

ಹಾಸನ: ನಾವು ಹುಟ್ಟಿನಿಂದ ಸಾಯುವವರೆಗೂ ನಮಗೆ ಸಂವಿಧಾನ ಮೂಲಭೂತ ಹಕ್ಕುಗಳನ್ನು ನೀಡಿದೆ. ಅದನ್ನು ನಾವು ಕಾಪಾಡಿಕೊಳ್ಳಬೇಕು ಮತ್ತು ಬೇರೆಯವರ ಹಕ್ಕುಗಳನ್ನು ಗೌರವಿಸಬೇಕು. ಆಗ ಮಾತ್ರ ಸಮಾಜದಲ್ಲಿ ನೆಮ್ಮದಿಯ ಜೀವನ ಸಾಧ್ಯ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರಾದ ಬಿ.ಕೆ. ರವಿಕಾಂತ್ ತಿಳಿಸಿದರು.
ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಭವನದಲ್ಲಿ ಮಾನವ ಹಕ್ಕುಗಳ ಜಿಲ್ಲಾ ಘಟಕವನ್ನು ಬುಧವಾರ ಉದ್ಘಾಟಿಸಿ ಮಾತನಾಡಿದ ಅವರು, ನಾವು ನೆಮ್ಮದಿಯಾಗಿ ಜೀವಿಸಲು ಸಂವಿಧಾನ ಬೇಕಾದಷ್ಟು ಹಕ್ಕುಗಳನ್ನು ನೀಡಿದೆ. ಈ ಹಕ್ಕುಗಳ ಮೂಲಕ ನಾವು ಶಾಂತಿಯುತವಾಗಿ, ತೃಪ್ತಿದಾಯಕವಾಗಿ ಜೀವಿಸಬಹುದು. ನಮ್ಮ ಹಕ್ಕುಗಳನ್ನು ಯಾರಾದರೂ ಉಲ್ಲಂಘನೆ ಮಾಡಿದರೆ ಅವರ ವಿರುದ್ಧ ಕಾನೂನು ಪ್ರಕಾರ ಕ್ರಮ ಕೈಗೊಳ್ಳುವ ಹಕ್ಕು ಕೂಡ ನಮಗೆ ಇದೆ ಎಂದರು.
ಶಾಲಾ- ಕಾಲೇಜುಗಳಲ್ಲಿ ನಡೆಯುವ ರ‌್ಯಾಗಿಂಗ್ ಪಿಡುಗನ್ನು ಸಹಿಸಿಕೊಂಡು ಇರುವ ಅಗತ್ಯವಿಲ್ಲ. ವಿದ್ಯಾರ್ಥಿ-ವಿದ್ಯಾರ್ಥಿನಿಯರು ಭಯ ಬಿಟ್ಟು ಇದರ ಬಗ್ಗೆ ಮೇಲ್ವಿಚಾರಕರ ಬಳಿ ದೂರು ನೀಡಿ ಕ್ರಮ ಕೈಗೊಳ್ಳುವಂತೆ ಮಾಡಬಹುದು. ಅದನ್ನು ಎಲ್ಲ ವಿದ್ಯಾರ್ಥಿಗಳು ಅರಿತುಕೊಳ್ಳಬೇಕು ಎಂದು ಹೇಳಿದರು.
ಮಾನವ ಹಕ್ಕುಗಳ ಒಕ್ಕೂಟದ ಸಂಸ್ಥಾಪಕ ರಾಜ್ಯಾಧ್ಯಕ್ಷ ಪುನೀತ್ ಗೌಡ ಮಾತನಾಡಿ, ನಾವು ಎಷ್ಟೇ ಆಸ್ತಿ ಗಳಿಸಿದರೂ ಕೊನೆಗೆ ಯಾವುದು ನಮ್ಮ ಜತೆ ಬರುವುದಿಲ್ಲ. ಅಂತಿಮವಾಗಿ ಉಳಿಯುವುದು ನಾವು ಮಾಡಿರುವ ಒಳ್ಳೆಯ ಕೆಲಸಗಳು ಮಾತ್ರ. ಅದೇ ಅಂತಿಮ ಸತ್ಯ. ಆದ್ದರಿಂದ ಯಾರಾದರೂ ತೊಂದರೆಗೆ ಸಿಲುಕಿದವರ ಬಗ್ಗೆ ತಾತ್ಸಾರ ತೋರದೆ ಸಹಾಯ ಹಸ್ತ ಚಾಚಿ. ನಿಮಗೆ ತೊಂದರೆಯಾದಲ್ಲಿ ನಮ್ಮ ಒಕ್ಕೂಟದ ಸದಸ್ಯರ ಬಳಿ ಬನ್ನಿ. ನಿಮ್ಮ ಸಮಸ್ಯೆ ಪರಿಹಾರಕ್ಕಾಗಿ ಒಕ್ಕೂಟ ಸಿದ್ಧವಿದೆ ಎಂದು ಹೇಳಿದರು.
ಇದೇ ವೇಳೆ ನ್ಯಾ. ಬಿ.ಕೆ. ರವಿಕಾಂತ್ ಅವರು, ಮಾನವ ಹಕ್ಕುಗಳ ಒಕ್ಕೂಟದ ಪದಾಧಿಕಾರಿಗಳಿಗೆ ಗುರುತಿನ ಚೀಟಿ ವಿತರಣೆ ಮಾಡಿದರು.
ಕಾರ್ಯಕ್ರಮದಲ್ಲಿ ಒಕ್ಕೂಟದ ಜಿಲ್ಲಾಧ್ಯಕ್ಷ ಯಲಗುಂದ ಶಾಂತಕುಮಾರ್, ಜಿಲ್ಲಾ ಸರ್ಜನ್ ಕೃಷ್ಣಮೂರ್ತಿ, ಜಿಲ್ಲಾ ನೌಕರರ ಸಂಘದ ಅಧ್ಯಕ್ಷ ಈ. ಕೃಷ್ಣೇಗೌಡ, ಮಾನವ ಹಕ್ಕುಗಳ ರಾಜ್ಯ ಖಜಾಂಚಿ ಪ್ರವೀಣ್ ಬಿಡಾರ್ ಮತ್ತು ನಿವೃತ್ತ ಶಿಕ್ಷಕ ಬಸವರಾಜು, ಎಸ್.ಡಿ. ರಂಗಸ್ವಾಮಿ ಉಪಸ್ಥಿತರಿದ್ದರು.