

ಮೈಸೂರು: ಸಂಶೋಧನೆಗಳು ಜನರ ಉಪಯೋಗಕ್ಕೆ ನೆರವಾಗಬೇಕು ಎಂದು ಮೈಸೂರು ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ.ಜಿ.ಹೇಮಂತ್‌ಕುಮಾರ್ ಹೇಳಿದರು
ಜೆಎಸ್‌ಎಸ್ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯ ವತಿಯಿಂದ ಶ್ರೀಜಯಚಾಮರಾಜೇಂದ್ರ ಇಂಜಿನಿಯರಿಂಗ್ ಕಾಲೇಜಿನಲ್ಲಿ ಸೋಮವಾರ ಆಯೋಜಿಸಿದ್ದ ‘ಕಡಿಮೆ ವೆಚ್ಚದ ಸಾಧನಗಳನ್ನು ಬಳಸಿಕೊಂಡು ಬಯೋಮೆಟ್ರಿಕ್ಸ್‌ನಲ್ಲಿ ಸಂಶೋಧನಾ ಮಾರ್ಗಗಳು’ ಕಾರ್ಯಾಗಾರದಲ್ಲಿ ಮಾತನಾಡಿದರು.
ದುಬಾರಿ ವೆಚ್ಚದಲ್ಲಿ ಸಂಶೋಧನೆ ಮಾಡಿದರೆ ಅವು ಜನರ ಬಳಕೆಯಿಂದ ದೂರ ಆಗುತ್ತವೆ. ಅದರ ಬದಲಿಗೆ ಕಡಿಮೆ ವೆಚ್ಚದ ಸಾಧನಗಳು ದೊರೆಯಬೇಕಿದೆ ಎಂದರು.
ಸಮಾಜಕ್ಕೆ ಅನುಕೂಲವಾಗುವಂತಹ ಸಂಶೋಧನೆ ಕಡೆಗೆ ಹೆಚ್ಚು ಗಮನ ನೀಡಬೇಕು. ಸಂಶೋಧನೆಗಳು ಜನರಿಗೆ ತಲುಪಬೇಕು. ಆಗ ಅದರ ಬಳಕೆ ಹೆಚ್ಚಾಗಲಿದೆ ಎಂದರು.
ಹಿಂದೆ ತಂತ್ರಜ್ಞಾನ ಇರಲಿಲ್ಲ. ಒಂದು ಫೋಟೋ ತೆಗೆಸಿಕೊಳ್ಳಲು, ಫಿಂಗರ್ ಪ್ರಿಂಟ್ ಕೊಡಲು ಸ್ಟುಡಿಯೋ ಸೇರಿದಂತೆ ಮೊದಲಾದ ಕಡೆಗಳಲ್ಲಿ ಹೋಗಬೇಕಿತ್ತು. ಈಗ ಕುಳಿತಲ್ಲೇ ಮೊಬೈಲ್‌ನಲ್ಲಿ ಫಿಂಗರ್ ಪ್ರಿಂಟ್ ಕೊಡುವ ವ್ಯವಸ್ಥೆಯಿದೆ. ಬಯೋಮೆಟ್ರಿಕ್‌ಗೆ ಸಂಬಂಧಿಸಿದಂತೆ ಹಲವು ಸಂಶೋಧನೆಗಳು ನಡೆಯಬೇಕಿದೆ. ಫೇಸ್ ಸ್ಕಾೃನ್ ವಿಚಾರದಲ್ಲೂ ಸಾಕಷ್ಟು ಸಂಶೋಧನೆಗಳು ಆಗಿದ್ದರೂ ಕಡಿಮೆ ವೆಚ್ಚದ ಸಾಧನ ಬಳಸಿಕೊಂಡು ಸಮಾಜಮುಖಿಯಾಗುವಂತೆ ತಲುಪಿಸಬೇಕು ಎಂದು ಹೇಳಿದರು.
ಜೆಎಸ್‌ಎಸ್ ಎಸ್‌ಟಿಯು ಕುಲಪತಿ ಪ್ರೊ.ಎ.ಎನ್.ಸಂತೋಷ್ ಕುಮಾರ್, ಮಂಗಳೂರು ವಿಶ್ವವಿದ್ಯಾಲಯದ ಕಂಪ್ಯೂಟರ್ ಸೈನ್ಸ್ ವಿಭಾಗದ ನಿರ್ದೇಶಕ ಪ್ರೊ.ಬಿ.ಎಚ್.ಶೇಖರ್, ಪ್ರಾಂಶುಪಾಲ ಪ್ರೊ.ಎಸ್.ಬಿ.ಕಿವಡೆ, ಕುಲಸಚಿವ ಪ್ರೊ.ಎಸ್.ಎ.ಧನರಾಜ್, ಕಾರ್ಯಕ್ರಮದ ಸಂಚಾಲಕರಾದ ಪ್ರೊ.ಆರ್.ಕೆ.ಭಾರತಿ, ಸಿ.ಜೆ.ಹರ್ಷಿತಾ ಇದ್ದರು.