

ಭಾಲ್ಕಿ: ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಬರೆದ ಸಂವಿಧಾನದ ಮೂಲಕ ಭಾರತ ವಿಕಾಸದತ್ತ ದಾಪುಗಾಲು ಹಾಕುತ್ತಿದೆ ಎಂದು ಸಂಸದ ಸಾಗರ್ ಖಂಡ್ರೆ ಹೇಳಿದರು.
ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ಮಹಾಪರಿನಿರ್ವಾಣ ದಿನ ನಿಮಿತ್ತ ಸಮಿತಿ ಹಾಗೂ ದಲಿತ ಪರ ಸಂಘಟನೆಗಳ ಸಹಯೋಗದಲ್ಲಿ ಶುಕ್ರವಾರ ಸಂಜೆ ಆಯೋಜಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್ ಅವರ ೬೮ನೇ ಮಹಾಪರಿನಿರ್ವಾಣ ದಿವಸ ಹಾಗೂ ಶೃದ್ಧಾ ಸುಮನ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಶಿಕ್ಷಣ, ಸಂಘಟನೆ, ಹೋರಾಟದ ಮೂಲಕ ಅಂಬೇಡ್ಕರ್ ಸಮ ಸಮಾಜ ಸ್ಥಾಪಿಸಿದರು. ಯುವ ಪೀಳಿಗೆ ಸತತ ಪರಿಶ್ರಮದ ಮೂಲಕ ಪ್ರಗತಿ ಸಾಧಿಸಲು ಅಂಬೇಡ್ಕರ್ ಅವರ ತತ್ವ ಸಿದ್ಧಾಂತಗಳು ಸ್ಫೂರ್ತಿದಾಯಕವಾಗಿವೆ.ದುಡ್ಡು, ಅಧಿಕಾರ ಶಾಶ್ವತವಲ್ಲ ಎಂದರು.
ಭಾಲ್ಕಿ ಹಿರೇಮಠದ ಪೀಠಾಧಿಪತಿ ಶ್ರೀ ಗುರುಬಸವ ಪಟ್ಟದ್ದೇವರು ಮಾತನಾಡಿ, ಬಸವಣ್ಣನವರ ವಚನ ಸಾಹಿತ್ಯಕ್ಕೆ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ನೀಡಿದ ಸಂವಿಧಾನಕ್ಕೆ ವಿಶ್ವಮಾನ್ಯತೆ ದೊರೆಯುತ್ತಿರುವುದು ಖುಷಿಯ ಸಂಗತಿ. ಸರ್ವಾಂಗೀಣ ವಿಕಾಸಕ್ಕಾಗಿ ಯುವಕರು ದುಶ್ಚಟಕ್ಕೆ ಮುಕ್ತಿ ಹೇಳಬೇಕು. ಯುವ ಮುಖಂಡ ವಿಲಾಸ ಮೋರೆ ಮತ್ತು ತಂಡದವರು ಅಂಬೇಡ್ಕರ್ ತತ್ವ ಅಳವಡಿಸಿಕೊಂಡು ಮಾಡುವ ಕಾರ್ಯಗಳು ಇತರರಿಗೆ ಮಾದರಿಯಾಗಿವೆ ಎಂದು ಹೇಳಿದರು.
ಸಾನ್ನಿಧ್ಯವಹಿಸಿದ್ದ ಅಣದೂರಿನ ಪೂಜ್ಯ ಭಂತ್ಯೆ ಜ್ಞಾನ ಸಾಗರ ಅವರು ಅಂಬೇಡ್ಕರ್ ಕುರಿತು ಸ್ವರಚಿತ ಕವನಗಳು ಗಾಯನ ಮಾಡಿ ಸಭಿಕರನ್ನು ಮಂತ್ರಮುಗ್ಧರನ್ನಾಗಿ ಮಾಡಿದರು.
