ಸಂಶೋಧನಾ ಚಟುವಟಿಕೆಗಳಿಗೆ ಒತ್ತು ನೀಡುವುದು ಮುಖ್ಯ: ವಿಜ್ಞಾನಿ ಡಾ.ದಿನೇಶ್ ನಾಗೇಗೌಡ

mysore
Published on

ಮೈಸೂರು: ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದ ಪ್ರಗತಿಯಿಂದಲೇ ದೇಶಾಭಿವೃದ್ಧಿ ಸಾಧ್ಯ. ಆದ್ದರಿಂದ ಉಭಯ ಕ್ಷೇತ್ರದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಅನುದಾನ ವಿನಿಯೋಗಿಸುವ ಮೂಲಕ ಸಂಶೋಧನಾ ಚಟುವಟಿಕೆಗಳಿಗೆ ಒತ್ತು ನೀಡುವುದು ಈಗಿನ ಅಗತ್ಯವಾಗಿದೆ ಎಂದು ಬೆಂಗಳೂರಿನ ಕೇಂದ್ರೀಯ ಔಷಧೀಯ ಮತ್ತು ಸುಗಂಧ ಸಸ್ಯಗಳ ಸಂಸ್ಥೆ(ಸಿಐಎಂಪಿ) ಸಂಶೋಧನಾ ಕೇಂದ್ರದ ಮುಖ್ಯ ವಿಜ್ಞಾನಿ ಡಾ.ದಿನೇಶ್ ಎ.ನಾಗೇಗೌಡ ಹೇಳಿದರು.

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ವತಿಯಿಂದ ಮುಕ್ತಗಂಗೋತ್ರಿಯ ಕಾವೇರಿ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ರಾಷ್ಟ್ರೀಯ ವಿಜ್ಞಾನ ದಿನಾಚರಣೆಯಲ್ಲಿ ಮಾತನಾಡಿದರು.

ಪಾಶ್ಚಿಮಾತ್ಯ ದೇಶಗಳು ವಿಜ್ಞಾನ ಕ್ಷೇತ್ರದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬಂಡವಾಳ ಹೂಡಿಕೆ ಮಾಡಿವೆ. ಇದರಿಂದಲೇ ಅವುಗಳು ಪ್ರಗತಿ ಕಂಡಿವೆ. ಆದರೆ, ದೇಶದ ವಿಜ್ಞಾನ ಕ್ಷೇತ್ರದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಅನುದಾನ ಹೂಡಿಕೆ ಮಾಡಲು ಆಗಲಿಲ್ಲ. ಇದರ ಫಲವಾಗಿ ಭಾರತವು ಈ ಕ್ಷೇತ್ರದಲ್ಲಿ ಹಿಂದುಳಿದಿದೆ ಎಂದು ಕಳವಳ ವ್ಯಕ್ತಪಡಿದರು.

ನೊಬೆಲ್ ಪ್ರಶಸ್ತಿ ದೊರಬೇಕು: ದೇಶಕ್ಕೆ ಸ್ವಾತಂತ್ರೃ ಬಂದ ಬಳಿಕ ಭಾರತೀಯ ವಿಜ್ಞಾನಿಗಳಿಗೆ ಈವರೆಗೆ ನೊಬೆಲ್ ಪ್ರಶಸ್ತಿ ದೊರೆತಿಲ್ಲ. 1930ರಲ್ಲಿ ಭೌತವಿಜ್ಞಾನಿ ಸಿ.ವಿ.ರಾಮನ್ ಈ ಪ್ರಶಸ್ತಿಗೆ ಭಾಜನರಾಗಿದ್ದರು. ಆದರೆ, ಅದು ಬ್ರಿಟಿಷರ ಆಡಳಿತಾವಧಿಯಲ್ಲಿ. ಭಾರತೀಯರು ಈ ಪ್ರಶಸ್ತಿ ಪಡೆದುಕೊಳ್ಳುವ ನಿಟ್ಟಿನಲ್ಲಿ ಪ್ರಯತ್ನಿಸಬೇಕು ಎಂದು ಡಾ.ದಿನೇಶ್ ಎ.ನಾಗೇಗೌಡ ಸಲಹೆ ನೀಡಿದರು.

ಭಾರತೀಯ ವೈಜ್ಞಾನಿಕ ಅನ್ವೇಷಣೆಗಳು ಜಾಗತಿಕ ಮಟ್ಟದ ಮಾನದಂಡಗಳಿಗೆ ಪೂರಕವಾಗಿ ಇರಬೇಕು. ಸಂಶೋಧನಾ ಪ್ರಮಾಣೀಕೃತ ಗುಣಗಳನ್ನು ಅಳವಡಿಕೆ ಮಾಡಿಕೊಳ್ಳಬೇಕಿದೆ ಎಂದವರು ಹೇಳಿದರು.

ಯುವಜನರು ವಿಜ್ಞಾನ ಕಲಿಕೆಗೆ ಆಸಕ್ತಿ ತೋರುತ್ತಿಲ್ಲ. ಇದು ವಿಜ್ಞಾನ ಕ್ಷೇತ್ರದ ಹಿನ್ನಡೆಗೆ ಮತ್ತೊಂದು ಕಾರಣವಾಗಲಿದೆ. ಈ ಕ್ಷೇತ್ರದ ಮಹತ್ವ ಅರಿತುಕೊಂಡು, ಇದನ್ನು ವೃತ್ತಿ-ಪ್ರವೃತ್ತಿಯಾಗಿ ಸ್ವೀಕರಿಸಬೇಕು. ಇದರೊಂದಿಗೆ ಭಾರತೀಯ ವಿಜ್ಞಾನದ ಲೋಕದ ಪ್ರಗತಿಗೆ ಮಹತ್ವದ ಕೊಡುಗೆ ನೀಡಬೇಕು ಎಂದರು.

ಭಾರತೀಯರು ಅಗತ್ಯ ಬಿದ್ದರೆ ವಿದೇಶದಲ್ಲಿ ಉನ್ನತ ಶಿಕ್ಷಣ ಪಡೆದುಕೊಂಡು ಹೆಚ್ಚಿನ ಜ್ಞಾನದೊಂದಿಗೆ ಭಾರತಕ್ಕೆ ಮರಳಿ ದೇಶ ಸೇವೆ ಮಾಡಬೇಕು ಎಂದು ಕಿವಿಮಾತು ಹೇಳಿದರು.

ಕುಲಪತಿ ಪ್ರೊ.ಶರಣಪ್ಪ ವಿ.ಹಲಸೆ, ಕುಲಸಚಿವ ಪ್ರೊ.ಕೆ.ಬಿ.ಪ್ರವೀಣ್, ಹಣಕಾಸು ಅಧಿಕಾರಿ ಪ್ರೊ.ಎಸ್. ನಿರಂಜನರಾಜ, ಕರಾಮುವಿ ವಿಜ್ಞಾನ ವಿಭಾಗ ನಿರ್ದೇಶಕಿ ಸುನೀತಾ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net