್ತು ಸಂಗ್ರಹಾಲಯಗಳನ್ನು ಸ್ಥಾಪಿಸಿದವು ಎಂದರು.

ಭಾರತದಲ್ಲಿ ವಿಶೇಷವಾಗಿ 1814ರಲ್ಲಿ ಕಲ್ಕತ್ತಾದಲ್ಲಿ ಇಂಡಿಯನ್ ಮ್ಯೂಜಿಯಂ ಸ್ಥಾಪಿಸುವ ಮೂಲಕ ದೇಶದೊಳಗೆ ವಸ್ತು ಸಂಗ್ರಹಾಲಯದ ಬೆಳೆವಣಿಗೆಗೆ ಪ್ರೋತ್ಸಾಹಿಸಲಾಯಿತು. ವೇಗವಾಗಿ ಬದಲಾಗುತ್ತಿರುವ ಸಮಾಜದಲ್ಲಿ ವಸ್ತು ಸಂಗ್ರಹಾಲಯಗಳ ಅಗತ್ಯತೆ ಕುರಿತು ಜಾಗೃತಿ ಮೂಡಿಸಬೇಕಿದೆ ಎಂದು ಕಿವಿಮಾತು ಹೇಳಿದರು.

ನಿವೃತ್ತ ಪ್ರಾಚಾರ್ಯ ರಾಜಪ್ಪ ಮಾತನಾಡಿ, ವಸ್ತು ಸಂಗ್ರಹಾಲಯಗಳೂ ಜ್ಞಾನದ ಭಂಡಾರವಾಗಿವೆ. ಅವುಗಳನ್ನು ವೀಕ್ಷಣೆ ಮಾಡಿ ಇತಿಹಾಸ ತಿಳಿಯಲು ನಾಗರಿಕರು, ಯುವಸಮೂಹ ಆಸಕ್ತಿ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಮದಕರಿನಾಯಕ ಸಾಂಸ್ಕೃತಿಕ ಕೇಂದ್ರದ ಅಧ್ಯಕ್ಷ ಗೋಪಾಲಸ್ವಾಮಿ ನಾಯಕ ಮಾತನಾಡಿ, ನಗರದಲ್ಲಿರುವ ವಸ್ತು ಸಂಗ್ರಹಾಲಯ ಸ್ಥಾಪನೆಗೆ ಹುಲ್ಲೂರು ಶ್ರೀನಿವಾಸ ಜೋಯಿಸರ ಕೊಡುಗೆ ಅಪಾರ ಎಂದರು.

ಇಲಾಖೆಯ ಸಹಾಯಕ ನಿರ್ದೇಶಕ ಜಿ. ಪ್ರಹ್ಲಾದ್ ಮಾತನಾಡಿ, ಇಲಾಖೆಯಿಂದ ಜಿಲ್ಲೆಯ ಎಲ್ಲ ತಾಲೂಕುಗಳ ಪ್ರಾಚ್ಯಾವಶೇಷಗಳ ಕುರಿತು ಗ್ರಾಮವಾರು ಸರ್ವೇ ಕಾರ್ಯ ನಡೆಸಲಾಗಿದೆ. ಅವುಗಳ ಸಂರಕ್ಷಣೆಗೂ ಹೆಚ್ಚು ಪ್ರಾಮುಖ್ಯತೆ ನೀಡಲಾಗಿದೆ. ಅಲ್ಲದೆ, ಸ್ಮಾರಕಗಳ ರಕ್ಷಣೆಗೆ ಅಗತ್ಯ ಕ್ರಮವಹಿಸಲಾಗಿದೆ ಎಂದರು.

ಕ್ಯಾತಲಿಂಗೇಶ್ವರ ದೇಗುಲ ಸಮಿತಿ ಅಧ್ಯಕ್ಷ ಬೊಮ್ಮಣ್ಣ, ನಗರಸಭೆ ಮಾಜಿ ಸದಸ್ಯ ಮಹಂತೇಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net