ಸಂವಿಧಾನದಿಂದ ಸಾಮಾಜಿಕ ನ್ಯಾಯ, ಗೌರವಯುತ ಜೀವನ

oplus_2
oplus_2
Published on

ಚಿತ್ರದುರ್ಗ: ಸಂವಿಧಾನದಿಂದಾಗಿ ಸಾಮಾಜಿಕ ನ್ಯಾಯ ಹಾಗೂ ಗೌರವಯುತ ಜೀವನ ನಡೆಸಲು ದೇಶದ ಜನರಿಗೆ ಸಾಧ್ಯವಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ರೋಣ್ ವಾಸುದೇವ ಹೇಳಿದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ವಕೀಲರ ಸಂಘ, ಜಿಪಂ, ಸಮಾಜ ಕಲ್ಯಾಣ ಹಾಗೂ ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ವಿಶ್ವ ಸಾಮಾಜಿಕ ನ್ಯಾಯ ದಿನಾಚರಣೆ ಅಂಗವಾಗಿ ಪಿಲ್ಲಾ ಒಂಚಾಯಿತಿಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.

ಭಾರತ ಸಂವಿಧಾನ ಪೀಠಿಕೆಯಲ್ಲೇ ಸಾಮಾಜಿಕ ನ್ಯಾಯದ ಕುರಿತು 2 ಬಾರಿ ಪ್ರಸ್ತಾಪಿಸಲಾಗಿದೆ. ಸರ್ವೋಚ್ಛ ನ್ಯಾಯಾಲಯ ಪೀಠಿಕೆಯನ್ನು ಸಂವಿಧಾನದ ಕನ್ನಡಿ ಎಂದು ಅಭಿಪ್ರಾಯಪಟ್ಟಿದೆ. ಸಾಮಾಜಿಕ ನ್ಯಾಯ ಎಲ್ಲರಿಗೂ ಸಿಗಬೇಕು ಎಂಬ ಉದ್ದೇಶದಿಂದ ವಿಶ್ವಸಂಸ್ಥೆ ಪ್ರತಿ ವರ್ಷ ಫೆ. 20 ರಂದು ವಿಶ್ವ ಸಾಮಾಜಿಕ ನ್ಯಾಯ ದಿನವನ್ನು ವಿಶ್ವದಾದ್ಯಂತ ಆಚರಿಸುತ್ತಿದೆ ಎಂದರು.

ಹೆಚ್ಚಿನ ಸಂಖ್ಯೆಯಲ್ಲಿ ಉದ್ಯೋಗ ಸೃಜನೆ, ಸಮಾಜದಲ್ಲಿ ಕೆಳಸ್ತರದ ವ್ಯಕ್ತಿಗಳೂ ಗೌರವಯುತವಾಗಿ ಬದುಕು ನಡೆಸುವ ವಾತಾವರಣ ಸೃಷ್ಟಿಸುವುದು ಕೂಡ ಸಾಮಾಜಿಕ ನ್ಯಾಯದ ಪರಿಕಲ್ಪನೆಯಡಿ ಸೇರಿದೆ. ಸಾಮಾಜಿಕ ನ್ಯಾಯದೊಂದಿಗೆ ಆರ್ಥಿಕ ನ್ಯಾಯವೂ ಅಗತ್ಯವಾಗಿ ಬೇಕಾಗಿದೆ. ಸಾಮಾಜಿಕ ನ್ಯಾಯ ಎತ್ತಿ ಹಿಡಿಯುವ ಉದ್ದೇಶದಿಂದ ಸರ್ಕಾರಗಳು ಭೂ ಸುಧಾರಣೆ ಕಾಯ್ದೆ ಸೇರಿ ಅನೇಕ ಕಾನೂನುಗಳನ್ನು ಜಾರಿಗೊಳಿಸಿವೆ ಎಂದು ತಿಳಿಸಿದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಂ. ವಿಜಯ್ ಮಾತನಾಡಿ, 19ನೇ ಶತಮಾನದ ಕೈಗಾರಿಕಾ ಕ್ರಾಂತಿ ಸಂದರ್ಭದಲ್ಲಿ ಸಾಮಾಜಿಕ ನ್ಯಾಯದ ಪರಿಕಲ್ಪನೆ ಉಗಮವಾಯಿತು. ಮಹಿಳೆಯರಿಗೂ ಪುರುಷರಿಗೆ ಸರಿಸಮಾನವಾಗಿ ನ್ಯಾಯಸಮ್ಮತ ಅವಕಾಶ ದೊರೆಯಬೇಕು. ಈ ನಿಟ್ಟಿನಲ್ಲಿ ಸರ್ವರಿಗೂ ಸಮಪಾಲು, ಸಮಬಾಳು ಎಂಬ ಪರಿಕಲ್ಪನೆಯಲ್ಲಿ ಸಂವಿಧಾನ ರಚನೆಯಾಗಿದೆ. ಹಾಗೇ ಆರ್ಥಿಕವಾಗಿ ಹಿಂದು ಳಿದವರು ಮತ್ತು ಮುಂದುವರೆದವರೆಂಬ ಭೇದಭಾವಕ್ಕೆ ಅವಕಾಶವಿಲ್ಲದಂತೆ ನೋಡಿಕೊಳ್ಳುವ ಉದ್ದೇಶದಿಂದ ಸಾಮಾಜಿಕ ನ್ಯಾಯ ಅಸ್ತಿತ್ವದಲ್ಲಿದೆ ಎಂದರು.

ಜಿಪಂ ಸಿಇಒ ಎಸ್.ಜೆ. ಸೋಮಶೇಖರ್, ವಕೀಲರ ಸಂಘದ ಅಧ್ಯಕ್ಷ ವೈ. ತಿಪ್ಪೇಸ್ವಾಮಿ, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಜಗದೀಶ್ ಹೆಬ್ಬಳ್ಳಿ, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ದಿವಾಕರ್ ಮತ್ತಿತರರು ಇದ್ದರು.

...ಕೋಟ್...

ಬಡವ, ಶ್ರೀಮಂತ ಎಂಬ ತಾರತಮ್ಯ ತೋರದೇ ಸಮಾಜದ ಎಲ್ಲರಿಗೂ ಸಮಾನ ಅವಕಾಶಗಳನ್ನು ಕಲ್ಪಿಸುವುದೇ ಸಾಮಾಜಿಕ ನ್ಯಾಯ.

ಎಸ್.ಜೆ. ಸೋಮಶೇಖರ್, ಸಿಇಒ, ಜಿಪಂ

---

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net