ಸಂವಿಧಾನದಿಂದ ಮಾನವ ಹಕ್ಕುಗಳ ರಕ್ಷಣೆ

11blrp2
Published on

ಬೇಲೂರು: ವಿಶ್ವ ಮಾನವ ಹಕ್ಕು ಆಯೋಗ ರಚನೆಗೂ ಮುನ್ನವೇ ಡಾ.ಬಿ.ಆರ್.ಅಂಬೇಡ್ಕರ್ ಅವರು ಮಾನವ ಹಕ್ಕು ಮತ್ತು ಮೂಲಭೂತ ಹಕ್ಕುಗಳು ದೇಶದ ಜನರಿಗೆ ಸಿಗಬೇಕೆಂದು ಭಾರತದ ಸಂವಿಧಾನದಲ್ಲಿ ಅಳವಡಿಸಿದ್ದರು ಎಂದು ವಕೀಲ ಪುಟ್ಟಸ್ವಾಮಿಗೌಡ ತಿಳಿಸಿದರು.


ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ವಿಶ್ವ ಮಾನವ ಹಕ್ಕುಗಳ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಭಾರತದ ಸಂವಿಧಾನದ ಅನುಚ್ಚೇದ 211ರಲ್ಲಿ ಪ್ರತಿಯೊಬ್ಬರಿಗೂ ಜೀವಿಸುವ ಹಕ್ಕಿದೆ ಎಂಬುದನ್ನು ಡಾ.ಅಂಬೇಡ್ಕರ್ ಅವರು ಸೇರಿಸಿದ್ದರಿಂದಲೇ ಇಂದು ನಮ್ಮ ದೇಶದಲ್ಲಿ ಸಮಾನ ಮೂಲಭೂತ ಹಕ್ಕುಗಳು ದೊರೆಯುತ್ತಿವೆ. ಆದರೆ ಬೇರೆ ದೇಶದಲ್ಲಿ ಇರಲಿಲ್ಲ. ಇದನ್ನು ಅರಿತು ವಿಶ್ವದಲ್ಲಿ ಮಾನವ ಹಕ್ಕುಗಳು ಜಾರಿಯಾಗಿ ಎಲ್ಲರಿಗೂ ನ್ಯಾಯ ಸಿಗಬೇಕೆಂದು ಮಾನವ ಹಕ್ಕು ಆಯೋಗ ರಚಿಸಲಾಗಿದೆ. ಇಲ್ಲಿ ಮನುಷ್ಯ ತನ್ನದೇ ಆದ ಸ್ವಾತಂತ್ರ್ಯ ಹೊಂದಿರುತ್ತಾನೆ. ತಮಗಿಷ್ಟದಂತೆ ಕಾನೂನಿನಡಿ ಬದುಕಬಹುದು. ವಿಶೇಷವೆಂದರೆ ರಷ್ಯ ಮತ್ತು ಉಕ್ರೇನ್ ನಡುವೆ ನಡೆಯುತ್ತಿರುವ ಯುದ್ಧದಲ್ಲಿ ಸಾವಿರಾರು ಜನರು ಸಾವಿಗೀಡಾಗುತ್ತಿದ್ದಾರೆ. ಇದು ಮಾನವ ಹಕ್ಕುಗಳ ಉಲ್ಲಂಘನೆ ಎಂದರು.

ವಿಶ್ವ ಮಾನವ ಹಕ್ಕು ಜಾರಿಗೆ ತಂದಿರುವ ಕಾನೂನಿಗಿಂತ ಭಾರತ ದೇಶದ ಸಂವಿಧಾನದ ಅನುಚ್ಚೇದದಲ್ಲಿ ಹೆಚ್ಚಿನ ಅವಕಾಶಗಳು, ಅನುಕೂಲತೆಗಳು ಇವೆ. ಒಬ್ಬ ವ್ಯಕ್ತಿಗೆ ಸಿಗಬೇಕಾದ ಎಲ್ಲ ಹಕ್ಕುಗಳು ಕೊಡಬೇಕು. ಯಾರಿಗೂ ತಾರತಮ್ಯ ಮಾಡಬಾರದು. ಹುದ್ದೆಗಳಲ್ಲಿ ಸಮಾನ ಅವಕಾಶವಿದೆ ಎಂಬುದು ಸಂವಿಧಾನದಲ್ಲಿದೆ. ಆದರೆ ಇತ್ತೀಚಿನ ದಿನಗಳಲ್ಲಿ ರಾಜಕೀಯ ಪಕ್ಷಗಳು ತಮ್ಮ ಅನುಕೂಲಕ್ಕಾಗಿ ಸಂವಿಧಾನಕ್ಕೆ ತಿದ್ದುಪಡಿ ಮಾಡಿವೆ. ಇಂದು ನಾವೇನಾದರೂ ವಿದ್ಯಾವಂತರಾಗಿದ್ದೇವೆ, ಕೆಲಸಕ್ಕೆ ಸೇರಿದ್ದೇವೆ ಎಂದರೆ ಅದಕ್ಕೆ ಸಂವಿಧಾನ ಕಾರಣ. ಅದನ್ನು ಎಲ್ಲರೂ ಅರಿತು ಬದುಕಬೇಕಿದೆ ಎಂದರು.

ಕ್ಷೇತ್ರ ಸಮನ್ವಯಾಧಿಕಾರಿ ಶಿವಮರಿಯಪ್ಪ ಮಾತನಾಡಿದರು. ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಸದಾಶಿವಪ್ಪ, ಉಪ ಪ್ರಾಂಶುಪಾಲ ಚಂದ್ರಶೇಖರ್, ಬಿಆರ್‌ಪಿಗಳಾದ ಕುಮಾರ್, ಶಶಿಧರ್, ವಿಶ್ವನಾಥ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net