ಸಂವಿಧಾನದತ್ತ ನಿಮ್ಮ ಹಕ್ಕು ಪಡೆಯಿರಿ: ಸಿದ್ದಲಿಂಗು

1
ಬೋಗಾಧಿಯಲ್ಲಿರುವ ಸಮಾಜಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರ ಬಾಲಕಿಯರ ವಿದ್ಯಾರ್ಥಿನಿ ನಿಲಯ (2)ದಲ್ಲಿ ಬುಧವಾರ ಆಯೋಜಿಸಿದ್ದ ಅಂತಿಮ ವರ್ಷದ ಪದವಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭವನ್ನು ಸಿದ್ದಲಿಂಗು ಉದ್ಘಾಟಿಸಿದರು. ವಸಂತಕುಮಾರ್ ತಿಮಕಾಪುರ, ಪ್ರಸನ್ನಕುಮಾರ್, ರೇವಣ್ಣ. ಸೋಸಲೆ ಸಿದ್ದರಾಜು, ಪವಿತ್ರಾ, ಮಲ್ಲಿಕಾರ್ಜುನ, ದೀಪ ಇತರರು ಇದ್ದರು.
Published on

ಮೈಸೂರು: ಅಂಬೇಡ್ಕರ್ ಆಶಯದಂತೆ ಎಲ್ಲರೂ ಶಿಕ್ಷಣ ಪಡೆದು ಸಂವಿಧಾನದ ಮೂಲಕ ನಿಮ್ಮ ಹಕ್ಕುಗಳನ್ನು ಪಡೆದು, ಗುರಿ ತಲುಪಬೇಕು ಎಂದು ಮೈಸೂರು ತಾಲೂಕು ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಸಿದ್ದಲಿಂಗು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಬೋಗಾಧಿಯಲ್ಲಿರುವ ಸಮಾಜಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರ ಬಾಲಕಿಯರ ವಿದ್ಯಾರ್ಥಿನಿ ನಿಲಯ (2)ದಲ್ಲಿ ಬುಧವಾರ ಆಯೋಜಿಸಿದ್ದ ಅಂತಿಮ ವರ್ಷದ ಪದವಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ನಿಮ್ಮನ್ನು ಬೇರೆಯವರಿಗೆ ಹೋಲಿಕೆ ಮಾಡಿಕೊಳ್ಳದೇ, ಕೀಳಿರಿಮೆಬಿಟ್ಟು ಶ್ರದ್ಧೆಯಿಂದ ವಿದ್ಯಾಭ್ಯಾಸ ಮಾಡಬೇಕು. ಗುರಿ ಇಟ್ಟುಕೊಂಡು ಸಾಧನೆ ಮಾಡಿ ಗುರು ಹಿರಿಯರು, ತಂದೆ, ತಾಯಿಗಳಿಗೆ ಕೀರ್ತಿ ತರಬೇಕು. ವಿದ್ಯೆ ಸಂಸ್ಕಾರವನ್ನು ಕಲಿಸುತ್ತದೆ. ಆದ್ದರಿಂದ ಅಂಬೇಡ್ಕರ್ ಅವರ ಆಶಯದಂತೆ ವಿದ್ಯಾವಂತರಾಗಿ ಹೆಚ್ಚು ಪುಸ್ತಕಗಳನ್ನು ಓದಿ ನಿಮ್ಮ ಜ್ಞಾನವನ್ನು ವೃದ್ಧಿಸಿಕೊಳ್ಳಿ ಎಂದರು.
ಕೃಷಿ ವಿಜ್ಞಾನಿ ವಸಂತಕುಮಾರ್ ತಿಮಕಾಪುರ ಮಾತನಾಡಿ, ಸಮಾಜದಲ್ಲಿ ಸಮಾನತೆ ಪಡೆಯಬೇಕಾದರೆ ವಿದ್ಯೆ ಮತ್ತು ಜ್ಞಾನವಿರಬೇಕು. ಅಂಬೇಡ್ಕರ್ ಅವರಿಗೆ ಇಡೀ ಪ್ರಪಂಚದಲ್ಲಿಯೇ ಹೆಚ್ಚು ಗೌರವ ಕೊಡುತ್ತಿದ್ದದ್ದು ಅವರು ಓದಿದ ವಿದ್ಯೆ ಮತ್ತು ಅವರಿಗಿದ್ದ ಅಪಾರವಾದ ಜ್ಞಾನದಿಂದ ಎಂದು ಹೇಳಿದರು.
ವಿದ್ಯಾರ್ಥಿಗಳು ಓದುವ ಕನಸು ಇಟ್ಟುಕೊಳ್ಳಬೇಕು. ಮಹಾನ್ ವ್ಯಕ್ತಿಗಳ ಜೀವನ ಚರಿತ್ರೆಗಳನ್ನು ಹೆಚ್ಚಾಗಿ ಓದಬೇಕು. ತಾಯಿ ಭಾಷೆ ಕನ್ನಡದ ಬಗ್ಗೆ ಅಭಿಮಾನ ಪ್ರೀತಿ, ಗೌರವ ಇರಬೇಕು. ಇದರ ಜೊತೆಗೆ ಸಂಪರ್ಕ ಭಾಷೆಯಾಗಿ ಇಂಗ್ಲೀಷ್ ಕಲಿಯಬೇಕು. ಇದರಿಂದ ನಿಮ್ಮಲ್ಲಿ ಆತ್ಮವಿಶ್ವಾಸ ಹೆಚ್ಚುತ್ತದೆ ಎಂದು ಹೇಳಿದರು.
ಆಂಗ್ಲಭಾಷಾ ಪ್ರಾಧ್ಯಾಪಕ ಪ್ರಸನ್ನಕುಮಾರ್, ವಾರ್ಡನ್ ಸಂಘದ ಅಧ್ಯಕ್ಷ ರೇವಣ್ಣ. ಕರಾಟೆ ತರಬೇತುದಾರ ಸೋಸಲೆ ಸಿದ್ದರಾಜು ಮಾತನಾಡಿದರು. ಕಾರ್ಯಕ್ರಮದಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿನಿಯರು, ಆಟೋಟ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.
ನಿಲಯಪಾಲಕರಾದ ಪವಿತ್ರಾ, ಮಲ್ಲಿಕಾರ್ಜುನ, ದೀಪ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net