ಸಂವಿಧಾನದಿಂದ ಸಮಾನ ಅವಕಾಶ: ಸಚಿವ ಡಾ.ಎಚ್.ಸಿ.ಮಹದೇವಪ್ಪ

mysore
Published on

ಮೈಸೂರು: ಸಂವಿಧಾನಕ್ಕೆ ಬದ್ಧವಾಗಿ ಬದುಕುವ ಮನೋಭೂಮಿಕೆ ಇಂದಿನ ತುರ್ತು ಅನಿವಾರ್ಯತೆ. ಆಗ ಮಾತ್ರವೇ ಸಂವಿಧಾನದ ಶ್ರೇಷ್ಠ ಮೌಲ್ಯಗಳಾದ ಸಮಾನತೆ, ಸ್ವಾತಂತ್ರ್ಯ ಮತ್ತು ಭ್ರಾತೃತ್ವಗಳಿಗೆ ನಿಜವಾದ ಅರ್ಥ ಬರುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ತಿಳಿಸಿದರು.

ಜಿಲ್ಲಾಡಳಿತದ ವತಿಯಿಂದ ಬನ್ನಿಮಂಟಪದ ಪಂಜಿನ ಕವಾಯತು ಮೈದಾನದಲ್ಲಿ ಭಾನುವಾರ ಆಯೋಜಿಸಿದ್ದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.

ಜನರಿಂದ, ಜನರಿಗಾಗಿ, ಜನರೇ ನಡೆಸುವ ಆಡಳಿತ ಹೊಂದಿರುವ ವಿನೂತನ ಗಣತಂತ್ರ ವ್ಯವಸ್ಥೆಯಲ್ಲಿ ಎಲ್ಲ ಜಾತಿ, ಧರ್ಮ, ಭಾಷೆಗಳಿಗೂ ಸಮಾನ ಗೌರವ, ಸಮಾನ ಮಾನ್ಯತೆ ಇದೆ. ಹಲವಾರು ಭಾಷೆ, ಧರ್ಮ ಹೊಂದಿದ್ದರೂ ವಿವಿಧತೆಯಲ್ಲಿ ಏಕತೆ ನಮ್ಮ ಸಂವಿಧಾನದ ವಿಶೇಷ.

ಇಂತಹ ಅತ್ಯುತ್ತಮ ವ್ಯವಸ್ಥೆಯಲ್ಲಿ ನಾವು ಹಲವು ಸುಧಾರಣೆ ತಂದಿದ್ದು, ಭಾರತದ ಜನ ಜೀವನ ಒಂದು ಉತ್ತಮ ಮಟ್ಟದಲ್ಲಿ ನಡೆಯುವಂತಾಗಲು ಬೇಕಾಗುವ ನಾಗರಿಕ ಸೌಲಭ್ಯ ಒದಗಿಸಲು ನಿರಂತರ ಪ್ರಯತ್ನ ಮಾಡಲಾಗಿದೆ ಎಂದರು.

1950ಕ್ಕಿಂತ ಹಿಂದೆ ನಮ್ಮ ದೇಶದ ಆಡಳಿತವೆಲ್ಲವೂ ಬ್ರಿಟಿಷರು ರೂಪಿಸಿದ 1935ರ ಭಾರತ ಸರ್ಕಾರದ ಕಾಯ್ದೆ ಪ್ರಕಾರ ನಡೆಯುತ್ತಿತ್ತು. ಸ್ವಾತಂತ್ರ್ಯ ನಂತರ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ನೇತೃತ್ವದ ಸಂವಿಧಾನ ರಚನಾ ಮಂಡಳಿಯ ದೀರ್ಘ ಅಧ್ಯಯನ ಚಿಂತನ-ಮಂಥನಗಳ ಫಲವಾಗಿ ನಮ್ಮ ಸಂವಿಧಾನ ರೂಪುಗೊಂಡಿತು ಎಂದು ಹೇಳಿದರು.