ಕೆಕೆಆರ್‌ಟಿಸಿ ಮಾಜಿ ನಿರ್ದೇಶಕ ವಿಲಾಸ ಮೋರೆ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪ್ರಾಂಶುಪಾಲರ ಸಂಘದ ಉಪಾಧ್ಯಕ್ಷ ಅಶೋಕ ರಾಜೋಳೆ ವಿಶೇಷ ಉಪನ್ಯಾಸ ನೀಡಿದರು.
ಗೌತಮ ಕಾಂಬಳೆ ರಚಿಸಿದ ವೈಭವ ಗ್ರಂಥವನ್ನು ಪೀಠಾಧಿಪತಿ ಶ್ರೀ ಗುರುಬಸವ ಪಟ್ಟದ್ದೇವರು ಬಿಡುಗಡೆಗೊಳಿಸಿದರು.
ನಾಗಪುರದ ಸಂಗೀತ ಕಲಾವಿದರ ತಂಡದ ದೀಪಾಲಿ ಇಂಗಳೆ ಮತ್ತು ವಿಕಾಸರಾಜ ಗೋಸಾಯಿ ಅಂಬೇಡ್ಕರ್ ಕುರಿತು ಸಾದರ ಪಡಿಸಿದರು. ಮಾರುತಿರಾವ ಭಾವಿಕಟ್ಟೆ ಮತ್ತು ಕೈಲಾಸ ಭಾವಿಕಟ್ಟೆ ಅವರ ದಿಗಲಬಾಜಿ ಎಲ್ಲರ ಗಮನ ಸೆಳೆಯಿತು.
ಪುರಸಭೆ ಅಧ್ಯಕ್ಷೆ ಶಶಿಕಲಾ ಅಶೋಕ, ಉಪಾಧ್ಯಕ್ಷ ವಿಜಯಕುಮಾರ ರಾಜಭವನ, ಬಿಎಸ್‌ಐ ಅಧ್ಯಕ್ಷ ವಿಜಯಕುಮಾರ ಗಾಯಕವಾಡ, ಆರ್‌ಎಫ್‌ಒ ಮಹೇಂದ್ರಕುಮಾರ ಮೋರೆ, ಪುರಸಭೆ ಮಾಜಿ ಅಧ್ಯಕ್ಷ ಅಶೋಕ ಗಾಯಕವಾಡ, ಸದಸ್ಯ ರಾಹುಲ ಪೂಜಾರಿ, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಜಿಲ್ಲಾ ಉಪಾಧ್ಯಕ್ಷ ಮಾರುತಿ ಭಂಗಾರೆ, ಪ್ರಥಮ ದರ್ಜೆ ಗುತ್ತಿಗೆದಾರ ಶಿವು ಭಂಗಾರೆ,ಪ್ರಮುಖರಾದ ಶಿವುಕುಮಾರ ಮೇತ್ರೆ, ಧನರಾಜ ಕುಂದೆ, ಜೈಪಾಲ ಬೋರಾಳೆ, ಪ್ರದೀಪ ಗುಪ್ತಾ, ಬುದ್ಧಾನಂದ ಶಿಂದೆ, ಉದಯಕುಮಾರ ಕುಂದೆ, ಶಾಂತಕುಮಾರ ನಾಟೇಕರ್, ಅನೀಲ ಸೂರ್ಯವಂಶಿ ಇತರರಿದ್ದರು.
ಡಿಎಸ್‌ಎಸ್ ಅಧ್ಯಕ್ಷ ಸಂಜೀವಕುಮಾರ ಭಾವಿಕಟ್ಟೆ ಸ್ವಾಗತಿಸಿದರು. ದಲಿತ ಪ್ಯಾಂಥರ ಅಧ್ಯಕ್ಷ ಕೈಲಾಸ ಭಾವಿಕಟ್ಟೆ ನಿರೂಪಣೆ ಮಾಡಿದರು. ಪುರಸಭೆ ಸದಸ್ಯ ಓಂಕಾರ ಮೋರೆ ವಂದಿಸಿದರು.