

ಆಲೂರು: ಅಸ್ಪಶ್ಯರು, ಅಸಾಯಕರು, ಹಿಂದುಳಿದ ಮತ್ತು ಶೋಷಿತರ ಶೌರ್ಯದ ಸಂಕೇತವೇ ಕೋರೆಗಾಂವ್ ಯುದ್ಧ ಎಂದು ಶಾಸಕ ಸಿಮೆಂಟ್ ಮಂಜುನಾಥ್ ಹೇಳಿದರು.
ಆಲೂರು ಪಟ್ಟಣದಲ್ಲಿ ಭೀಮಾ ಕೋರೆಗಾಂವ್ ವಿಜಯೋತ್ಸವ ಸಮಿತಿಯಿಂದ ಆಯೋಜಿಸಿದ್ದ 206ನೇ ಭೀಮಾ ಕೋರೆಗಾಂವ್ ವಿಜಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಕೋರೆಗಾಂವ್‌ನಲ್ಲಿ ನಡೆದ ಹಿಂಸೆಯನ್ನು ವಿರೋಧಿಸಿ ಹಾಗೂ ಅಲ್ಲಿನ ದಬ್ಬಾಳಿಕೆಯನ್ನು ಮೆಟ್ಟಿನಿಂತು ಜಯಗಳಿಸಿದ್ದ ಪರಾಕ್ರಮಿಗಳನ್ನು ನೆನೆಯಲು ಕಾರ್ಯಕ್ರಮವನ್ನು ನಡೆಸಿಕೊಂಡು ಬರಲಾಗುತ್ತಿದೆ. ಶೈಕ್ಷಣಿಕ ಕ್ರಾಂತಿಯಿಂದ ಎಲ್ಲ ವರ್ಗಕ್ಕೂ ಸಾಂವಿಧಾನಿಕ ಹಕ್ಕುಗಳು ದಕ್ಕುತ್ತಿರುವುದು ಡಾ.ಬಿ.ಆರ್.ಅಂಬೇಡ್ಕರ್ ಅವರ ಬಹುದೊಡ್ಡ ಕೊಡುಗೆಯಾಗಿದೆ. ಸಂವಿಧಾನದಿಂದ ದೇಶದ ದಲಿತರು ಧನ್ಯ ಸ್ಥಿತಿಯಲ್ಲಿ ಬದುಕುತ್ತಿದ್ದಾರೆ ಎಂದು ನುಡಿದರು.
ಭಾರತೀಯ ಪರಿವರ್ತನ ಸಂಘದ ರಾಜ್ಯಾಧ್ಯಕ್ಷ ಪ್ರೊ.ಹರಿರಾಮ್ ಮಾತನಾಡಿ, ಪೇಶ್ವೆಯರ ವಿರುದ್ಧದ ಹೋರಾಟದಲ್ಲಿ ಮಹಾರ್ ಸೈನಿಕರು ಇತಿಹಾಸ ಸೃಷ್ಟಿಸಿದರು. ಆ ಯುದ್ಧದಲ್ಲಿ ಪೇಶ್ವೆಗಳು ಬರೀ ಸೋಲಲಿಲ್ಲ, ಮಹಾರಾಷ್ಟ್ರದಲ್ಲಿ ಅವರ ಉತ್ತರದಾಯಿತ್ವವೇ ಅಂತ್ಯವಾಯಿತು ಎಂದರು.
ತಾಲೂಕಿನ ನಿಡನೂರು ಗ್ರಾಮದಿಂದ ಆಲೂರು ಪಟ್ಟಣದವರೆಗೆ ಬೈಕ್ ರ‌್ಯಾಲಿ ನಡೆಸಲಾಯಿತು. ತಹಸೀಲ್ದಾರ್ ನಂದಕುಮಾರ್, ಬಿಇಒ ಕೃಷ್ಣೇಗೌಡ, ಭೀಮಾ ಕೋರೆಗಾಂವ್ ಸಮಿತಿ ಅಧ್ಯಕ್ಷ ರಘು, ಕಾಂಗ್ರೆಸ್ ಮುಖಂಡರಾದ ಡಿ.ಸಿ.ಸಣ್ಣಸ್ವಾಮಿ, ಮುರಳಿ ಮೋಹನ್, ಬಸವರಾಜ್ ಗೇಕರವಳ್ಳಿ, ದೇವರಾಜು, ಅಜ್ಜೆನಹಳ್ಳಿ ರಂಗಯ್ಯ, ತಾಲೂಕು ಎಸ್ಸಿ/ಎಸ್ಟಿ ಘಟಕದ ಅಧ್ಯಕ್ಷ ರವಿ ಕಾರ್ಜುವಳ್ಳಿ, ದಲಿತ ಮುಖಂಡರಾದ ಜಗದೀಶ್, ರವಿ ನಿಲುವಾಗಿಲು, ಹರೀಶ್ ಭರತವಳ್ಳಿ, ನಂದೀಶ್, ವಿಶ್ವಾಸ್, ಸಾಹಿತಿ ಗುರುಮೂರ್ತಿ, ಮಂಜು ಹೊಸಳ್ಳಿ, ಹರೀಶ್ ಕಾರಿಗನಹಳ್ಳಿ, ಅಜ್ಜೇನಹಳ್ಳಿ ಲೋಕೇಶ್, ಲೋಹಿತ್ ಹಸಗನೂರು ಇತರರಿದ್ದರು.