

ಮೈಸೂರು: ಶಿಕ್ಷಣ ವ್ಯವಸ್ಥೆಯಲ್ಲಿ ಗುಣಮಟ್ಟದ ಸಂಶೋಧನೆ ಮತ್ತು ಕೌಶಲಾಭಿವೃದ್ಧಿಯತ್ತ ಗಮನಹರಿಸುವ ತುರ್ತು ಅಗತ್ಯವಾಗಿದೆ ಎಂದು ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಮಂಡಳಿ ಉಪಾಧ್ಯಕ್ಷ ಪ್ರೊ.ಎಸ್.ಆರ್.ನಿರಂಜನ್ ಹೇಳಿದರು.
ವಿದ್ಯಾವರ್ಧಕ ಇಂಜಿನಿಯರಿಂಗ್ ಕಾಲೇಜಿನಲ್ಲಿ ಆಯೋಜಿಸಿದ್ದ ಮೂರು ದಿನಗಳ ಸಾಂಸ್ಕೃತಿಕ ಉತ್ಸವವಾದ ‘ವಿದ್ಯುತ್- 2025’ರ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಶಿಕ್ಷಣದ ಗುಣಮಟ್ಟ ಎಂದಿಗಿಂತಲೂ ಹೆಚ್ಚು ಮುಖ್ಯವಾಗಿದೆ. ಕಳೆದ ವರ್ಷವಷ್ಟೇ 18 ಲಕ್ಷ ವಿದ್ಯಾರ್ಥಿಗಳು ಉನ್ನತ ಶಿಕ್ಷಣಕ್ಕಾಗಿ ವಿದೇಶಕ್ಕೆ ತೆರಳಿದ್ದಾರೆ. ಒಂದು ಶತಮಾನಕ್ಕೂ ಹೆಚ್ಚು ಹಳೆಯದಾದ 20 ವಿಶ್ವವಿದ್ಯಾಲಯಗಳು ಸೇರಿದಂತೆ ಹಲವಾರು ವಿಶ್ವವಿದ್ಯಾಲಯಗಳಿದ್ದರೂ, ಅಂತಾರಾಷ್ಟ್ರೀಯ ಶ್ರೇಯಾಂಕದಲ್ಲಿ ಅಗ್ರ 200 ವಿಶ್ವವಿದ್ಯಾಲಯಗಳ ಪಟ್ಟಿಯಲ್ಲಿ ಯಾವುದೂ ಪ್ರವೇಶಿಸಲು ಸಾಧ್ಯವಾಗಿಲ್ಲ ಎಂದು ಕಳವಳ ವ್ಯಕ್ತಪಡಿಸಿದರು.
ಇದು ಶಿಕ್ಷಣ ವ್ಯವಸ್ಥೆ ಕುರಿತು ಪ್ರಶ್ನೆ ಮೂಡುವಂತೆ ಮಾಡಿದೆ. ಗುಣಮಟ್ಟದ ಸಂಶೋಧನೆ ಮತ್ತು ಕೌಶಲ ಅಭಿವೃದ್ಧಿಯತ್ತ ಗಮನಹರಿಸಬೇಕಿದೆ. ಸಂವಹನ, ಶಿಕ್ಷಣ ಮತ್ತು ತಂತ್ರಜ್ಞಾನವು ರಾಷ್ಟ್ರೀಯ ಪ್ರಗತಿಗೆ ಪ್ರಮುಖ ಆಧಾರಸ್ತಂಭಗಳಾಗಿವೆ. ವಿದ್ಯಾರ್ಥಿಗಳು ದೇಶದ ತಾಂತ್ರಿಕ ಅಗತ್ಯಗಳ ಬಗ್ಗೆಯೂ ತಿಳಿದಿರಬೇಕು. ಏಕೆಂದರೆ ತಂತ್ರಜ್ಞಾನ ಮಾತ್ರ ಸುಸ್ಥಿರ ಅಭಿವೃದ್ಧಿಯನ್ನು ಖಚಿತಪಡಿಸುತ್ತದೆ ಎಂದರು.