ಸಾಮಾಜಿಕ, ಆರ್ಥಿಕ, ಶೈಕ್ಷಣಿಕ, ನ್ಯಾಯ ಕ್ಷೇತ್ರಗಳಲ್ಲಿ ಎಲ್ಲ ಜನರಿಗೂ ಸಮಾನ ಅವಕಾಶ, ಹಕ್ಕುಗಳು ಇರುವ ಲೋಕ ಸಮ್ಮತವಾದ ಸಂವಿಧಾನವಾಗಿದೆ. ಭಾರತದ ಜನ ಈ ದೇಶದ ಪ್ರಜೆಗಳಾಗಿ ತಮ್ಮನ್ನು ತಾವು ಕಂಡುಕೊಂಡ ದಿನ. ಅಧಿಕಾರಸ್ಥರನ್ನು ಪ್ರಶ್ನಿಸುವ ಸ್ವಾತಂತ್ರ್ಯ ಸಾಮಾನ್ಯ ಪ್ರಜೆಗಳಿಗೆ ವಿಧಿವತ್ತಾಗಿ ಲಭ್ಯವಾದ ದಿನ.

ಇಲ್ಲಿ ಯಾರ ಅಧಿಕಾರವೂ ಅಂತಿಮವಲ್ಲ, ಯಾರೊಬ್ಬರೂ ಸಂವಿಧಾನ ಹಾಕಿಕೊಟ್ಟ ಗೆರೆ ಮೀರುವ ಆಗಿಲ್ಲ ಎಂಬ ವ್ಯವಸ್ಥೆ ಅಂದಿನಿಂದ ಜಾರಿಗೆ ಬಂತು. ಇದೊಂದು ಚಾರಿತ್ರಿಕ ತಿರುವು. ಪ್ರಪಂಚದ ಎಷ್ಟೋ ಸ್ವಾತಂತ್ರ್ಯ ದೇಶಗಳಿಗೆ ಮೇಲ್ಪಂಕ್ತಿ ಹಾಕಿದ ವಿದ್ಯಮಾನವಿದು ಎಂದು ಅಭಿಪ್ರಾಯಿಸಿದರು.

ಸಂವಿಧಾನದ ಆಶಯ ಗಟ್ಟಿಗೊಳಿಸುವ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರವು ಸರ್ಕಾರಿ ಸಭೆ, ಸಮಾರಂಭ, ಶಾಲಾ-ಕಾಲೇಜುಗಳಲ್ಲಿ ಸಂವಿಧಾನ ಪೀಠಿಕೆ ವಾಚನ ಕಡ್ಡಾಯಗೊಳಿಸಿದೆ. ಅನ್ನಭಾಗ್ಯ, ಗೃಹಲಕ್ಷ್ಮಿ, ಗೃಹಜ್ಯೋತಿ, ಶಕ್ತಿ, ವಿದ್ಯಾನಿಧಿ ಯೋಜನೆಗಳ ಮೂಲಕ ರಾಜ್ಯದ ಕೋಟ್ಯಂತರ ಜನರಿಗೆ ಪ್ರಯೋಜನ ಒದಗಿಸಿದೆ. ಇದರಿಂದ ಸರ್ಕಾರ ಬಡವರು ದಲಿತರು ಹಿಂದುಳಿದವರು, ಮಹಿಳೆಯರ ಪರವಾಗಿ ನಿಂತಿದೆ ಎಂಬುದು ಸಾಬೀತಾಗಿದೆ ಎಂದರು.

ಅನ್ನಭಾಗ್ಯ ಯೋಜನೆಯಿಂದ ಜಿಲ್ಲೆಯ 6,61,014 ಕುಟುಂಬಗಳಿಗೆ ಅನುಕೂಲವಾಗಿದೆ. ಶಕ್ತಿ ಯೋಜನೆಯಡಿ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತವಾಗಿ ಪ್ರಯಣಿಸುವ ಸೌಲಭ್ಯ ಅನುಷ್ಠಾನಗೊಳಿಸಿದ್ದು, ಜಿಲ್ಲೆಯಲ್ಲಿ ಈ ವರೆಗೆ ಪ್ರತಿ ದಿನ ಸರಾಸರಿ 4.20 ಲಕ್ಷ ಮತ್ತು 2024-25ನೇ ಸಾಲಿನಲ್ಲಿ 1,193.94 ಲಕ್ಷ ಮಹಿಳೆಯರು ಪ್ರಯಾಣಿಸಿದ್ದಾರೆ ಎಂದು ಮಾಹಿತಿ ನೀಡಿದರು.

ಗೃಹಜ್ಯೋತಿ ಯೋಜನೆಯಲ್ಲಿ ಜಿಲ್ಲೆಯಲ್ಲಿ 10,15,162 ಸಂಖ್ಯೆ ಗೃಹಬಳಕೆ ಗ್ರಾಹಕರಿದ್ದು, 9,44,402 ಸಂಖ್ಯೆ ಗ್ರಾಹಕರು ಈ ಯೋಜನೆಗೆ ನೋಂದಾಯಿಸಿಕೊಂಡಿದ್ದು, ಇವರಲ್ಲಿ 8,94,331 ಸಂಖ್ಯೆ ಗ್ರಾಹಕರು ಇದರ ಫಲಾನುಭವಿಗಳು. ಈ ಯೋಜನೆಯಡಿ ಜಿಲ್ಲೆಯಲ್ಲಿ ಶೇ.94.69 ರಷ್ಟು ಪ್ರಗತಿ ಸಾಧಿಸಲಾಗಿದೆ ಎಂದರು.

ಗೃಹಲಕ್ಷ್ಮಿಯೋಜನೆಯಡಿ 6,89,667 ಫಲಾನುಭವಿಗಳು ನೋಂದಾಯಿಸಿಕೊಂಡಿದ್ದು, ಈ ಹಣದಿಂದ ಮಹಿಳೆಯರು ಸ್ವಾವಲಂಬಿ ಬದುಕನ್ನು ಕಟ್ಟಿಕೊಂಡಿರುವ ಬಗ್ಗೆ ಸಾಕಷ್ಟು ವರದಿಗಳಾಗಿದ್ದು, ಇದು ಕುಟುಂಬದ ಯಶಸ್ವಿ ನಿರ್ವಹಣೆಗೆ ಹಿಡಿದ ಕೈಗನ್ನಡಿಯಾಗಿದೆ. ‘ಯುವನಿಧಿ’ ನಿರುದ್ಯೋಗಿ ಯುವ ಜನರಿಗೆ ನಿರುದ್ಯೋಗಿ ಭತ್ತೆ ನೀಡಿ ಸಬಲೀಕರಗೊಳಿಸಲು ಜಾರಿಗೊಳಿಸಿದ ಯೋಜನೆ. ಜಿಲ್ಲೆಯಲ್ಲಿ 3,823 ಪುರುಷರು, 4,301 ಮಹಿಳೆಯರು ಸೇರಿ 8,124 ಆಭ್ಯರ್ಥಿಗಳು ನೋಂದಣಿ ಮಾಡಿಕೊಂಡಿದ್ದಾರೆ ಎಂದರು.

ನಗರದಲ್ಲಿ ನಿರ್ಮಾಣವಾಗುತ್ತಿರುವ ಡಾ.ಬಿ.ಆರ್.ಅಂಬೇಡ್ಕರ್ ಭವನದ 2ನೇ ಹಂತದ ಬಾಕಿ ಇರುವ ಕಾಮಗಾರಿಯನ್ನು 27 ಕೋಟಿ ರೂ. ವೆಚ್ಚದಲ್ಲಿ ಮುಡಾದಿಂದ ಪೂರ್ಣಗೊಳಿಸಲಾಗುವುದು.

ಜಿಲ್ಲೆಯಲ್ಲಿ ಅಂಬೇಡ್ಕರ್, ಬಾಬುಜಗಜೀವನರಾಮ್ ಭವನಗಳ ನಿರ್ಮಾಣ, ಪ್ರಗತಿ ಕಾಲನಿ, ಸ್ಮಶಾನಗಳ ಅಭಿವೃದ್ಧಿ, ವಿವಿಧ ಕಾಮಗಾರಿಗಾಗಿ 121.16 ಕೋಟಿ ರೂ. ವೆಚ್ಚ ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಸುಸ್ಥಿರ ಕೃಷಿ, ರೈತರ ಜೀವನಮಟ್ಟ ಸುಧಾರಿಸುವ ಸಲುವಾಗಿ ಕೃಷಿಭಾಗ್ಯ ಯೋಜನೆಯನ್ನು ಪ್ರಸ್ತುತ ಸಾಲಿನಲ್ಲಿ ಮರು ಜಾರಿಗೊಳಿಸಲಾಗಿದ್ದು, 1.6 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ ಎಂದರು.