ಪ್ರಾಂಶುಪಾಲ ಡಾ.ಬಿ.ಸದಾಶಿವೇಗೌಡ ಮಾತನಾಡಿ, ಸಂಸ್ಕೃತಿ ಯಾವುದೇ ಸಮಾಜದ ಆತ್ಮ. ಇದು ಪೀಳಿಗೆಗಳನ್ನು ಸಂಪರ್ಕಿಸುತ್ತದೆ ಮತ್ತು ನಮ್ಮ ಬೇರುಗಳನ್ನು ನೆನಪಿಸುತ್ತದೆ. ಈ ಸಾಂಸ್ಕೃತಿಕ ಉತ್ಸವವು ವೈವಿಧ್ಯತೆ, ನಾವೀನ್ಯತೆ ಮತ್ತು ಕಲಿಕೆಯ ಆಚರಣೆಯಾಗಿದೆ. ಇದು ಸಂಗೀತ, ನೃತ್ಯ, ಕಲೆ, ನಾಟಕ ಮತ್ತು ಸೃಜನಶೀಲತೆಯ ಅಸಂಖ್ಯಾತ ಅಭಿವ್ಯಕ್ತಿಗಳನ್ನು ಒಟ್ಟುಗೂಡಿಸುತ್ತದೆ ಎಂದರು
ಕಾಲೇಜು ಕೇವಲ ಶೈಕ್ಷಣಿಕ ಅನ್ವೇಷಣೆಗಳಿಗೆ ಸ್ಥಳವಲ್ಲ. ಅದು ಸ್ವಯಂ ಅನ್ವೇಷಣೆ ಮತ್ತು ಬೆಳವಣಿಗೆಗೆ ವೇದಿಕೆಯಾಗಿದೆ. ಇಂತಹ ಕಾರ್ಯಕ್ರಮಗಳು ವಿದ್ಯಾರ್ಥಿಗಳಿಗೆ ಭಾವನಾತ್ಮಕ ಸಮತೋಲನ, ನಾಯಕತ್ವ, ತಂಡದ ಕೆಲಸ, ಸಮಯ ನಿರ್ವಹಣೆ, ಸಂವಹನ ಕೌಶಲ, ಆತ್ಮವಿಶ್ವಾಸ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಸಮುದಾಯದ ಪ್ರಜ್ಞೆಯನ್ನು ಕಲಿಸುತ್ತದೆ ಎಂದರು.
ವಿದ್ಯಾವರ್ಧಕ ಸಂಘದ ಅಧ್ಯಕ್ಷ ಗುಂಡಪ್ಪಗೌಡ, ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಪಿ.ವಿಶ್ವನಾಥ್, ಸಾಂಸ್ಕೃತಿಕ ಸಮಿತಿ ಕಾರ್ಯದರ್ಶಿ ಬಿ.ಎಸ್.ಗೌರಿಶಂಕರ್ ಉಪಸ್ಥಿತರಿದ್ದರು.
ಎನ್‌ಎಸ್‌ಎಸ್ ಮತ್ತು ರೆಡ್‌ಕ್ರಾಸ್ ಸಹಯೋಗದೊಂದಿಗೆ ರಕ್ತದಾನ ಶಿಬಿರವನ್ನು ಆಯೋಜಿಸಲಾಯಿತ್ತು. ಶ್ವಾನ ಪ್ರದರ್ಶನ, ಆಟೋ ಎಕ್ಸ್‌ಪೋ, ರಂಗೋಲಿ ಸ್ಪರ್ಧೆ, ಗಾಯನ ಸ್ಪರ್ಧೆ, ಮೆಹಂದಿ ಸ್ಪರ್ಧೆ, ಫ್ಯಾಷನ್ ಶೋ, ಛಾಯಾಗ್ರಹಣ ಸ್ಪರ್ಧೆ, ರಸಪ್ರಶ್ನೆಗಳು ಸೇರಿದಂತೆ ಇನ್ನಿತರರ ಸ್ಪರ್ಧೆಗಳನ್ನೂ ಹಮ್ಮಿಕೊಳ್ಳಲಾಗಿತ್ತು. ಸ್ಯಾಂಡಲ್‌ವುಡ್ ಗಾಯಕಿ ಸಂಗೀತಾ ರವೀಂದ್ರನಾಥ್ ಸಂಗೀತ ಕಾರ್ಯಕ್ರಮ ಮೂಲಕ ನೆರೆದ ಜನಸಮೂಹವನ್ನು ರಂಜಿಸಿದರು.