2024-25ನೇ ಸಾಲಿನಲ್ಲಿ ಮ-ನರೇಗಾ ಯೋಜನೆಯಡಿ ಜಿಲ್ಲೆಯಲ್ಲಿ 39,674 ಕಾಮಗಾರಿ ಅನುಮೋದನೆಗೊಂಡಿದ್ದು, 17,650 ಕಾಮಾಗಾರಿ ಪೂರ್ಣಗೊಳಿಸಿ 24.42 ಲಕ್ಷ ಮಾನವ ದಿನ ಸೃಜಿಸಲಾಗಿದೆ. 70.650 ಕೋಟಿ ರೂ. ಹಣವನ್ನು ಕೂಲಿಕಾರರ ಖಾತೆಗೆ ಜಮಾ ಮಾಡಲಾಗಿದೆ ಎಂದು ತಿಳಿಸಿದರು.

ಬಸವ ವಸತಿ ಯೋಜನೆಯಡಿ 4,526, ಡಾ ಅಂಬೇಡ್ಕರ್ ವಸತಿ ಯೋಜನೆಯಡಿ 3,243 ಮನೆ ಮಂಜೂರು ಮಾಡಿದ್ದು, 5,810 ಫಲಾನುಭವಿಗಳಿಗೆ ಕಾಮಗಾರಿ ಆದೇಶ ನೀಡಲಾಗಿದೆ ಎಂದು ಹೇಳಿದರು.

ಜಿಲ್ಲೆಯು ತೋಟಗಾರಿಕೆಯಲ್ಲಿ ಮುಂಚೂಣಿಯಲ್ಲಿದ್ದು, ಇಲಾಖಾ ವತಿಯಿಂದ ವಿವಿಧ ಯೋಜನೆ ರೈತರ ಅನುಕೂಲಕ್ಕಾಗಿ ಅನುಷ್ಠಾನಗೊಳಿಸಲಾಗುತ್ತಿದೆ. ಈವರೆಗೂ 1,231 ಲಕ್ಷ ರೂ. ಅನುದಾನ ವೆಚ್ಚ ಮಾಡಿದ್ದು, ಯೋಜನೆಯ ಮಾರ್ಗಸೂಚಿಗಳ ಅನುಸಾರ 2,274 ಸಂಖ್ಯೆ ಫಲಾನುಭವಿಗಳಿಗೆ ಸವಲತ್ತು ವಿತರಿಸಲಾಗಿದೆ ಎಂದು ನುಡಿದರು.

ಹೊಸದಾಗಿ 23 ಡಯಾಲಿಸಿಸ್ ಯಂತ್ರಗಳು ಕಾರ್ಯ ನಿರ್ವಹಿಸುತ್ತಿದ್ದು, ಡಯಾಲಿಸಿಸ್ ರೋಗಿಗಳ ಕಾಯ್ದಿರಿಸುವ ಪಟ್ಟಿಯಲ್ಲಿ 2023-24ರಲ್ಲಿ 95 ಇದ್ದು, ಈಗ 2024-25ನೇ ಸಾಲಿಗೆ ಶೂನ್ಯಕ್ಕೆ ತಲುಪಿದೆ ಎಂದರು.

ವಿಧಾನ ಪರಿಷತ್‌ನ ಸದಸ್ಯರಾದ ಡಿ.ತಿಮ್ಮಯ್ಯ, ಸಿ.ಎನ್.ಮಂಜೇಗೌಡ, ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ ರೆಡ್ಡಿ, ಐಜಿಪಿ ಬೋರಲಿಂಗಯ್ಯ, ಜಿಲ್ಲಾ ಪಂಚಾಯಿತಿ ಸಿಇಒ ಕೆ.ಎಂ.ಗಾಯತ್ರಿ, ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್, ಅಪರ ಜಿಲ್ಲಾಧಿಕಾರಿ ಡಾ.ಪಿ.ಶಿವರಾಜು ಸೇರಿದಂತೆ ಜನಪ್ರತಿನಿಧಿಗಳು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net